ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು, ಅದನ್ನು ಸಾಧಿಸುವ ಛಲವಿರಬೇಕು. ಆಗ ಇನ್ನೊಬ್ಬರು ಒತ್ತಾಯಿಸುವ ಪ್ರಮೇಯ ಬರುವುದಿಲ್ಲ. ಸ್ವಯಂ ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ, ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಅವರಿಗಾಗಿ ಓದಬೇಕೇ ಹೊರತು ಅಪ್ಪ-ಅಮ್ಮನಿಗಾಗಿಯೋ ಇನ್ಯಾರನ್ನೋ ಸಮಾಧಾನಪಡಿಸಲೋ ಅಲ್ಲ.

ಈಗೆಲ್ಲ ವಿಭಕ್ತ ಕುಟುಂಬಗಳೇ ಹೆಚ್ಚು. ಇರುವ ಒಂದೆರಡು ಮಕ್ಕಳನ್ನು ಮುದ್ದಿನಿಂದ ಬೆಳೆಸುತ್ತಾರೆ. ತಮಗೆ ಕಷ್ಟವಾದರೂ ಚಿಂತೆಯಿಲ್ಲ ಮಕ್ಕಳಿಗೆ ಯಾವುದೇ ಕಷ್ಟವಾಗಬಾರದೆಂದು ಬಯಸುತ್ತಾರೆ. ಇಂದು ಅನೇಕ ತಂದೆ-ತಾಯಿಯರು ‘ಮಕ್ಕಳು ತಿನ್ನುವುದಿಲ್ಲ’ ಎನ್ನುತ್ತಿರುತ್ತಾರೆ. ಅಪ್ಪ ಪೇಟೆಯಿಂದ ಬೇಕಾದ್ದನ್ನ ತರುತ್ತಾನೆ, ಅಮ್ಮ ಅಡುಗೆ ಸಿದ್ಧಪಡಿಸಿ ಬಡಿಸುತ್ತಾಳೆ. ಕೆಲವೊಮ್ಮೆಯಂತೂ ಆಹಾರವನ್ನು ಕಲಸಿ ನೇರವಾಗಿ ಬಾಯಿಗೇ ಹಾಕುತ್ತಾಳೆ; ಅದನ್ನು ಜಗಿಯುವುದಷ್ಟೇ ಮಗುವಿನ ಕೆಲಸ! ಈ ಮುದ್ದುಮಾಡುವ ಅಭ್ಯಾಸ ಮಕ್ಕಳಲ್ಲಿ ಸೋಮಾರಿತನವನ್ನು ಬೆಳೆಸುತ್ತದೆ.

ವ್ಯಕ್ತಿತ್ವ-ವಿಕಸನದ ಕೇಂದ್ರ: ಒಮ್ಮೆ ರಾಜ ಹಾಗೂ ಮಂತ್ರಿ, ತಮ್ಮ ರಾಜ್ಯದಲ್ಲಿನ ಅತ್ಯಂತ ಸೋಮಾರಿಯನ್ನು ಹುಡುಕಿಕೊಂಡು ಹೊರಟರಂತೆ. ಒಬ್ಬ ಬೀದಿಬದಿಯಲ್ಲಿ ಕುಳಿತು ಯೋಚಿಸುತ್ತಿದ್ದ. ‘ಯಾಕೆ ಏನೂ ಮಾಡದೆ ಕುಳಿತಿರುವೆ?’ ಎಂದು ಇವರು ಪ್ರಶ್ನಿಸಿದ್ದಕ್ಕೆ, ‘ಈಗ ಅನ್ನ ಮತ್ತು ಸಾರನ್ನು ತಂದುಕೊಡುತ್ತಾರೆ; ಅದನ್ನು ತಟ್ಟೆಗೆ ಹಾಕಿಕೊಂಡು ಕಲಸಿ ತಿನ್ನಬೇಕಲ್ಲ ಎಂದು ಯೋಚಿಸುತ್ತಿದ್ದೇನೆ’ ಎಂದನಂತೆ!. ಕೊಂಚ ಮುಂದೆ ಸಾಗಿದಾಗ ಕಂಡ ಇನ್ನೊಬ್ಬನನ್ನೂ ಪ್ರಶ್ನಿಸಿದಾಗ, ‘ಕಲಸಿದ ಊಟವನ್ನು ಈಗ ತಂದುಕೊಡುತ್ತಾರೆ; ಅದನ್ನು ಬಾಯಲ್ಲಿಟ್ಟು ತಿನ್ನಬೇಕಲ್ಲಾ ಎಂದು ಚಿಂತಿಸುತ್ತಿದ್ದೇನೆ’ ಎಂದನಂತೆ. ಸುಮ್ಮನೇ ಕೂತಿದ್ದ ಇನ್ನೊಬ್ಬನಂತೂ, ‘ಈಗ ಸಿದ್ಧಪಡಿಸಿದ ಊಟ ತಂದು ನನ್ನ ಬಾಯಲ್ಲಿ ಇಡುತ್ತಾರೆ; ಆದರೆ ಅದನ್ನು ನಾನೇ ಜಗಿದು ನುಂಗಬೇಕಲ್ಲಾ ಎಂದು ಚಿಂತೆ’ ಎಂದನಂತೆ! ಅತ್ಯಂತ ಸೋಮಾರಿ ಯಾರೆಂದು ತೀರ್ವನವಾಯಿತಲ್ಲ!

ಮನೆಯಲ್ಲಿದ್ದಾಗ ನಮ್ಮೆಲ್ಲ ಜವಾಬ್ದಾರಿಗಳನ್ನು ಹೆತ್ತವರು, ಹಿರಿಯರು ನೋಡಿಕೊಳ್ಳುತ್ತಾರೆ. ನಮಗಾವ ಯೋಚನೆಯೂ ಇರುವುದಿಲ್ಲ. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ವಿದ್ಯಾರ್ಥಿನಿಲಯಕ್ಕೆ ಬಂದಾಗ ನಮ್ಮ ಜವಾಬ್ದಾರಿಯ ಅರಿವಾಗುತ್ತದೆ. ಅಲ್ಲಿ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕಾಗುತ್ತದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದು, ಮುಂದೆ ಒಳ್ಳೆಯ ವಿಷಯ ಆಯ್ದುಕೊಂಡು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವುದಷ್ಟೇ ಜೀವನದ ಗುರಿಯಲ್ಲ; ವ್ಯಕ್ತಿತ್ವವನ್ನು ಅರಳಿಸುವುದೂ ವಿದ್ಯಾಭ್ಯಾಸದ ಗುರಿಯಾಗಿರುತ್ತದೆ. ವಿದ್ಯಾರ್ಥಿನಿಲಯಗಳು ಇದಕ್ಕೆ ಒತ್ತಾಸೆ ನೀಡುತ್ತವೆ ಎನ್ನಲಡ್ಡಿಯಿಲ್ಲ.

