ಶಿಕ್ಷಣ ಬದಲು ಸಂಪತ್ತಿಗೆ ಅಗ್ರಸ್ಥಾನ ಸಲ್ಲ

ಉಡುಪಿ: ಸಮಾಜದಲ್ಲಿ ಗೌರವ ಸಿಗಬೇಕಾದರೆ ಹಣ, ಬಂಧುತ್ವ, ವಯಸ್ಸು, ಕರ್ಮ, ವಿದ್ಯೆ ಅಗತ್ಯ. ಇದರಲ್ಲಿ ವಿದ್ಯಾವಂತನಿಗೆ ಹೆಚ್ಚಿನ ಮನ್ನಣೆ ಇದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಕೊನೆಯ ಸ್ಥಾನ ಮತ್ತು ಸಂಪತ್ತಿಗೆ ಮೊದಲ ಆದ್ಯತೆ ಲಭಿಸುತ್ತಿರುವುದು ಖೇದಕರ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಹಿರಿಯ ಶಿಕ್ಷಣ ತಜ್ಞ ಪ್ರೊ.ಪಾದೂರು ಶ್ರೀಪತಿ ತಂತ್ರಿ 80ನೇ ಜನ್ಮದಿನ ಅಂಗವಾಗಿ ಭಾನುವಾರ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿದಂತೆ ಮಾನವ ಸಿದ್ಧಿ ಪಡೆಯಬೇಕಾದರೆ ತಾನು ಮಾಡುವ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀಪತಿ ತಂತ್ರಿಯವರು ಶೈಕ್ಷಣಿಕ ಸೇವಾ ಕಾರ್ಯದ ಮೂಲಕ ನಿತ್ಯ ಕೃಷ್ಣನ ಪೂಜೆ ಮಾಡಿದ್ದಾರೆ. ಅಗಾಧ ಅಧ್ಯಯನಶೀಲತೆಯಿಂದ ಅವರೊಬ್ಬ ಚಲಿಸುವ ವಿಶ್ವಕೋಶ ಎಂದರು.

ಮಂಗಳೂರು ವಿ.ವಿ.ಯ ಮಾಜಿ ಕುಲಪತಿ ಪ್ರೊ.ಕೆ. ಭೈರಪ್ಪ, ಕರ್ನಾಟಕ ಜ್ಞಾನ ಆಯೋಗದ ಮಾಜಿ ಕಾರ್ಯದರ್ಶಿ ಡಾ. ಕೆ. ಸುಧಾ ರಾವ್ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪಾದೂರು ಶ್ರೀಪತಿ ತಂತ್ರಿ ರಚಿಸಿದ ಆಜೀವಕರು ಮತ್ತು ಕೆಲವು ವೇದೋತ್ತರ ದಾರ್ಶನಿಕ ಬೆಳವಣಿಗೆಗಳು ಕೃತಿ ಬಿಡುಗಡೆಗೊಳಿಸಲಾಯಿತು. ಪಾದೂರು ಶ್ರೀಪತಿ ತಂತ್ರಿ ಅವರ ಪತ್ನಿ ರತ್ನಾ ತಂತ್ರಿ, ಅಭಿನಂದನಾ ಸಮಿತಿ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಸ್ವಾಗತ ಸಮಿತಿ ಅಧ್ಯಕ್ಷ ಕೆ. ಗಣೇಶ್ ರಾವ್, ಪಾದೂರು ಭಾರ್ಗವ ತಂತ್ರಿ ಉಪಸ್ಥಿತರಿದ್ದರು.

ವಿಚಾರಗೋಷ್ಠಿ: ಬೆಳಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಕೆ.ಪಿ.ರಾವ್, ಲಕ್ಷ್ಮೀಶ ತೋಳ್ಪಾಡಿ , ಪ್ರಭಾಕರ ಜೋಷಿ, ಗುಂಡಿಬೈಲ್ ಸುಬ್ರಹ್ಮಣ್ಯ ಭಟ್, ಪ್ರೊ.ಮುರಳೀಧರ ಉಪಾಧ್ಯಾಯ, ಪ್ರೊ. ರವಿಶಂಕರ ಮತ್ತು ಪ್ರೊ.ರಾಜಾರಾಮ ತೋಳ್ಪಾಡಿ ಭಾಗವಹಿಸಿದ್ದರು.

ಮಂಗಳೂರು ವಿವಿ ಸ್ಥಾಪನೆಯಾಗುವಲ್ಲಿ ಶ್ರೀಪತಿ ತಂತ್ರಿಯವರ ಪರಿಶ್ರಮ ಅಪಾರವಾಗಿದೆ. ಶೋಧನಾ ಪ್ರತಿಭೆ, ಜ್ಞಾನದಿಂದಾಗಿ ಶಿವರಾಮ ಕಾರಂತರ ಪ್ರೀತಿಗೆ ಅವರು ಪಾತ್ರರಾಗಿದ್ದರು. ಕಾರಂತರು ಅವರ ಕೃತಿಗೆ ಮುನ್ನುಡಿ ಬರೆದಿರುವುದು ನೊಬೆಲ್ ಪ್ರಶಸ್ತಿಗೆ ಸಮನಾಗಿದೆ. ಯುವ ಜನತೆ ತಂತ್ರಿಯವರ ಕೃತಿಗಳನ್ನು ಅಧ್ಯಯನ ಮಾಡಬೇಕು.
– ಡಾ.ಎನ್.ಆರ್.ಶೆಟ್ಟಿ, ಕಲಬುರಗಿ ಕೇಂದ್ರೀಯ ವಿವಿ ಕುಲಾಧಿಪತಿ

ಡಿ’ಲಿಟ್ ಪದವಿಗೆ ತಂತ್ರಿಯವರ ಸಮಗ್ರ ಕೃತಿಗಳು ವಿವಿಗೆ ಸಲ್ಲಿಕೆಯಾದರೆ ಸಮಾಜಶಾಸ್ತ್ರ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಬಗ್ಗೆ ಪ್ರೊ.ಕೆ.ಭೈರಪ್ಪ ಹೆಚ್ಚಿನ ಮುತುವರ್ಜಿ ವಹಿಸಬೇಕು.
– ಪ್ರೊ. ಪಿ.ಎಸ್. ಎಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ
ವಿವಿಗಳಲ್ಲಿ ಪ್ರಾದೇಶಿಕ ನೆಲೆಯಲ್ಲಿ ಅಧಿಕಾರಿಗಳ ನೇಮಕ ಸರಿಯಲ್ಲ. ಹಿಂದು ಧರ್ಮವನ್ನು ಭಾರತೀಯರಲ್ಲದ ಪಾಶ್ಚಿಮಾತ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ನಾವೇ ಅಧ್ಯಯನ ಮಾಡಬೇಕು.
– ಪಾದೂರು ಶ್ರೀಪತಿ ತಂತ್ರಿ

Leave a Reply

Your email address will not be published. Required fields are marked *