ಹುಣಸೂರು: ಸದೃಢ ಸಮಾಜದ ಮೂಲಬೇರಿನಂತಿರುವ ಶಿಕ್ಷಣಕ್ಷೇತ್ರ ಕಲುಷಿತವಾದರೆ ಸಮಾಜ ಉಳಿಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ( ಎಲ್.ಆರ್.ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಪುರುಷೋತ್ತಮ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಎಚ್‌ಪಿಬಿಎಸ್ ಮಹಾಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಸುತ್ತಲ ಸಮಾಜವು ಕೆಡದಂತೆ ಎಚ್ಚರವಹಿಸುವ ಅಗತ್ಯವಿದೆ. ಅದಕ್ಕಾಗಿ ಸಮಾಜದ ಮೂಲ ಬೇರಿನಂತಿರುವ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಬೇಕು. ನಮ್ಮ ಸುತ್ತಲಿನ ಶಾಲೆಗಳನ್ನು ಅಭಿವೃದ್ಧಿ ಪಡಿಸಿದರೆ ಸಮಾಜದ ಏಳಿಗೆ ತಾನಾಗಿಯೇ ಆಗುತ್ತದೆ. ಸರ್ಕಾರಿ ಶಾಲೆಗಳ ಏಳಿಗೆಯು ಸಮಾಜದ ಉದ್ಧಾರವೇ ಆಗಿದೆ. ಅದಕ್ಕಾಗಿ ಕರವೇ ದತ್ತು ಪಡೆದು ಮೂಲಸೌಕರ್ಯಗಳನ್ನು ಒದಗಿಸಿ ಹುಣಸೂರು ನಗರದ ಜನತೆಗೆ ಮಾದರಿ ಶಾಲೆಯೊಂದನ್ನು ನೀಡುವ ಗುರಿ ಹೊಂದಿದೆ ಎಂದರು.
ಈ ಶಾಲೆ ನಗರದ ಮಕ್ಕಳ ಶಿಕ್ಷಣದ ಆಶಾಕಿರಣವಾಗಿ ರೂಪಿತಗೊಳ್ಳಲು ಮುಖ್ಯ ಶಿಕ್ಷಕ ಡಾ.ಮಾದುಪ್ರಸಾದ್ ಅವರ ಶ್ರಮ ಪ್ರಮುಖವಾಗಿದೆ. ಇತರ ಸಮಾಜಮುಖಿ ಸಂಘಟನೆಗಳಿಗೆ ಇದು ಸ್ಫೂರ್ತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಾಯಿನಾಥ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಶಾಲೆಯ ಮಹಿಳಾ ಸಿಬ್ಬಂದಿಯನ್ನು ಗೌರವಿಸಲಾಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಘಟಕ-1ರ ಯೋಜನಾಧಿಕಾರಿ ಧನಂಜಯ, ಕಸಾಪ ತಾಲೂಕು ಅಧ್ಯಕ್ಷ ಮಹದೇವ, ಸಾಹಿತಿಗಳಾದ ಡಾ.ರೇಣುಕಾ ಪ್ರಸಾದ್, ಜೆ ಮಹಾದೇವ ಕಲ್ಕುಣಿಕೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನರಸಿಂಹ, ಪಿಡಿಒ ಲೋಕೇಶ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಪೋಷಕರ ಸಮಿತಿ ಅಧ್ಯಕ್ಷ ಶಿವರಾಮ್, ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್, ಶಿಕ್ಷಕ ಸೋಮಸುಂದರ್ ಸಿಆರ್‌ಪಿ ಸ್ಮಿತಾ ಸಿಂಧೆ, ಕಿರುತೆರೆ ಮತ್ತು ಬೆಳ್ಳಿತೆರೆ ನಟ ಕುಮಾರ್ ಅರಸೇಗೌಡ ಇತರರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಮಹಾಸಂಭ್ರಮದ ಅಂಗವಾಗಿ ಆಯೋಜನೆಗೊಂಡಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕನ್ನಡದ ಅಸ್ಮಿಯತೆಯನ್ನು ಹಾಡಿ ಹೊಗಳುವ ಹಾಡುಗಳಿಗೆ ಮಕ್ಕಳು ಲಯಬದ್ಧವಾಗಿ ಹೆಜ್ಜೆ ಹಾಕಿದರು. ಗುರುವಿನ ಮಹತ್ವವನ್ನು ಹೇಳುವ ಗೀತೆಗಳಿಗೆ ನೃತ್ಯಮಾಡಿ ಮಕ್ಕಳು ರಂಜಿಸಿದರೆ, ಮೈಸೂರು ಜಿಲ್ಲೆಯ ಸೊಬಗನ್ನು ಕೊಂಡಾಡುವ ಹಾಡಿನ ನೃತ್ಯಕ್ಕೆ ಪ್ರೇಕ್ಷಕರೂ ಕುಣಿದು ಕುಪ್ಪಳಿಸಿದರು. ಶಿಕ್ಷಣದ ಅಗತ್ಯವನ್ನು ಹೇಳುವ ಆದಿವಾಸಿ ಮಕ್ಕಳ ವೇಷಭೂಷಣ ಧರಿಸಿ ಅಭಿನಯಿಸಿದ ಪ್ರದರ್ಶನ ಜನಮನ ಸೂರೆಗೊಂಡಿತು.