ಉಜಿರೆಯಲ್ಲಿ ‘ಸಿದ್ಧವನ ಗುರುಕುಲ’ವೆಂಬ ವಿದ್ಯಾರ್ಥಿನಿಲಯವಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರ ವಿದ್ಯಾಭ್ಯಾಸಕ್ಕಾಗಿ ನನ್ನ ಅಜ್ಜ ಮಂಜಯ್ಯ ಹೆಗ್ಗಡೆಯವರು ಇದನ್ನು ಗುರುಕುಲ ಮಾದರಿಯಲ್ಲಿ ಆರಂಭಿಸಿದರು. ನಾನು ಕೂಡ ಇಲ್ಲಿ ವಾಸವಾಗಿದ್ದೆ. ಸರಳ ಜೀವನ, ಉನ್ನತ ಚಿಂತನೆ ಇಲ್ಲಿನ ಆದರ್ಶ. ಧರ್ಮಸ್ಥಳದ ಪಟ್ಟಾಧಿಕಾರಿಗಳಾಗಿದ್ದ ನಮ್ಮ ತಂದೆ ಶ್ರೀ ರತ್ನವರ್ಮ ಹೆಗ್ಗಡೆಯವರು, ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ ನನ್ನನ್ನು ಈ ಗುರುಕುಲಕ್ಕೆ ಸೇರಿಸಿದ್ದರು. ಆಗ ಅಲ್ಲಿ ಈಗಿನಂತೆ ಆಧುನಿಕ ಸೌಕರ್ಯಗಳಿರಲಿಲ್ಲ, ಮಣ್ಣಿನ ಹಳೆಯ ಕಟ್ಟಡವಿತ್ತು. ಬೆಳಗ್ಗೆ ಮತ್ತು ಸಂಜೆ ಗಂಜಿಯೂಟ, ಮಧ್ಯಾಹ್ನವಷ್ಟೇ ಭೋಜನ. ‘ಬಡವರಿಗಾಗಿ ಇರುವ ಈ ಗುರುಕುಲದಲ್ಲಿ ನಿಮ್ಮ ಮಗನನ್ನೇಕೆ ಬಿಟ್ಟಿದ್ದೀರಿ?’ ಎಂದು ಕೆಲವರು ಕೇಳುತ್ತಿದ್ದರು. ‘ಅವನಿಗೆ ಬದುಕು ಎಂದರೇನೆಂದು ಅರ್ಥವಾಗಬೇಕು. ಕಷ್ಟದ ಜೀವನದಿಂದ ಉತ್ತಮ ಪಾಠವಾಗುತ್ತದೆ’ ಎನ್ನುತ್ತಿದ್ದರು ನಮ್ಮ ತಂದೆ. ಹಾಸ್ಟೆಲ್ ಎಂಬುದೊಂದು ಸಣ್ಣರಾಜ್ಯವೇ ಆಗಿರುತ್ತಿತ್ತು. ಒಂದು ಕೊಠಡಿಯಲ್ಲಿ ಬೇರೆಬೇರೆ ಜಿಲ್ಲೆಯ 6ರಿಂದ 8 ಮಂದಿ ಇರುತ್ತಿದ್ದೆವು. ಇಲ್ಲಿ ಪರಸ್ಪರ ಅರಿತು ಬಾಳುವುದರಿಂದ ಹೃದಯ ವಿಶಾಲವಾಗುತ್ತದೆ, ‘ನಾನು’ ಎಂಬ ಅಹಮಿಕೆ ಹೋಗಿ ‘ನಾವು’ ಎಂಬ ಸಮಷ್ಟಿಭಾವನೆ ಜಾಗೃತವಾಗುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಬದುಕುವ ಕಲೆ, ಕಷ್ಟಸಹಿಷ್ಣುತೆ ರೂಢಿಯಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯ ಬರುತ್ತದೆ. ನಾನೂ ಎಲ್ಲರಂತೆ ಪಂಚೆಯುಟ್ಟು ಪ್ರಾರ್ಥನೆ ಮಾಡುತ್ತಿದ್ದೆ, ಚಾಪೆಮೇಲೆ ಮಲಗುತ್ತಿದ್ದೆ, ಬಾವಿಕಟ್ಟೆಯಲ್ಲಿ ಸ್ನಾನ ಮಾಡುತ್ತಿದ್ದೆ, ಗಂಜಿಯೂಟ ಮಾಡುತ್ತಿದ್ದೆ. ಇದು ನನ್ನನ್ನು ಮುಂದಿನ ಜೀವನಕ್ಕೆ ಅಣಿಗೊಳಿಸಿತ್ತು. ಕಬ್ಬಿಣವನ್ನು ಕಾಯಿಸಿ ಸಂಸ್ಕರಿಸಿದಾಗ ಮತ್ತಷ್ಟು ಗಟ್ಟಿಯಾಗುವಂತೆ ಈ ಹಾಸ್ಟೆಲ್​ಗಳು ವಿದ್ಯಾರ್ಥಿಗಳನ್ನು ಬದುಕಿಗೆ ಅಣಿಗೊಳಿಸುತ್ತವೆ.

