ಅಳವಂಡಿ: ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸದ ಮೂಲಕ ಸಾಧನೆ ಮಾಡಬೇಕು ಎಂದು ಕೆಎಚ್‌ಪಿಟಿಯ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ತಿಳಿಸಿದರು. ಹೈದರನಗರ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂಸ್ಥೆ (ಕೆಎಚ್‌ಪಿಟಿ)ಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿಹರೆಯದ ಹೆಣ್ಣು ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಧೈರ್ಯ ಬೆಳೆಸಿಕೊಳ್ಳಲು ಕೆಎಚ್‌ಪಿಟಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ಮುಖ್ಯಶಿಕ್ಷಕ ಹನುಮಂತಪ್ಪ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ತಾರತಮ್ಯಗಳನ್ನು ತೊರೆದು ಹಾಕಬೇಕಾಗಿದೆ. ಅವರ ಹಕ್ಕುಗಳ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ ಎಂದರು.
ಮುಖಂಡ ವಿರುಪಾಕ್ಷಿ ಬಡಿಗೇರ, ಶಿಕ್ಷಕಿ ಬೇಬಿ, ಅಂಗನವಾಡಿ ಕಾರ್ಯಕರ್ತೆ ಸರೋಜಾ, ಪ್ರಮುಖರಾದ ಶರಣಮ್ಮ, ಜುನಾಬಿ ವಡ್ಡರಟ್ಟಿ, ವೈಷ್ಣವಿ, ಚೈತ್ರಾ, ಭೂಮಿಕಾ, ಅನ್ನಪೂರ್ಣ, ನಾಗರತ್ನ, ದ್ರಾಕ್ಷಾಯಣಿ, ರಕ್ಷಿತಾ, ಸಂತೋಷ ಇದ್ದರು.