ಹೊಸಪೇಟೆ(ಬಳ್ಳಾರಿ): ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಿಂದ ಸಂಸ್ಕಾರ ಬರುತ್ತದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದರು.
ಕಮಲಾಪುರ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಾರ್ಗಶಿರ ಬಹುಳ ಪಂಚಮಿ ನಿಮಿತ್ತ ಹಿಂದು ಜಾಗರಣ ವೇದಿಕೆಯಿಂದ ಗುರುವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಧಾರ್ಮಿಕ ಪರಂಪರೆ ಮಠ ಮಾನ್ಯಗಳು ಉಳಿಸಿ ಬೆಳೆಸಿವೆ. ಶಿಕ್ಷಣದಿಂದ ಮನುಷ್ಯನ ಚಿಂತನೆ ಬದಲಾಗಬೇಕೆ ಹೊರತು ಆಚಾರ ವಿಚಾರಗಳಲ್ಲ. ಜಾಗತೀಕರಣ ಯುಗದಲ್ಲಿ ಕೆಲ ಕುಟುಂಬಗಳು ಧಾರ್ಮಿಕ ಪರಂಪರೆಯ ಹಿನ್ನೆಲೆ ಮರೆತು ಪಾಶ್ಚಿಮಾತ್ಯ ಶೈಲಿ ಬದುಕಿಗೆ ಮಾರು ಹೋಗಿದ್ದಾರೆ. ಹೀಗಾಗಿ, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಹಿಂದು ಧರ್ಮದ ಪ್ರಜ್ಞೆ ಮೂಡಿಸಬೇಕು ಎಂದರು.
ಆರ್ಎಸ್ಎಸ್ನ ಕುಟುಂಬ ಪ್ರಭೋದಿನಿ ಪಾ.ರಾ ನಾಗರಾಜ ಮಾತನಾಡಿ, ಆದಿ ಕಾಲದಿಂದಲೂ ಪ್ರತಿ ಧಾರ್ಮಿಕ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಹೀಗಾಗಿ ಧಾರ್ಮಿಕ ಆಚರಣೆಗಳು ಇಂದಿಗೂ ಜಿವಂತವಾಗಿವೆ. ನಂತರ ಹಂಪಿಯ ಅರ್ಚಕ ಶಿವುಭಟ್ ಜೋಷಿ ತಂಡದವರಿಂದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯ ನಡೆಯಿತು.
ಮಂಜುಳಾ ನರಸಿಂಹ ಮೂರ್ತಿ, ಮೌನೇಶ್ ಬಡಿಗೇರ್, ನವೀನ್ ಕುಮಾರ್, ರಾಮಣ್ಣ ದಾಸಯ್ಯ, ಬಳ್ಳಾರಿ ನಗರ ಮಹಿಳಾ ಪ್ರಮುಖರಾದ ಸುನಿತಾ, ಮಣಿಕಂಠ, ಮಾಂತೇಶ್, ರಾಮಾಂಜನಿ, ವಿವೇಕಾನಂದ, ಈರಣ್ಣ, ಚಿದಾನಂದಸ್ವಾಮಿ, ನಾಗಯ್ಯ, ಗೋವಿಂದ, ಪ್ರಸನ್ನ, ಅಭಿದತ್ರ, ಷಣ್ಮುಖ ಇತರರಿದ್ದರು.