ವಿದ್ಯಾಭ್ಯಾಸ ಮುಗಿಸಿದ ನಂತರ ಹಾಸ್ಟೆಲ್ ತೊರೆದು ಉದ್ಯೋಗಕ್ಕೆ ಸೇರುತ್ತಾರೆೆ. ಆಗ ಉದ್ಯೋಗದಾತರು ಉತ್ತಮ ಕೆಲಸವನ್ನು ನಿರೀಕ್ಷಿಸುತ್ತಾರೆ, ನೀಡುವ ಸಂಬಳಕ್ಕನುಗುಣವಾಗಿ ಕಠಿಣವಾಗಿಯೇ ದುಡಿಸುತ್ತಾರೆ. ಸರಿಯಾಗಿ ದುಡಿಯದಿದ್ದರೆ ಉದ್ಯೋಗ ಬಿಡುವಂತೆಯೂ ಹೇಳುತ್ತಾರೆ. ಆಗ ಈ ಹಾಸ್ಟೆಲ್​ವಾಸದ ಅನುಭವ ನೆರವಾಗುತ್ತದೆ, ಪರಿಸರ ಮತ್ತು ಪರಿಸ್ಥಿತಿಗೆ ಹೊಂದಿಕೊಂಡು ಎಲ್ಲವನ್ನೂ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ನೀಡುತ್ತದೆ. ಅದನ್ನೇAs it is, where it is ಎನ್ನುತ್ತಾರೆ.

ಸಾಮರ್ಥ್ಯದಿಂದ ಅಸಾಮಾನ್ಯತೆ: ವಿದ್ಯಾರ್ಥಿ ಜೀವನದಲ್ಲಿ ದೈಹಿಕ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೇಹ-ಮನಸ್ಸು ಸರಿಯಿದ್ದರೆ ಮಾತ್ರವೇ ಸಾಧನೆ ಸಾಧ್ಯ. ಜತೆಗೆ ಓದುವ ವಿಷಯವನ್ನು ವಿವಿಧ ದೃಷ್ಟಿಕೋನದಿಂದ ಅವಲೋಕಿಸಿ ಅದರಲ್ಲಿ ಪ್ರಭುತ್ವವನ್ನು ಸಂಪಾದಿಸಬೇಕು. ಹಾಗಾಗಿ ಯಾವ ವಿಷಯ ಆಯ್ದುಕೊಂಡಿದ್ದೇವೆ ಎನ್ನುವುದಕ್ಕಿಂತ, ಆಯ್ದುಕೊಂಡಿದ್ದನ್ನು ಹೇಗೆ ಕಲಿಯುತ್ತೇವೆ ಎಂಬುದು ಮುಖ್ಯ.

ಒಂದು ಬ್ಯಾಂಕಿಗೆ ಒಬ್ಬನೇ ಅಧ್ಯಕ್ಷ, ಐದಾರು ಜನ ಆಡಳಿತ ಮಂಡಳಿಯ ಸದಸ್ಯರು. ಇವರೆಲ್ಲ ವಿದೇಶದಲ್ಲಿ ಓದಿ ಬಂದವರೇನಲ್ಲ. ಅಧ್ಯಕ್ಷ ಅಥವಾ ಕಾರ್ಯನಿರ್ವಾಹಕ ನಿರ್ದೇಶಕನಾದವನು, ಆರಂಭದಲ್ಲಿ ಕ್ಲರ್ಕ್ ಆಗಿಯೋ, ಆಫೀಸರನಾಗಿಯೋ ಸೇರಿ, ಅನುಭವ ಪಡೆದು ಮುಂದೆ ಉನ್ನತ ಹುದ್ದೆಗೆ ಏರಿರುತ್ತಾನೆ. ವೃತ್ತಿಬದುಕಿನ ಪ್ರತಿ ಹಂತದಲ್ಲೂ ಪ್ರತಿಭೆ-ಪರಿಶ್ರಮದಿಂದ ಹುದ್ದೆಯನ್ನು ನಿಭಾಯಿಸಿ ಈ ಹಂತಕ್ಕೆ ಬಂದಿರುತ್ತಾನೆ. 