ರಾಜ್ಯ, ದೇಶ, ಜಗತ್ತಿನ ಮೇಲೆ ಪರಿಣಾಮ

| ಮಹಾಬಲಮೂರ್ತಿ ಕೊಡ್ಲೆಕೆರೆ

ಇಂದಿನ ರಕ್ತಚಂದ್ರ ಪೂರ್ಣಗ್ರಹಣದ ಬಗೆಗೆ ನಾನಾ ವಿಶ್ಲೇಷಣೆಗಳು ಬಂದಿವೆ. ಆದರೂ, ಇನ್ನಷ್ಟು ತಿಳಿಯಲು ಕಾತರ, ತಹತಹ ಇದ್ದೇ ಇದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಮಲೇಷ್ಯಾ, ಇಂಡೋನೇಷ್ಯಾ ಇತ್ಯಾದಿ ಹೆಚ್ಚಾಗಿ ಏಷ್ಯಾ ಖಂಡದ ಬಾನಂಗಳದಲ್ಲಿ, ಕಳ್ಳದಾನವನಾದ ಕೇತುವು, ನಮ್ಮ ಬೆಳಕಿನ ಗೋಲವಾದ, ಭೂಮಿಯ ಜೀವಜಾಲದ ಅಮೃತನಿಧಿಯಾದ, ಮಾನಸಿಕ ವಿಪ್ಲವಗಳಿಗೆ, ಆನಂದ, ಸಂಭ್ರಮ, ಮತಿಭ್ರಮಣೆ, ಉದ್ರೇಕ, ಉನ್ಮಾದ, ಜ್ಞಾನ, ತರ್ಕ, ಮೀಮಾಂಸೆಗಳ ಮಂಥನಗಳಿಗಾಗಿನ ಶಕ್ತಿ ಇತ್ಯಾದಿ ಒದಗಿಸುವ, ರಾಜಯೋಗವನ್ನು ದಯಪಾಲಿಸುವಲ್ಲಿ ತನ್ನದೇ ಆದ ಪೂರ್ಣಪ್ರಮಾಣದ ಬೆಳಕು ಸೌರಭ ಒದಗಿಸುವ ಚಂದ್ರನನ್ನು ಹಿಡಿದು ಬಾಯಲ್ಲಿ ಮುಕ್ಕಿ ನೊಣೆಯುವ ಕೆಲಸಕ್ಕೆ ಧಾವಿಸುತ್ತಾನೆ. ಇದು ಕತೆಯಾದರೂ ನಮ್ಮ ಆರ್ಷೆಯ ಭಾರತೀಯ ಜ್ಯೋತಿಷ ವಿಜ್ಞಾನ ಪರಂಪರೆ ಕತೆಯ ಮೂಲಕ ನೆರಳು ಬೆಳಕಿನಾಟದ ಕಾರಣದಿಂದ ಉಂಟಾಗುವ ತೀವ್ರತರವಾದ ಪರಿಣಾಮಗಳ ಬಗೆಗೂ ವೈರುಧ್ಯಗಳಿರದ ಧ್ವನಿಯಲ್ಲಿ ಹೇಳುತ್ತದೆ (ದುಬೈ, ಆಸ್ಟ್ರೇಲಿಯಾ, ಸಿಂಗಾಪುರದಲ್ಲೂ ಗ್ರಹಣ ಕಾಣಿಸಿಕೊಳ್ಳುತ್ತದೆ. ಅಂದರೆ ಆ ಮೂಲಕ ಗ್ರಹಣದ ಕರಿಯನ್ನು ಏಷ್ಯಾದಾಚೆಗೂ ಗ್ರಹಣದ ಕರಿನೆರಳಿನಿಂದಾಗುವ ಸಂಭಾವ್ಯ ಕೆಡುಕುಗಳಿಗೆ ಕಾರಣವಾಗುವ ವಿಚಾರವನ್ನು ಜಗತ್ತಿನ ಭಾಗಗಳಿಗೆ ರವಾನಿಸುತ್ತದೆ). ಮುಖ್ಯವಾಗಿ ಅಮೆರಿಕ, ಯುರೋಪ್​ಗಳಿಗೂ ನೇರವಾದ ರೀತಿಯಲ್ಲಿರದೆ, ಒಂದು ರೀತಿಯ ದ್ರಾವಿಡ ಪ್ರಾಣಾಯಾಮದ ರೀತಿಯಲ್ಲಿ ರವಾನಿಸುತ್ತದೆ. ಜಾಗತೀಕರಣದಿಂದಾಗಿ ಪ್ರಸ್ತುತ ಕಾಲದಲ್ಲಿ ಇಡೀ ವಿಶ್ವವೇ ಪ್ರಾಪಂಚಿಕ ಗ್ರಾಮವಾಗಿ ಕಿರಿದಾಗಿದೆ. ಹೀಗಾಗಿ, ಏಷ್ಯಾದ ಸಂಕಟಗಳು, ಇತರ ಖಂಡಗಳ ಸಂಕಟಗಳೂ ಆಗಿ ನಿಲ್ಲುತ್ತವೆ. ತಲ್ಲಣಗಳಾಗಿ ಚಿಮ್ಮುತ್ತವೆ.

