ಸಿಂಧನೂರು: ಸರ್ಕಾರದ ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆಯ ರಾಜ್ಯ ಮೆರಿಟ್ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರನ್ನು ಪರಿಗಣಿಸುತ್ತಿಲ್ಲ. ಶೇ.8 ಮೀಸಲಾತಿ ನಿರಾಕರಿಸುವ ಪ್ರಯತ್ನ ನಡೆದಿದ್ದು, ಈ ಬಗ್ಗೆ ಧ್ವನಿ ಎತ್ತುವ ಅಗತ್ಯವಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದವರಿಗೆ ಆಗುತ್ತಿರುವ ಅನ್ಯಾಯ ಕುರಿತು ನಗರದಲ್ಲಿ ಪಕ್ಷಾತೀತವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕಲಂ 371(ಜೆ) ಅನುಷ್ಠಾನಗೊಂಡು ದಶಕ ಕಳೆದರೂ ಸಮಸ್ಯೆಗಳು ಇನ್ನೂ ಬಗೆಹರಿಯುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದವರಿಗೆ ಅನ್ಯಾಯ ಮುಂದುವರಿದಿದೆ ಎಂದು ದೂರಿದರು.
ಸಿಂಧನೂರು ಜಿಲ್ಲಾ ಕೇಂದ್ರವಾಗಿಸುವ ಪ್ರಯತ್ನ ನಿರಂತರವಾಗಿರಬೇಕು. ನಗರದಲ್ಲಿ ಆರ್‌ಟಿಒ ಕಚೇರಿ ಆರಂಭಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿನ 19 ಸಾವಿರ ಶಿಕ್ಷಕರ ಕೊರತೆ ನೀಗಿಸಬೇಕು. ನವಲಿ ಜಲಾಶಯ ಘೋಷಣೆಗೆ ಸೀಮಿತವಾಗಿದ್ದು, ಅನುಷ್ಠಾನವಾಗಬೇಕು. ಇದಕ್ಕಾಗಿ ಎಲ್ಲರ ಅಭಿಪ್ರಾಯ ಆಧರಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕೆ.ವಿರೂಪಾಕ್ಷಪ್ಪ ತಿಳಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಿಂಧನೂರು ಕೇಂದ್ರಿತ ಜಿಲ್ಲೆ ಕುರಿತು ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ಮಸ್ಕಿ, ಲಿಂಗಸುಗೂರು, ಸಿರವಾರ, ಕಾರಟಗಿ, ಕನಕಗಿರಿ ಒಳಗೊಂಡ ಜಿಲ್ಲೆ ಮಾಡಬಹುದು ಎಂದು ನಾವು ಹೇಳುತ್ತಿದ್ದೇವೆ. ಸಂಬಂಧಿಸಿದ ತಾಲೂಕಿನವರ ಸಮ್ಮತಿಯೂ ಮುಖ್ಯವಾಗುತ್ತದೆ. ಎಲ್ಲ ವಿರೋಧಗಳನ್ನು ಮೀರಿ ಸರ್ಕಾರದ ಮಟ್ಟಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಈ ಹಿಂದೆ ಎಚ್.ಕೆ.ಪಾಟೀಲ್ ನೇತೃತ್ವದ ಸಮಿತಿ ನಿಯಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ. ಆದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಕುರಿತು ಗೊಂದಲುಗಳು ಮುಂದುವರಿದಿವೆ. ಹೀಗಾಗಿ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ನವಲಿ ಸಮನಾಂತರ ಜಲಾಶಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿಪಿಆರ್ ಸಿದ್ಧಗೊಂಡಿದ್ದು, ಇತ್ತೀಚೆಗೆ ತೆಲಂಗಾಣ ಸರ್ಕಾರದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. 30 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿದೆ. ಸಿಂಧನೂರನ್ನು ಶೈಕ್ಷಣಿಕ ಜಿಲ್ಲೆಯಾಗಿಸುವ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ ಎಂದು ಶಾಸಕ ಬಾದರ್ಲಿ ತಿಳಿಸಿದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಉದ್ಯೋಗ, ಶಿಕ್ಷಣ, ಮೂಲಸೌಕರ್ಯದ ಮೀಸಲಾತಿ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಯಮಗಳ ಪಾಲನೆ ಸಮರ್ಪಕವಾಗಿ ಆಗಿಲ್ಲ. ಕೆಇಎ ಸಾಫ್ಟ್‌ವೇರ್ ಲೋಪದಿಂದಾಗಿ ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಮೀಸಲಾತಿ ವಿಚಾರ ಶಾಸನ ಸಭೆಯಲ್ಲಿ ಚರ್ಚೆಯಾಗಬೇಕು ಎಂದರು.
ಜೂ.10 ರಂದು ಮತ್ತೊಮ್ಮೆ ಸಭೆ ನಡೆಸಿ ಹೋರಾಟದ ಅಂತಿಮ ನಿರ್ಧಾರ ಕೈಗೊಳ್ಳುವ ತೀರ್ಮಾನ ಮಾಡಲಾಯಿತು. ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ, ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಪ್ರಮುಖರಾದ ಎಚ್.ಎನ್.ಬಡಿಗೇರ, ಕೆ.ಮರಿಯಪ್ಪ, ಎಂ.ದೊಡ್ಡಬಸವರಾಜ, ಈರೇಶ ಇಲ್ಲೂರು, ಸಹನಾ ಹಿರೇಮಠ ಇತರರು ಇದ್ದರು.