ಬೆಂಗಳೂರು: ಜಿಲ್ಲಾ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ವಸತಿ ನಿಲಯಗಳು ಮತ್ತು ಟ್ಯುಟೋರಿಯಲ್‌ಗಳ ಬಗ್ಗೆ ಪರಿಶೀಲಿಸಿ ಮೂರು ದಿನದೊಳಗೆ ವರದಿ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಕೆಲವು ಜಿಲ್ಲೆಗಳಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಅನಧಿಕೃತವಾಗಿ ವಸತಿ ನಿಲಯ ಮತ್ತು ಟ್ಯುಟೋರಿಯಲ್‌ಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಈ ರೀತಿ ಅನಧಿಕೃತವಾಗಿ ನಡೆಸುತ್ತಿರುವ ವಸತಿ ನಿಲಯಗಳು ಮತ್ತು ಟ್ಯುಟೋರಿಯಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅವಘಡ ಸಂಭವಿಸದಂತೆ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.
ಈ ಹಿನ್ನಲೆಯಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಅನಧಿಕೃತವಾಗಿ ವಸತಿ ನಿಲಯ ಮತ್ತು ಟ್ಯೂಟೋರಿಯಲ್‌ಗಳನ್ನು ನಡೆಸುತ್ತಿರುವ ಬಗ್ಗೆ ತಮ್ಮ ಜಿಲ್ಲಾ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ತಕ್ಷಣ ಪರಿಶೀಲಿಸಿ ಮೂರು ದಿನದೊಳಗೆ ಮಾಹಿತಿ ಮತ್ತು ದಾಖಲೆಗಳೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಅನಧಿಕೃತವಾಗಿ ನಡೆಸುತ್ತಿರುವ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ. ಈ ಸಂಸ್ಥೆಗಳಲ್ಲಿ ಅವಘಡ ಉಂಟಾದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.