ಆದಿಮಾಯೆಯು ನಡೆಸಿದ ಮಹಾಸ್ಪೋಟ (ಆಧುನಿಕ ವಿಜ್ಞಾನ ಇದನ್ನು Big bang ಸೂತ್ರದಲ್ಲಿ ಕಟ್ಟಿಕೊಡುತ್ತದೆ. ಆಗ ಉಂಟಾದ ಧೂಮ (ಬಹುಶಃ ಹೀಲಿಯಂ ಎಂದು ಗುರುತಿಸಲ್ಪಡುವ)ದಿಂದ ಹರಿಹರ ಬ್ರಹ್ಮಾದಿಗಳು ಕ್ರಮವಾಗಿ ಧೂಮವನ್ನು, ಆಕಾರಗಳನ್ನು, ನಿಶ್ಚಿತವಾಗಿ ಇದೇ ಎನ್ನುವ ಸ್ಪಷ್ಟಚಹರೆಗಳನ್ನು ಗುಣರೂಪದಲ್ಲಿ, ಭೌತಿಕ, ರಾಸಾಯನಿಕ ಸ್ವರೂಪದಲ್ಲಿ ದೇವ, ದಾನವ, ಯಕ್ಷ, ಗಂಧರ್ವ, ಖಗಮೃಗ, ಉರಗ, ಮಾನವಾದಿ ಸ್ವರೂಪಗಳಿಗೆ ನಾಂದಿ ಇರಿಸಿ, ಮಾನವನಿಗಿಂತ ಮೊದಲಾಗಿ ಹರಿತ್ತು, ಹಸಿರುಗಿಡ, ಮೂಲಿಕೆಗಳಿಗೆ ಸೃಷ್ಟಿ ನೀಡಿದರು ಎಂದು ವಿಷ್ಣು ಪುರಾಣ ಹೇಳುತ್ತದೆ. ನಮಗೆ ಆದಿಮಾಯೆ ಎಂದರೆ ತಿಳಿಯುತ್ತದೆ.

Big bang ಸೂತ್ರ ಕಠಿಣವಾಗುತ್ತದೆ. ಪರಿಣಾಮದಲ್ಲಿ ಇವೆರಡೂ ಒಂದೇ. ಯಾರು, ಯಾತಕ್ಕಾಗಿ ಈ ಚೋದ್ಯಕ್ಕೆ ಕಾರಣರು? ನಿನ್ನೆಯೇ ಇಲ್ಲದ ಇಂದು ಹೇಗೆ ರೂಪುಗೊಂಡಿತು ಎನ್ನುವುದನ್ನು ವಿಜ್ಞಾನ ತಿಳಿಸುವ ಜಟಿಲತೆಗಿಂತ ಸರಳವಾಗಿ ವಿಷ್ಣು ಪುರಾಣ ವೈಜ್ಞಾನಿಕವಾಗಿಯೇ ಹೇಳುತ್ತದೆ.

