ಕೇರಾ ರಸ್ತೆ ಗೋಳು ಕೇಳುವವರಿಲ್ಲ!

ಆರ್.ಬಿ.ಜಗದೀಶ್ ಕಾರ್ಕಳ
ಪಶ್ಚಿಮಘಟ್ಟದ ತಪ್ಪಲು ತೀರ ಪ್ರದೇಶವಾಗಿರುವ ಕಾರ್ಕಳ-ಬೆಳ್ತಂಗಡಿಯ ಗಡಿಭಾಗದಲ್ಲಿರುವ ಈದು ಗ್ರಾಮದ ವ್ಯಾಪ್ತಿಯ ಕೇರಾ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ.
2003 ನವಂಬರ್ 17ರಂದು ಈದು ಬೊಲ್ಲೊಟ್ಟುನಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ ಬಳಿಕ ಎಚ್ಚೆತ್ತ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಿತು. ಆ ಮೂಲಕ ಸೇತುವೆ, ರಸ್ತೆ, ದಾರಿದೀಪ, ಕುಡಿಯುವ ನೀರು, ಮೋರಿ ನಿರ್ಮಾಣ, ಸಾರಿಗೆ ವ್ಯವಸ್ಥೆ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ತಲಾತಲಾಂತರ ವರ್ಷಗಳಿಂದ ಜೀವಿಸಿಕೊಂಡು ಬಂದಿರುವ ಆದಿವಾಸಿಗಳು ಸೇರಿದಂತೆ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನಗಳು ನಡೆದವು. ಪರಿಣಾಮವಾಗಿ ಹಲವು ಜನಪರ ಯೋಜನೆಗಳು ಜಾರಿಗೊಳಿಸುವ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕು ಕಂಡಿದ್ದವು. ಆದರೆ ಈದು ಗ್ರಾಮದಿಂದ ಕೇರದ ವರೆಗಿನ ರಸ್ತೆ ಸ್ಥಿತಿಗತಿ ಇಂದಿಗೂ ಆಯೋಮಯ.

2010ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಹೊಸ್ಮಾರು ಕ್ರಾಸ್‌ನಿಂದ ಕೇರವರೆಗಿನ ರಸ್ತೆ ಅಭಿವೃದ್ಧಿ ಹೊಂದಿ ಮರು ಡಾಂಬರು ಭಾಗ್ಯ ಕಂಡಿತು. ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ವರ್ಷ ಕಳೆಯುವ ಮುನ್ನವೇ ಕಾಮಗಾರಿ ನಿಜ ಸ್ವರೂಪ ಬಯಲಾಯಿತು. ಸದ್ಯ 8 ವರ್ಷ ಕಳೆಯುತ್ತಿದ್ದಂತೆ ಹೆಜ್ಜೆಗೊಂದು ಭಾರಿ ಹೊಂಡಗಳು ಕಾಣಸಿಗುತ್ತಿವೆ
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಪ್ರಕರಣ: 2003 ನವಂಬರ್ 17ರಂದು ಈದು ಗ್ರಾಮದ ಬೊಲ್ಲೊಟ್ಟು ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ಪೊಲೀಸರು ನಡೆಸಿದ ಗುಂಡಿನ ಮೊರೆತಕ್ಕೆ ಹಾಜಿಮ್ಮಾ ಹಾಗೂ ಪಾರ್ವತಿ ಪ್ರಾಣ ಕಳೆದುಕೊಂಡಿದ್ದರು. ಘಟನೆಗೆ ಸಾಕ್ಷಿಯಾಗಿರುವಂತೆ ನಕ್ಸಲ್ ಗುಂಪಿನಲ್ಲಿದ್ದ ಯಶೋದಾ ಗುಂಡೇಟಿನಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದು, ಬದುಕಿ ಉಳಿದಿದ್ದಳು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.

ಪಕ್ಷ ಮುಖ್ಯವಲ್ಲ, ಗ್ರಾಮ ಅಭಿವೃದ್ಧಿಯೇ ಮುಖ್ಯ. ರಸ್ತೆ ಸ್ಥಿತಿಗತಿಯ ಬಗ್ಗೆ ಈಗಾಗಲೇ ಎಲ್ಲ ಸ್ತರ ಜನಪ್ರತಿನಿಧಿ ಹಾಗೂ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಗ್ರಾಮಸ್ಥರ ಆಕ್ರೋಶಕ್ಕೂ ಮುನ್ನ ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿ ಮುಂದಾಗುವುದು ಲೇಸು.
ಶ್ರೀಧರ್ ಮಲೆ ಕುಡಿಯ, ರಾಜ್ಯ ಮಲೆಕುಡಿಯ ಸಂಘ ಮುಖಂಡ

ಹೊಸ್ಮಾರು ಕ್ರಾಸ್‌ನಿಂದ ಕೇರದವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕ ವಿ.ಸುನೀಲ್‌ಕುಮಾರ್ ಯೋಜನೆ ಹಾಕಿಕೊಂಡು 50 ಲಕ್ಷ ರೂ. ಅನುದಾನ ಕಾದಿರಿಸಿದ್ದಾರೆ. ಚುನಾವಣೆ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ.
ಪುರುಷೋತ್ತಮ, ಈದು ಗ್ರಾಮ ಪಂಚಾಯಿತಿ ಅಧ್ಯಕ್ಷ