ಸರ್ಕಾರಿ ಶಾಲೆ ನಿಟ್ಟುಸಿರು

ಬೆಂಗಳೂರು: ಬಾಗಿಲು ಮುಚ್ಚುವ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ನಿಯಮಗಳಿಗೆ ಬದಲಾವಣೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದರ ಜತೆ, ಪಿಯುನಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳ ಶಿಕ್ಷಣ ಶುಲ್ಕವನ್ನು ಸರ್ಕಾರದ ವತಿಯಿಂದಲೇ ಭರಿಸುವ ತೀರ್ವನವೂ ಹೊರಬಿದ್ದಿದೆ.

ಕೇರಳ ಮಾದರಿ: ಸರ್ಕಾರಿ ಶಾಲೆ ಇರುವ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿದ್ದಲ್ಲಿ ವಿದ್ಯಾರ್ಥಿಗಳು ಆರ್​ಟಿಇ ಅಡಿ ಆ ಶಾಲೆಗಳಿಗೆ ಸೇರಲು ಅವಕಾಶವಿಲ್ಲ. ಬದಲಾಗಿ ಸರ್ಕಾರಿ ಶಾಲೆಗಳಲ್ಲೇ ಕಲಿಕೆ ಮುಂದುವರಿಸಬೇಕಾಗುತ್ತದೆ. ಕೇರಳದಲ್ಲಿ ಜಾರಿಯಲ್ಲಿರುವ ಈ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ನಿರ್ಣಯವನ್ನು ಬುಧವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.

ಆರ್​ಟಿಇ ಅಡಿ ಖಾಸಗಿ ಶಾಲೆಗಳಿಗೆ ಸೇರಿದ ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದು ವರ್ಷಕ್ಕೆ ಒಂದೂವರೆ ಸಾವಿರ ಕೋಟಿ ರೂ.ಗಳಷ್ಟಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯಲ್ಲಿ ಇದನ್ನು ಆಕ್ಷೇಪಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರ್​ಟಿಇಯಲ್ಲಿ ಬದಲಾವಣೆಗೆ ಶಿಫಾರಸು ಮಾಡಿತ್ತು.

ಮುಂದೇನು?

ಆರ್​ಟಿಇ ನಿಯಮಗಳ ತಿದ್ದುಪಡಿಯಿಂದಾಗಿ ಇನ್ಮುಂದೆ ರಾಜ್ಯದ ಯಾವುದೇ ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ ಇರುವ ಸುತ್ತಲಿನ ಒಂದು ಕಿಮೀ ವ್ಯಾಪ್ತಿಯ ಮಕ್ಕಳು ಆರ್​ಟಿಇ ಕಾಯ್ದೆಯಿಂದ ಹೊರಗುಳಿಯಲಿದ್ದಾರೆ. ಅಂದರೆ ಸರ್ಕಾರಿ ಶಾಲೆ ಇರುವ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಇನ್ನು ಖಾಸಗಿ ಶಾಲೆಯಲ್ಲಿ ಆರ್​ಟಿಇ ಅಡಿ ಪ್ರವೇಶ ನೀಡುವುದಿಲ್ಲ. ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ತಿದ್ದುಪಡಿ) ನಿಯಮ 2018ಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಈಗ ಏನಿದೆ ನಿಯಮ

2011ರಲ್ಲಿ ರೂಪಿಸಲಾದ ನಿಯಮದ ಪ್ರಕಾರ, ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಕ್ಕಳು ವಾಸಿಸುವ ಒಂದು ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಖಾಸಗಿ ಶಾಲೆಗೆ ಆರ್​ಟಿಇ ಕಾಯ್ದೆಯಡಿ ಪ್ರವೇಶ ನೀಡಬಹುದು. 2012ರಲ್ಲಿ ಜಾರಿಗೊಂಡ ಆರ್​ಟಿಇ ಕಾಯ್ದೆಯಡಿ ಪ್ರತಿವರ್ಷ ಸರಾಸರಿ 3 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಮಕ್ಕಳಿಗೆ ಕಡ್ಡಾಯ, ಗುಣಮಟ್ಟದ ಶಿಕ್ಷಣದ ಉದ್ದೇಶದಿಂದ ಜಾರಿಯಾದ ಆರ್​ಟಿಇ ಕಾಯ್ದೆಯಡಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಗೆ ತಲಾ ಗರಿಷ್ಠ 12,000 ರೂ.ವರೆಗೆ ಶುಲ್ಕ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆ ಪ್ರಕಾರ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭರಿಸುವ ಹಣದ ಮೊತ್ತ ವಾರ್ಷಿಕ 1,600 ಕೋಟಿ ರೂ.ಗಳಷ್ಟಾಗುತ್ತದೆ.

ಸರ್ಕಾರಿ ಶಾಲೆ ಉಳಿಸುವ ಉದ್ದೇಶ

ಹಾಲಿ ನಿಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅವಕಾಶವಿರುವುದರಿಂದ ಸರ್ಕಾರಿ ಶಾಲೆಗಳು ಕ್ರಮೇಣ ಸೊರಗುತ್ತವೆ ಎಂಬ ಆತಂಕ ವ್ಯಕ್ತವಾಗಿತ್ತು. ತನ್ವೀರ್ ಸೇಠ್ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ವಣವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಇದರ ಪರಿಣಾಮವಾಗಿ ಆರ್​ಟಿಇ ಕಾಯ್ದೆಯನ್ನೇ ರದ್ದುಪಡಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ 1,600 ಕೋಟಿ ರೂ.ಗಳನ್ನು ವಿನಿಯೋಗಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು.

ರಾಜ್ಯದ ವಿದ್ಯಾರ್ಥಿನಿಯರಿಗೆ ಸಿಹಿ

ಬೆಂಗಳೂರು: ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಪದವಿಪೂರ್ವ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಕಲಿಯುವ ಹೆಣ್ಣುಮಕ್ಕಳ ಶಿಕ್ಷಣದ ಶುಲ್ಕವನ್ನು ಇನ್ಮುಂದೆ ರಾಜ್ಯ ಸರ್ಕಾರವೇ ಭರಿಸಲಿದೆ. ಈ ಯೋಜನೆಯಡಿ ವಾರ್ಷಿಕ 95 ಕೋಟಿ ರೂ. ಹೆಚ್ಚುವರಿ ಹೊರೆ ಸರ್ಕಾರಕ್ಕೆ ಬೀಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಪ್ರಸಕ್ತ ವರ್ಷ ಪದವಿಪೂರ್ವ ಕಾಲೇಜುಗಳಲ್ಲಿ 1.33 ಲಕ್ಷ ಹಾಗೂ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ 1.74 ಲಕ್ಷ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಹೀಗಾಗಿ ಒಟ್ಟು 3.17 ಲಕ್ಷ ವಿದ್ಯಾರ್ಥಿನಿಯರು ಯೋಜನೆಯ ಲಾಭ ಪಡೆಯಲಿದ್ದಾರೆ. ಮುಂದಿನ ವರ್ಷ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗಬಹುದೆಂದು ಸಚಿವರು ಹೇಳಿದರು.