30-40 ಸಾವಿರ ಉದ್ಯೋಗಿಗಳಲ್ಲಿ ಒಬ್ಬ ಅಧ್ಯಕ್ಷನಾಗುವುದೆಂದರೆ ಅಥವಾ ನಿರ್ದೇಶಕನಾಗುವುದೆಂದರೆ ಸಣ್ಣ ಸಾಧನೆಯಲ್ಲ! ಕರ್ತೃತ್ವಶಕ್ತಿ, ಸಾಮರ್ಥ್ಯದಿಂದ ಅವನು ಗುಂಪಿನಲ್ಲಿ ಭಿನ್ನನಾಗುತ್ತ ಬೆಳೆಯುತ್ತಾನೆ. ಅವನನ್ನು ಮೇಲಧಿಕಾರಿಗಳು ಗಮನಿಸುತ್ತಾರೆ. ಆದ್ದರಿಂದ ಸಾಧಕರೆಂದರೆ, ಸಾಮಾನ್ಯರಿಗಿಂತ ಭಿನ್ನವಾಗಿ ಆಲೋಚಿಸುವವರಾಗಿರಬೇಕು, ವಿಶಿಷ್ಟವಾಗಿ ಕೆಲಸ ಮಾಡುವವರಾಗಿರಬೇಕು.

ಸಮಯದ ಹೊಂದಾಣಿಕೆ: ಇಂದು ಹಲವರು ಸಮಯವನ್ನು ಸರಿಯಾಗಿ ನಿಭಾಯಿಸಲಾರದೆ ಸೋಲುತ್ತಾರೆ. ಯಾವುದೇ ಕೆಲಸ ಹೇಳಿದರೆ ‘ಸಮಯವಿಲ್ಲ’ ಎನ್ನುವುದೊಂದು ಫ್ಯಾಷನ್ ಆಗಿಬಿಟ್ಟಿದೆ. ಚಿಕ್ಕಮಕ್ಕಳು ದಿನವಿಡೀ ಆಡುತ್ತಾರೆ; ಆದರೂ ಅವರಲ್ಲಿ ಆಟವಾಡಲು ಮತ್ತಷ್ಟು ಸಮಯ ಉಳಿಯುತ್ತದೆ. ಬಾಲ್ಯದಲ್ಲಿ ಎಷ್ಟೇ ವ್ಯಸ್ತರಾಗಿದ್ದರೂ ಒಂದಷ್ಟು ಸಮಯ ಉಳಿಯುತ್ತದೆ. ದೊಡ್ಡವರಾದಂತೆ ‘ಸಮಯವಿಲ್ಲ’ ಎಂಬ ಗೋಳು ಆರಂಭವಾಗುತ್ತದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ನಾವು ಮಾಡಬೇಕಾದ ಕೆಲಸಗಳನ್ನು ಎಣಿಸಿದಾಗ ಸಮಯ ಸಾಕಾಗುವುದಿಲ್ಲ ಎನಿಸಬಹುದು. ಆದರೆ ಅದು ವಾಸ್ತವವಲ್ಲ. ಸಾಹಿತಿ ಶಿವರಾಮ ಕಾರಂತರನ್ನು ಅವರ ಮನೆಯಲ್ಲೊಮ್ಮೆ ಭೇಟಿಯಾಗಿದ್ದೆ. ಆಡುಮುಟ್ಟದ ಸೊಪ್ಪಾದರೂ ಇರಬಹುದು, ಆದರೆ ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ. ಛಾಯಾಗ್ರಹಣ, ಸಾಹಿತ್ಯ, ಕಲೆ, ಚಾರಣ, ರಾಜಕೀಯ ಹೀಗೆ ಎಲ್ಲದರಲ್ಲೂ ಅವರು ಪರಿಣತರು. ಅವರ ಇಂಥ ಅಗಾಧ ಚಟುವಟಿಕೆಗಳನ್ನು ಕಂಡು, ‘ಇಷ್ಟೆಲ್ಲ ಮಾಡುವುದಕ್ಕೆ ಸಮಯ ಯಾವಾಗ ಸಿಗುತ್ತದೆ?’ ಎಂದು ಕೇಳಿದ್ದೆ. ಅದಕ್ಕವರು ‘ಯಾಕೆ ಸಿಗುವುದಿಲ್ಲ?’ ಎಂದು ಹೇಳಿ ತಮ್ಮ ದಿನಚರಿಯನ್ನು ವಿವರಿಸಿ, ‘ನನಗೆ ಇನ್ನೂ ಸಮಯವಿದೆ’ ಎಂದರು! ಸಮಯಕ್ಕೆ ಸರಿಯಾಗಿ ಕೆಲಸಮಾಡುತ್ತ, ಯೋಜನಾಬದ್ಧವಾಗಿ ಬದುಕುವವರಿಗೆ ‘ಸಮಯ ಸಾಕಾಗುವುದಿಲ್ಲ’ ಎಂಬ ವ್ಯಥೆ ಇರುವುದಿಲ್ಲ. ನಿಯೋಜಿತ ಕೆಲಸವನ್ನು ಶ್ರದ್ಧೆ ಮತ್ತು ಏಕಾಗ್ರತೆಯಿಂದ ಮಾಡಿದರೆ ಎಲ್ಲ ಸಮಯವೂ ಸದುಪಯೋಗವಾಗುವುದು ಖಂಡಿತ. ಜತೆಗೆ ಹೆಚ್ಚುವರಿ ಸಮಯವೂ ಉಳಿಯುತ್ತದೆ. ಈ ಶ್ರದ್ಧೆ, ಏಕಾಗ್ರತೆಯನ್ನು ಬೆಳೆಸಬೇಕೆಂದರೆ ಹಿಂದೆ ಮಾಡಿದ ತಪ್ಪುಗಳನ್ನು ಮರೆಯುವ ಕಲೆಯನ್ನು ರೂಢಿಸಿಕೊಳ್ಳಬೇಕು. ಅನವಶ್ಯಕವಾದುದನ್ನು ಮರೆಯುವ, ಉಪಯುಕ್ತವಾದುದನ್ನು ನೆನಪಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಯಶಸ್ವಿ ವ್ಯಕ್ತಿ ಗತ ಮತ್ತು ಭವಿಷ್ಯವನ್ನು ಕೊಂಚ ಬದಿಗಿಟ್ಟು ವರ್ತಮಾನದಲ್ಲಿ ತಲ್ಲೀನನಾಗಿರುತ್ತಾನೆ.

‘40 ವರ್ಷದ ಹಿಂದೆ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಏನೇನಾಯಿತೆಂದು ದಯವಿಟ್ಟು ಹೇಳಬೇಕು’ ಎಂದು ಕೆಲವರು ನನ್ನನ್ನು ಕೇಳಿದರು. ಒಮ್ಮೆ ಆಲೋಚಿಸಿ, ಒಂದೊಂದನ್ನೇ ಹೇಳುತ್ತ ಬಂದೆ. ಎಲ್ಲ ಘಟನೆಗಳೂ ಕಣ್ಣಮುಂದೆ ಚಿತ್ರದಂತೆ ಮೂಡಿಬಂದವು. ಯಾಕೆಂದರೆ ಈ ಘಟನೆಯನ್ನು ಮರೆಯಬೇಕೆಂದರೂ ಮರೆಯಲಾಗುವುದಿಲ್ಲ. ಇದು ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದರ ಪರಿಣಾಮ. ಪ್ರೀತಿ-ಶ್ರದ್ಧೆಯಿಂದ ಕೆಲಸಮಾಡಿದರೆ ಸಮಯದ ಕೊರತೆ ತೋರಲಾರದು; ಇಂತಹ ಪ್ರವೃತ್ತಿ ನಮ್ಮ ಭವಿಷ್ಯಕ್ಕೆ ಭದ್ರ ಪಂಚಾಂಗವಾಗಿರುತ್ತದೆ.

