ಶಿಕ್ಷಣಾಧಿಕಾರಿಗಳ ಸಂಘಕ್ಕೆ ಮಾನ್ಯತೆ

ಪ್ರಕಾಶ್ ಮಂಜೇಶ್ವರ ಮಂಗಳೂರು
ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದು ಪ್ರತಿಭಟಿಸುವುದು, ಮನವಿ ಸಲ್ಲಿಸುವುದೆಲ್ಲ ಸಾಮಾನ್ಯ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದ ನಿದರ್ಶನ ಕಡಿಮೆ.
ಶಿಕ್ಷಣಾಧಿಕಾರಿಗಳ ಸಂಘಕ್ಕೆ ಈ ವರ್ಷ ಸರ್ಕಾರದ ಮಾನ್ಯತೆ ದೊರೆತಿದ್ದು, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಿಂದ ಆರಂಭಿಸಿ ನಿರ್ದೇಶಕರ ಹಂತದವರೆಗಿನ ಎಲ್ಲ ಅಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅಧಿಕೃತ ವೇದಿಕೆ ಲಭಿಸಿದಂತಾಗಿದೆ.

ಸರ್ಕಾರದ ನೀತಿ ರೂಪಿಸುವಲ್ಲಿ ಐಎಎಸ್ ಅಧಿಕಾರಿಗಳದ್ದೇ ನಿರ್ಣಾಯಕ ಪಾತ್ರ. ಕೆಲವು ಐಎಎಸ್ ಅಧಿಕಾರಿಗಳ ಎಡವಟ್ಟು ಅಥವಾ ನಿರ್ಲಕ್ಷೃದಿಂದ ಅಧಿಕಾರಿ ವರ್ಗ ಸಮಸ್ಯೆ ಅನುಭವಿಸುವುದಿದೆ. ದೊಡ್ಡ ಸಂಖ್ಯೆಯಲ್ಲಿ ಇರುವ ಕೆಳಗಿನ ಹಂತದ ಸಿಬ್ಬಂದಿ ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಆದರೆ ಸಂಖ್ಯಾ ಬಲದಿಂದ ಕಡಿಮೆ ಇರುವ ಅಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಿಗುವ ಅವಕಾಶ ಕಡಿಮೆ. ಬಡ್ತಿ, ಪ್ರಭಾರ ಭತ್ಯೆ ಸಿಗದ ಸಮಸ್ಯೆಗಳು ಸಾಮಾನ್ಯ.
 ಮಾನ್ಯತೆ ಪ್ರಯೋಜನ: ಎಲ್ಲ ಸಮಸ್ಯೆಗಳಿಗೆ ಹೋರಾಟವನ್ನೇ ಮಾಡಬೇಕೆಂದಿಲ್ಲ. ಸರ್ಕಾರ ಮತ್ತು ಐಎಎಸ್ ಅಧಿಕಾರಿ ವರ್ಗದ ಜತೆ ನೇರ ಸಂಪರ್ಕ ಕೊಂಡಿಯಾಗಿರುವ ಅಧಿಕಾರಿಗಳು ಸಂಘದ ನೇತೃತ್ವದಲ್ಲಿ ವಸ್ತುಸ್ಥಿತಿ ಮನವರಿಕೆ ಮಾಡುವುದು ಸುಲಭ. ಸರ್ಕಾರ ಪ್ರಮುಖ ನಿರ್ಣಯ ಕೈಗೊಳ್ಳುವ ಸಂದರ್ಭ ಸಂಘದ ಅಭಿಪ್ರಾಯಗಳಿಗೆ ಬೆಲೆ ಕೊಡಬಹುದು. ಸರ್ಕಾರದ ಮುಖ್ಯ ಕಾರ‌್ಯಕ್ರಮಗಳಿಗೆ ಆಮಂತ್ರಣ ಪಡೆಯಲು ಹಾಗೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸಂಘದ ಪ್ರತಿನಿಧಿಗಳಿಗೆ ಅವಕಾಶ ದೊರೆಯಲಿದೆ.

ಸಮಾಜಮುಖಿ ಕಾರ್ಯ: ಶಿಕ್ಷಣಾಧಿಕಾರಿಗಳ ಸಂಘ ಸಮಾಜಮುಖಿಯಾಗಿ ಕೆಲಸ ಮಾಡಿದರೆ ಅಧಿಕಾರಿಗಳಿಗಷ್ಟೇ ಅಲ್ಲ, ಸಾರ್ವಜನಿಕರಿಗೂ ಪ್ರಯೋಜನ ಸಿಗಲಿದೆ. ಸಂಘದ ವತಿಯಿಂದ ಶಾಲೆಗಳ ದತ್ತು ಸ್ವೀಕಾರ, ಆರ್ಥಿಕವಾಗಿ ದುರ್ಬಲ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮುಂತಾದ ಕಾರ್ಯಗಳನ್ನು ನಡೆಸಬಹುದು ಎಂದು ಮೈಸೂರಿನಲ್ಲಿ ನಡೆದ ಸಂಘದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಸಹಿತ ಎಂಟು ಜಿಲ್ಲೆಗಳ ಪ್ರಾತಿನಿಧ್ಯ ಹೊಂದಿರುವ ವಿಭಾಗಮಟ್ಟದ ಸಮಾವೇಶದಲ್ಲಿ ಹಿರಿಯ ಅಧಿಕಾರಿಗಳು ಗಮನ ಸೆಳೆದರು. ನವೆಂಬರ್‌ನಲ್ಲಿ ರಾಜ್ಯಮಟ್ಟದ ಸಮಾವೇಶ ನಿಗದಿಯಾಗಿದೆ.

 ಶಿಕ್ಷಣಾಧಿಕಾರಿಗಳ ಸಂಘಕ್ಕೆ ಸರ್ಕಾರದ ಮಾನ್ಯತೆ ದೊರೆತಿರುವುದರಿಂದ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ. ಅಧಿಕಾರಿಗಳು ಎದುರಿಸುವ ಸವಾಲುಗಳನ್ನು ಸರ್ಕಾರದ ಜತೆ ಹಂಚಿಕೊಳ್ಳಲು ಒಂದು ಅಧಿಕೃತ ವೇದಿಕೆ ದೊರೆತಂತಾಗಿದೆ.
– ವೈ.ಶಿವರಾಮಯ್ಯ, ಅಧ್ಯಕ್ಷ, ಶಿಕ್ಷಣಾಧಿಕಾರಿಗಳ ಸಂಘ, ದ.ಕ. 

Leave a Reply

Your email address will not be published. Required fields are marked *