ಶಿಕ್ಷಣ ಸಮಾಜ, ರಾಷ್ಟ್ರ ಸೇವಕರನ್ನು ಸೃಷ್ಟಿಸಲಿ

ಸಚಿವ ಎನ್.ಮಹೇಶ್ ಸಲಹೆ

ಯಳಂದೂರು: ಶಿಕ್ಷಣ ಕೇವಲ ಗಿಳಿ ಪಾಠವಾಗದೆ, ಸಮಾಜ ಹಾಗೂ ರಾಷ್ಟ್ರ ಸೇವೆ ಮಾಡುವ ವಿದ್ಯಾರ್ಥಿಗಳನ್ನು ತಯಾರು ಮಾಡುವಂತಾಗಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಸಲಹೆ ನೀಡಿದರು.

ಪಟ್ಟಣದ ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್‌ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ವಿಕಾಸ, ಸಾಮರ್ಥ್ಯವನ್ನು ಹೊರಗೆಡುವ ಸಾಧನವೇ ಶಿಕ್ಷಣವಾಗಿದೆ. ಓದು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಪ್ರತಿಯೊಂದು ಮನಸ್ಸಿನಲ್ಲೂ ಅಗೋಚರ ಶಕ್ತಿಗಳಿರುತ್ತವೆ. ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ಕಲಿಕೆಯಲ್ಲೂ ಉತ್ತಮ ಸಾಧನೆ ಮಾಡುತ್ತಾನೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸ್ವಾಭಾವಿಕವಾಗಿಯೇ ಪ್ರತಿಭೆ ಅಡಗಿರುತ್ತದೆ. ಆದರೆ ಅದು ಸುಪ್ತವಾಗಿರುತ್ತದೆ. ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡುವ ಕೆಲಸವನ್ನು ಶಿಕ್ಷಕ ಮಾಡಬೇಕು ಎಂದರು.

ಮಹಾರಾಣಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎ.ಎನ್.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿ ಜ್ಞಾನಕ್ಕಾಗಿಯೇ ಶಿಕ್ಷಣ ಪಡೆಯುತ್ತಾನೆ. ಆದರೆ ಈ ಜ್ಞಾನವನ್ನು ಸೇವೆಗೆ ಬಳಸಿಕೊಂಡರೆ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನ ಹರಿಸಬೇಕು. ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಜಾನಪದ ಕಲಾವಿದ ನಾರಾಯಣಸ್ವಾಮಿ, ಎನ್.ಮಹೇಶ್ ಅವರು ರಚಿಸಿರುವ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.
ದೈಹಿಕ ಶಿಕ್ಷಣ ನಿರ್ದೇಶಕ ಕೆ.ಚಂದ್ರಶೇಖರ್, ಎನ್‌ಎಸ್‌ಎಸ್ ಅಧಿಕಾರಿ ಕೆ.ಎಂ.ಪ್ರಸನ್ನಕುಮಾರ್, ಪ್ರಾಂಶುಪಾಲ ಜೆ.ಸುರೇಂದ್ರ, ಉಪನ್ಯಾಸಕರು ಹಾಜರಿದ್ದರು.