More

    ಗ್ಯಾರಂಟಿ ಈಡೇರಿಸಲು ಸರ್ಕಾರ ಬದ್ಧ

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಶ್ವಾಸ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ರಾಜ್ಯ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದೆ, ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಬಿಜೆಪಿ ನಾಯಕರು ಸುಖಾಸುಮ್ಮನೆ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
    ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2023-2024 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಈ ಯೋಜನೆಗಳ ಜಾರಿಯ ಬಗ್ಗೆಯೇ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಐದು ಗ್ಯಾರಂಟಿಗಳನ್ನೂ ಸರ್ಕಾರ ಗ್ಯಾರಂಟಿ ಜಾರಿ ಮಾಡಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

    ಪಠ್ಯ ಪರಿಷ್ಕರಣೆ ಸದ್ಯಕ್ಕಿಲ್ಲ! ಪಠ್ಯದ ವಿಷಯದಲ್ಲಿ ಕೆಲವೊಂದು ಪರಿಷ್ಕರಣೆ ಅವಶ್ಯಕತೆ ಇದೆ. ಆದರೆ ಈಗಾಗಲೇ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪೂರೈಸಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
    ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಶಿಕ್ಷಕರ ವರ್ಗಾವಣೆ, ಶಿಕ್ಷಕರ ನೇಮಕಾತಿ ಬಗ್ಗೆಯೂ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದ್ದು, ಎಲ್ಲವೂ ಸುಲಲಿತವಾಗಿ ಹಂತ ಹಂತವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಉತ್ತಮ ಶಿಕ್ಷಣ ಕಲ್ಪಿಸುವುದು ನನ್ನ ಕರ್ತವ್ಯ: ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಅಗತ್ಯ. ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಸಹಕಾರ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.
    ಎಲ್ಲ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನೆರೆಹೊರೆಯಲ್ಲಿ ಯಾರಾದರೂ ಶಿಕ್ಷಣ ವಂಚಿತ ಮಕ್ಕಳು ಕಂಡುಬಂದಲ್ಲಿ ನಿಮ್ಮ ಸ್ನೇಹಿತರೆಂದು ತಿಳಿದು ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಮಕ್ಕಳಿಗೆ ಸಚಿವರು ಮನವಿ ಮಾಡಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರು ಹಾಗೂ ಪಾಲಕರ ಸಹಕಾರ ಅಗತ್ಯ ಎಂದರು. 2023-24 ನೇ ಸಾಲಿನ ಶಾಲಾ ಆರಂಭದ ದಿನ ಮಕ್ಕಳನ್ನು ಸ್ವಾಗತಿಸಿದರು.

    ಮೇಲ್ದರ್ಜೆಗೆ ಕ್ರಮ: ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಒತ್ತು ನೀಡಲಾಗುವುದು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಮರು ನಿರ್ಮಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಮಸ್ಯೆ, ಗೊಂದಲ ಆಗದಂತೆ ಶಾಲಾ ಮಕ್ಕಳಿಗೆ ಆರಂಭದಲ್ಲಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಶೀಘ್ರ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
    ಇದಾದ ನಂತರ ಸಚಿವರು ಬಸವನಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಜಾಲಿಗೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಉಚಿತ ಶಾಲಾ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು.

    ಶಿಕ್ಷಣವೇ ಶಕ್ತಿ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ನಡೆಸಿದರೆ ಎಂಥ ಸಾಧನೆಯನ್ನಾದರೂ ಮಾಡಬಹುದು. ಶಿಕ್ಷಣಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು. ಪ್ರತಿ ವಿದ್ಯಾರ್ಥಿಗಳು ತಪ್ಪದೆ ತರಗತಿಗಳಿಗೆ ಹಾಜರಾಗಬೇಕು, ಗೊಂದಲವಿರುವ ವಿಷಯಗಳ ಬಗ್ಗೆ ಹೆಚ್ಚು ಬಾರಿ ಶಿಕ್ಷಕರ ಬಳಿ ಕೇಳಿ ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts