ಹೊನ್ನಾಳಿ: ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿದೆ. ಆ ಕಾರಣಕ್ಕಾಗಿಯೇ ಇತಿಹಾಸಕಾರರು ವಿವಿಧ ದೇಶಗಳ ಇತಿಹಾಸ ಅರಿಯಲು ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಶನಿವಾರ ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಕರ್ನಾಟಕ ಶೈಕ್ಷಣಿಕ ಪ್ರವಾಸಕ್ಕೆ ಹೊರಟ ವಿದ್ಯಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಜತೆ ನಾಡಿನ ಇತಿಹಾಸದ ಹಿರಿಮೆ, ಗರಿಮೆ ಅರಿಯಬೇಕು.ಆಯಾ ಪ್ರದೇಶಗಳ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಪ್ರವಾಸದ ವೇಳೆ ನೋಡುವ, ಕೇಳುವ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು. ಅಲ್ಲಿಂದ ವಾಪಾಸಾದ ಅನಂತರ ಲೇಖನ ಸಿದ್ದಪಡಿಸಬೇಕು. ಆಗ ಸರ್ಕಾರ ಆಯೋಜಿಸುವ ಶೈಕ್ಷಣಿಕ ಪ್ರವಾಸ ಅರ್ಥಪೂರ್ಣವಾಗುತ್ತದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕಿ ಬಿ.ಕಾವ್ಯಾ ಮಾತನಾಡಿ ಸರ್ಕಾರ ಪ್ರತಿವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಮಾತನಾಡಿ, ಪ್ರವಾಸಕ್ಕೆ ಪರಿಶಿಷ್ಟ ವರ್ಗ,ಪಂಗಡದ 83 ವಿದ್ಯಾರ್ಥಿಗಳಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಟ್ರಾವೆಲ್ ಕಿಟ್: ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಪ್ರತಿ ವಿದ್ಯಾರ್ಥಿಗಳಿಗೆ ಬ್ಯಾಗ್, ಟಿ ಶರ್ಟ್, ಟೋಪಿ, ಪೆನ್, ಪುಸ್ತಕ ಹಾಗೂ ಬೆಳಗಿನ ನಿತ್ಯೋಪಯೋಗಿ ವಸ್ತುಗಳ ಸಮೇತ ಟ್ರಾವೆಲ್ ಕಿಟ್ನನ್ನು ಇಲಾಖೆ ನೀಡಿದೆ.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಕ್ಕಳಿಗೆ ಶುಭ ಹಾರೈಸಿದರು.
ಬಿ.ಆರ್.ಸಿ. ತಿಪ್ಪೇಶಪ್ಪ, ಇ.ಸಿ.ಒ. ಹನುಮಂತಪ್ಪ, ಶಿಕ್ಷಕ ಮಾರ್ಗದರ್ಶಿ ಪಂಕಜಾ ಸೇರಿ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯ ಇಲಾಖೆಯ ಅಧಿಕಾರಿಗಳು ಇದ್ದರು.