ಅವಕಾಶವನ್ನು ಬಳಸಿಕೊಳ್ಳಬೇಕು: ನಾನು ಅನೇಕ ಕಡೆ ಸಂಚರಿಸುವಾಗ, ವಿಮಾನ ನಿಲ್ದಾಣದಲ್ಲಿ, ಸಭೆ ಸಮಾರಂಭದಲ್ಲಿ ಸಿಕ್ಕಿದವರು ಬಂದು ನಮಸ್ಕರಿಸಿ, ‘ನಾನು ರತ್ನಮಾನಸದ ವಿದ್ಯಾರ್ಥಿ’, ‘ನಾನು ಸಿದ್ಧವನದ ವಿದ್ಯಾರ್ಥಿ’, ‘ನಾನು ನಿಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿ’- ಹೀಗೆ ಪರಿಚಯ ಮಾಡಿಕೊಳ್ಳುತ್ತಾರೆ. ಅವರೆಲ್ಲ ಇಂದು ಉನ್ನತ ಹುದ್ದೆಯಲ್ಲಿದ್ದಾರೆ, ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿದ್ದಾರೆ. ಇದು ಜೀವನದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದರ ಫಲಿತ. ಕೆಲವರು ತಮಗೆ ಒದಗಿಸಲಾದ ಸೌಲಭ್ಯಗಳಲ್ಲಿ ಲೋಪದೋಷ ಹುಡುಕುತ್ತ ಕಾಲಹರಣ ಮಾಡಿಬಿಡುತ್ತಾರೆ ಎಂಬುದು ವಿಷಾದನೀಯ.

ಪ್ರಯತ್ನ-ಅದೃಷ್ಟ ಬದುಕನ್ನು ರೂಪಿಸುತ್ತವೆ: ಹೆತ್ತವರು ಮಕ್ಕಳನ್ನು ಕರೆದುಕೊಂಡು ನಮ್ಮ ಕ್ಷೇತ್ರಕ್ಕೆ ಬರುತ್ತಾರೆ. ನಮ್ಮ ಭೇಟಿಗೆ ಬಂದಾಗ ಮಕ್ಕಳನ್ನು ಪ್ರಶ್ನಿಸಲು ಮುಂದಾಗುತ್ತೇನೆ. ‘ಏನು ಓದುತ್ತಿದ್ದೀ?’ ಎಂದರೆ ಮಗುವಿಗಿಂತ ಮೊದಲು ಅಪ್ಪ ಉತ್ತರಿಸುತ್ತಾನೆ, ‘ಯಾವ ಊರಿನವರು?’ ಎಂಬ ಪ್ರಶ್ನೆಗೆ ‘ಬೆಂಗಳೂರಿನವರು’ ಎಂಬ ಉತ್ತರ ಅಮ್ಮನಿಂದ! ಹೀಗೆ ಮಕ್ಕಳಿಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ. ಇದನ್ನು ಮಕ್ಕಳ ಮೇಲಿನ ಮಮತೆ ಎನ್ನೋಣವೇ? ಆದರೆ ಇದು ಅಸಂಬದ್ಧ. ಹೆತ್ತವರೇ ಮಕ್ಕಳನ್ನು ದುರ್ಬಲರನ್ನಾಗಿ ಮಾಡಿಬಿಡುತ್ತಾರೆ. ಚಿಂತನೆ ನಡೆಸಲು, ಸ್ವತಂತ್ರವಾಗಿ ವ್ಯವಹರಿಸಲು ಮಕ್ಕಳಿಗೆ ಅವಕಾಶ ನೀಡದೆ, ಅವರ ಬೆಳವಣಿಗೆಗೆ ನಾವೇ ಅಡ್ಡಿಯಾಗಿಬಿಡುತ್ತೇವೆ. ಮಕ್ಕಳ ಆಸಕ್ತಿಯ ಕ್ಷೇತ್ರಗಳನ್ನು ಸರಿಯಾಗಿ ಗುರುತಿಸದೆ, ಅವರಿಗೆ ಆಸಕ್ತಿಯೇ ಇಲ್ಲದ ವಿಷಯವನ್ನು ಓದುವಂತೆ ಒತ್ತಾಯಿಸುತ್ತೇವೆ. ಅದಕ್ಕಾಗಿಯೇ ಎಷ್ಟೋ ಮಕ್ಕಳು ಅರ್ಧದಲ್ಲೇ ಕಾಲೇಜನ್ನು ಬಿಟ್ಟುಬಿಡುತ್ತಾರೆ ಅಥವಾ ಅನುತ್ತೀರ್ಣರಾಗುತ್ತಾರೆ. ನಮ್ಮ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಹುಡುಗನೊಬ್ಬ ಅದನ್ನು ಬಿಟ್ಟು ಭಾರತೀಯ ನೌಕಾಪಡೆಗೆ ಸೇರಿದ. 10-15 ಲಕ್ಷ ಹಣ ಕೊಟ್ಟು ಮೆಡಿಕಲ್ ಸೇರಿದ್ದ ವಿದ್ಯಾರ್ಥಿ, ಅರ್ಧದಲ್ಲೇ ಕಾಲೇಜನ್ನು ಬಿಟ್ಟ. ಆದ್ದರಿಂದ ವಿದ್ಯಾರ್ಥಿಗಳಿಗೆ ಓದುವ ಕೋರ್ಸ್​ನಲ್ಲಿ ಆಸಕ್ತಿ, ಉತ್ಸಾಹ, ಛಲ ಬೇಕು. ಆಸಕ್ತಿ ಇಲ್ಲದಿದ್ದರೆ ಎಷ್ಟೆ ಅಂಕವಿದ್ದರೂ ಪ್ರಯೋಜನವಾಗಲಾರದು. ಅದಕ್ಕಾಗಿಯೇ ಇಂತಹ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದಕ್ಕಾಗಿ ನಮ್ಮ ಸಂಸ್ಥೆಗಳಲ್ಲಿ ‘ಮೆಂಟರ್’ ಎಂಬ ವ್ಯವಸ್ಥೆ ರೂಪಿಸಿದ್ದೇವೆ. ಒಬ್ಬ ಅಧ್ಯಾಪಕರಿಗೆ 15-20 ವಿದ್ಯಾರ್ಥಿಗಳ ಮೇಲುಸ್ತುವಾರಿ ನೀಡಿದ್ದೇವೆ. ಅವರೊಂದಿಗೆ ಈ ಅಧ್ಯಾಪಕರು ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳ ಸಮಸ್ಯೆಯ ಪರಿಹಾರಕ್ಕೆ ಮಾಗೋಪಾಯ ಸೂಚಿಸುತ್ತಾರೆ. ವಿದ್ಯಾರ್ಥಿಗೆ ಸ್ವಯಂಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿದಾಗ ಮಾತ್ರ ಓದು ಸಾರ್ಥಕವಾಗುತ್ತದೆ, ಜೀವನ ಅರ್ಥಪೂರ್ಣವಾಗುತ್ತದೆ.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು, ಅದನ್ನು ಸಾಧಿಸುವ ಛಲವಿರಬೇಕು. ಆಗ ಇನ್ನೊಬ್ಬರು ಹೇಳುವ/ಒತ್ತಾಯಿಸುವ ಪ್ರಮೇಯ ಬರುವುದಿಲ್ಲ. ಸ್ವಯಂ ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ, ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಅವರಿಗಾಗಿ ಓದಬೇಕೇ ಹೊರತು ಅಪ್ಪ-ಅಮ್ಮನಿಗಾಗಿಯೋ ಇನ್ಯಾರನ್ನೋ ಸಮಾಧಾನಪಡಿಸಲೋ ಅಲ್ಲ.

ಮಕ್ಕಳೇ! ನಿಮ್ಮ ಗುರಿಯನ್ನು ನೀವೇ ನಿರ್ಧರಿಸಿಕೊಂಡು ಸಾಧಿಸಿ. ಅದರ ಆನಂದವನ್ನೂ ದಕ್ಕಿಸಿಕೊಳ್ಳಿ. ಇದಕ್ಕೆ ಪ್ರಯತ್ನವೂ ಬೇಕು, ಅದೃಷ್ಟವೂ ಬೇಕು

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ  ಧರ್ಮಾಧಿಕಾರಿ)