ಹೀಗಾಗಿ, ಪುರಾಣದ ಪ್ರಕಾರ ಪ್ರತ್ಯೂಷ, ತ್ರಿಶೌಲ, ಕಶ್ಚೂಲ ಎಂಬ ಧಾತುಗಳಿಗೆ- ಇವು ಜೀವಜಾಲಕ್ಕೆ ಬಹಳವೇ ಅಗತ್ಯವಾಗುವ ಘಟಕಗಳು- ಗ್ರಹಣದ ಕರಿನೆರಳು ಧಕ್ಕೆ ತಂದು ಆ ಕ್ಷಣದ ಚಿಕ್ಕ ವಿಷಬೀಜ ಬೆಳೆದು ಹಲವು ಜೀವ (ಮನುಷ್ಯನನ್ನೂ ಸೇರಿಸಿ ಸಕಲ ಜೀವ ಚರಾಚರಗಳಿಗೆ) ತೊಂದರೆ ತರುತ್ತದೆ ಎಂದು ಹೇಳುತ್ತದೆ. ಇದು ಉತ್ಪ್ರೇಕ್ಷೆ ಅಲ್ಲ. ಉತ್ಪ್ರೇಕ್ಷೆ ಅಲ್ಲ ಎಂದು ಗುರುತಿಸುವ ಸಂಶೋಧನೆಗಳನ್ನು ಆಧುನಿಕ ವಿಜ್ಞಾನ ಇನ್ನೂ ನಡೆಸಬೇಕಾಗಿದೆ. ಗ್ರಹಣದ ಸಂದರ್ಭದಲ್ಲಿ ಹೆಣ್ಣು-ಗಂಡು ಕೂಡಬಾರದು ಎಂದು ಭಾರತೀಯ ಜ್ಯೋತಿಷ ವಿಜ್ಞಾನ ಸಾವಿರಾರು ವರ್ಷಗಳ ಹಿಂದೇ ಹೇಳಿದೆ. ಮಾನವರ ಇಂಥ ಕ್ರಿಯೆಯ ಪರಿಣಾಮ ಏನು ಎಂಬುದನ್ನು ಆಧುನಿಕ ವಿಜ್ಞಾನ ಪ್ರಯೋಗಕ್ಕೆ ಒಡ್ಡುತ್ತಿದೆ.

ಗ್ರಹಣದ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿದ್ಯಮಾನಗಳು ತಾಪತ್ರಯಕಾರಕವೇ?

ಹೌದು, ತಾಪತ್ರಯಕಾರಕ. ಭೂತಾನ್ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ, ಮಿಸುಕಾಟಗಳೊಂದಿಗೆ ಅತಂತ್ರವಾಗುವ ನೇಪಾಳ ಹಾಗೂ ಶ್ರೀಲಂಕಾಗಳ ವಿದ್ಯಮಾನ ಹೆಚ್ಚು ಸ್ಪಷ್ಟ. ಬದಲಾವಣೆಗೊಳ್ಳಲಿರುವ ಪ್ರಜಾಸತ್ತಾತ್ಮಕ ಸರ್ಕಾರವನ್ನು ಪಾಕಿಸ್ತಾನ ನಿರೀಕ್ಷಿಸಿದೆಯಾದರೂ, ಪ್ರಜಾಸತ್ತಾತ್ಮಕ ರೂಪುರೇಷೆಗಳು ನಿರಂತರವಾದ ರಕ್ತರಂಜಿತ ಕ್ರಾಂತಿಗೆ ಮುಂದಾಗುವ ಮಿಲಿಟರಿ ಹುನ್ನಾರಗಳಿಂದಾಗಿ ನಿರಂಕುಶ ಆಡಳಿತಕ್ಕೆ ಒಳಪಡುವ ಸಾಧ್ಯತೆ ಅಧಿಕ. ಇಮ್ರಾನ್ ಖಾನ್, ಬಿಲಾವಲ್ ಭುಟ್ಟೊ ಜೀವಗಂಡಾಂತರ ಎದುರಿಸುವ ಸಾಧ್ಯತೆ ಹೆಚ್ಚು. ಇಮ್ರಾನ್ ಜಯಗಳಿಸುವ ಸೂಚನೆ ಇದ್ದರೂ ಚಂದ್ರಗ್ರಹಣದ ಸಂಘರ್ಷ ಅನೇಕ ದುಬಾರಿ ಬೆಲೆಯನ್ನು ತೆರಬೇಕಾದ ಸ್ಥಿತಿಗೆ ಅವರನ್ನು ತಳ್ಳುತ್ತದೆ. ಅಮೆರಿಕದ ಒತ್ತಡದಿಂದಾಗಿ ಭಾರತ, ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ನೇರ ಹಣಾಹಣಿಗೆ ನುಗ್ಗಬೇಕಾದ ಸಂದರ್ಭ ಅಧಿಕ.

ಕರ್ನಾಟಕ ಹೇಗೆ? ಎತ್ತ?

ಇಲ್ಲಿನ ಮುಖ್ಯ ನಾಯಕರುಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಪರಮೇಶ್ವರ್, ಖರ್ಗೆ ಮುಂತಾದವರ ಜನ್ಮಕುಂಡಲಿ ಲಭ್ಯವಿಲ್ಲದ ಸ್ಥಿತಿಗತಿಯಲ್ಲಿ ವಿಶ್ಲೇಷಣೆ ಕಷ್ಟಕರ. ಆದರೆ ಪ್ರಭಾವಿಯಾಗುತ್ತ ಹೊರಟಿರುವ ಸಿದ್ದರಾಮಯ್ಯನವರನ್ನು ಸೂಕ್ತವಾಗಿ ನಿಯಂತ್ರಿಸಿ ನರೇಂದ್ರ ಮೋದಿಯವರಿಗೆ ಬಲತುಂಬಲು ಯಡಿಯೂರಪ್ಪನವರಿಗೆ ಹೆಚ್ಚಿನ ಬಲ ಸ್ಪಷ್ಟ. ಈಶ್ವರಪ್ಪ ಹಾಗೂ ಯಡಿಯೂರಪ್ಪ ಒಗ್ಗೂಡಿದರೆ ಬಿಜೆಪಿಗೆ ಅಧಿಕಲಾಭ. ಸಿಕ್ಕ ಮುಖ್ಯಮಂತ್ರಿ ಪಟ್ಟವನ್ನು ಕುಮಾರಸ್ವಾಮಿ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು. ನೆರೆ, ಒಂದೆಡೆಯ ನೀರಿನ ಬರ, ನೆರೆರಾಜ್ಯಗಳ ಒತ್ತಡ (ನೀರಿನ ವಿಷಯದಲ್ಲಿ)ವನ್ನು ಕರ್ನಾಟಕ ಚತುರತೆಯಿಂದ ನಿಯಂತ್ರಿಸಲು ಸಾಧ್ಯವಿದೆ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಪ್ರಕೃತಿ ವಿಕೋಪಗಳು ಸಮಸ್ಯೆ ತರಬಹುದು.

ಭಾರತದಲ್ಲಿ ಚಂದ್ರಗ್ರಹಣದ ಪ್ರಭಾವಗಳೇನು?

ಪ್ರಧಾನಿ ನರೇಂದ್ರ ಮೋದಿ ಅಥವಾ ರಾಹುಲ್ ನಕ್ಷತ್ರಗಳಿಗೆ ಪ್ರಸ್ತುತ ಗ್ರಹಣ ನೇರಪ್ರಭಾವ ಬೀರುವುದಿಲ್ಲವಾದರೂ, ಪರಸ್ಪರರನ್ನು ದುರ್ಬಲಗೊಳಿಸುವ ಕಾರಸ್ಥಾನ ಅನ್ಯರಿಂದ ನೆರವೇರುತ್ತದೆ. ಪರಿಣಾಮಕಾರಿಯಾದ ವಾಕ್ಸಿದ್ಧಿಯನ್ನು ರಾಹುಲ್ ಸಂಪಾದಿಸಬಲ್ಲರಾದರೆ, ರಾಹುಲರನ್ನು ಅಗ್ರಸ್ಥಾನಕ್ಕೆ ತರಲು ಮೋದಿಯವರ ಜಾತಕದ ಚಂದ್ರ ಪ್ರಯತ್ನಿಸುತ್ತಿರುವ ಕಾರಣಗಳಿಗಾಗಿ ಮಂಕಾಗುವ ಸಾಧ್ಯತೆ ಅಧಿಕ. ಮೋದಿ ರಾಹುಲರನ್ನು (ಬಿಹಾರದಲ್ಲಿ ಎಷ್ಟೇ ಮೈತ್ರಿ ಪ್ರದರ್ಶಿಸಿದರೂ ಸರ›ನೆ ತನ್ನ ನಿಲುವಿನಲ್ಲಿ ಬದಲಾವಣೆ ತೋರುವ ನಿತೀಶ್ ಕುಮಾರ್ ಕಾರಣಕ್ಕಾಗಿ) ನಿಯಂತ್ರಿಸುವುದು ಕಷ್ಟವಾದೀತು. ಅತಿಶಯವಾದ ಮಳೆ ಹಾಗೆಯೇ ಭೂಕಂಪನ, ಚಂಡಮಾರುತಗಳಂಥ ವಿಷಯ ಭಾರತವನ್ನು ತತ್ತರಿಸುವ ಹಂತದಲ್ಲಿಡುತ್ತದೆ. ಉತ್ತರ ಭಾರತದಲ್ಲಿ ಅನಾವೃಷ್ಟಿ ಸಂಭಾವ್ಯ.