ಶಿಕ್ಷಕರ ಅಮಾನತು ಪರ್ವ

ಬಾಗಲಕೋಟೆ: ಕರ್ತವ್ಯ ನಿರ್ಲಕ್ಷ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಕಾರಣದ ಮೇಲೆ ಒಂದೇ ಶಾಲೆಯ 12 ಜನ ಸಹ ಶಿಕ್ಷಕರು ಹಾಗೂ ಓರ್ವ ಮುಖ್ಯಶಿಕ್ಷಕ ಸೇರಿ 14 ಜನರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಶನಿವಾರ ಸಂಜೆ ಶಿಕ್ಷಕರ ಅಮಾನತು ಆದೇಶ ಹೊರಡಿಸಿದ್ದು, ಶಿಕ್ಷಕ ವಲಯದಲ್ಲಿ ತೀವ್ರ ಸಂಚಲನ ಹಾಗೂ ಬಿಸಿ ಬಿಸಿ ಚರ್ಚೆಗೆ ಗ್ರಾಸ ಒದಗಿಸಿದೆ. ಸಿಇಒ ಕಳೆದ ಮೂರು ದಿನಗಳ ಹಿಂದೆ ಬಾಗಲಕೋಟೆ ನಗರದ ಕೆಲ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ ವೇಳೆ ಕೆಲ ಶಿಕ್ಷಕರು ಗೈರು ಹಾಜರಾಗಿದ್ದರು. ಜಿಪಂ ಸಿಇಒ ಕೆಲ ತರಗತಿಗಳಿಗೆ ತೆರಳಿ ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ಪರೀಕ್ಷಿಸಿದಾಗ ಸಾಮಾನ್ಯ ಪ್ರಶ್ನೆಗಳಿಗೂ ಮಕ್ಕಳು ಉತ್ತರ ನೀಡದ್ದರಿಂದ ಗರಂ ಆದ ಗಂಗೂಬಾಯಿ ಅವರು 14 ಜನ ಶಿಕ್ಷಕರನ್ನು ತಲೆದಂಡಕ್ಕೆ ಗುರಿ ಮಾಡಿದ್ದಾರೆ.

ನವನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂ-7ರ ಸಹ ಶಿಕ್ಷಕರಾದ ಎಲ್.ಎ. ಘಸ್ತಿ, ಎನ್.ಜಿ. ಪಾಟೀಲ, ಎಸ್.ಎಂ. ಮಾಟೂರ, ಸುವರ್ಣ ಶಿವರುದ್ರಯ್ಯ, ಆರ್.ಜಿ. ಪಟ್ಟಣಶೆಟ್ಟಿ, ಆರ್.ಎಸ್. ಮಾಯಪ್ಪನವರ, ಎಸ್.ಜಿ. ತೇಲಿ, ಐ.ಎಸ್. ಸೌದಾಗರ, ಎಸ್.ಎಚ್. ನಾರಾಯಣ, ಎನ್. ಲೇಖಾ, ಎಂ. ಪ್ರೀತಿ, ಎಂ.ಡಿ. ಬಳಗೌಡರ, ಕೆಜಿಎಂಪಿಎಸ್ ನಂ-2 ಶಾಲೆಯ ಲೆಂಕಣ್ಣವರ ಹಾಗೂ ಅಮಾನತುಗೊಂಡ ಸಹ ಶಿಕ್ಷಕರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.5ರ ಮುಖ್ಯಶಿಕ್ಷಕ ಸಿ.ಬಿ.ಕಲ್ಲೋಳ ಅವರನ್ನು ಅಮಾನತು ಮಾಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ತಾತ್ಕಾಲಿಕ ಅಮಾನತು: ನವನಗರದ ವಿವಿಧ ಸೆಕ್ಟರ್​ಗಳಲ್ಲಿರುವ ಅಂಗನವಾಡಿ ಕೇಂದ್ರಗಳ 5 ಅಂಗನವಾಡಿ ಕಾರ್ಯಕರ್ತೆಯರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಸಿಇಒ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.

ನವನಗರದ ಸೆಕ್ಟರ್ 38ರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಶ್ರೀ ಚಂದಾವರಿ ಹಾಗೂ ಸೆಕ್ಟರ್ ನಂ.36ರ ಅಂಗವಾಡಿ ಕೇಂದ್ರದ ಕಾರ್ಯಕರ್ತೆ ಗಂಗೂಬಾಯಿ ಪುರಾಣಿಕ ಮಠ, ಸೆಕ್ಟರ್ ನಂ. 33ರ ಹನುಮವ್ವ ದಾಸರ, ಸೆಕ್ಟರ್ ನಂ.12ರ ನೀಲವ್ವ ಜೋಶಿ ಮತ್ತು ಸುವರ್ಣ ಚೋಪಡೆ ಅಮಾನತುಗೊಂಡ ಕಾರ್ಯಕರ್ತೆಯರು. ಈಚೆಗೆ ಈ ಕೇಂದ್ರ ಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಕಾರ್ಯ ಕರ್ತೆಯರು ಹಾಜರಿರದೇ ಸಂಬಂಧಿಸಿದ ಕೇಂದ್ರಗಳಲ್ಲಿ ಮಕ್ಕಳೂ ಇರದಿರುವುದು ಕಂಡುಬಂದಿತ್ತು. ಕಾರ್ಯಕರ್ತೆಯರು ಸಂಬಂಧಿ ಸಿದ ಯಾವುದೇ ದಾಖಲಾತಿ ಸರಿಯಾಗಿ ನಿರ್ವಹಿಸಿಲ್ಲ. ಹೀಗಾಗಿ ಶಿಸ್ತುಕ್ರಮಕ್ಕಾಗಿ ತಾತ್ಕಾಲಿಕ ವಾಗಿ ಅಮಾನತು ಮಾಡಲಾಗಿದೆ ಎಂದು ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.