ಸಾಧನೆಯ ಯಾನ; ಇಸ್ರೋದಿಂದ ಮತ್ತಷ್ಟು ಯೋಜನೆ

blank

ಕರೊನಾ ಕಾರಣದಿಂದಾಗಿ ಎಲ್ಲ ರಂಗಗಳಂತೆ ಬಾಹ್ಯಾಕಾಶ ಕ್ಷೇತ್ರ ಸಹ 2020ರಲ್ಲಿ ಅನೇಕ ಅಡ್ಡಿಆತಂಕಗಳನ್ನು ಎದುರಿಸಿತು. ಇದರಿಂದಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅಮೆರಿಕದ ನಾಸಾ ಸೇರಿದಂತೆ ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಜಾರಿಮಾಡುವಲ್ಲಿ ಹಿನ್ನಡೆ ಕಾಣುವಂತಾಯಿತು. ಈಗ ನಿಧಾನಕ್ಕೆ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಹೊಸ ಹೊಸ ಯೋಜನೆಗಳು ಘೋಷಣೆಯಾಗತೊಡಗಿವೆ. ಈ ನಿಟ್ಟಿನಲ್ಲಿ ಇಸ್ರೋ ಒಂದು ಹೆಜ್ಜೆ ಮುಂದಿದೆ. ಈಚೆಗಷ್ಟೆ ವರ್ಷದ ಮೊದಲ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ, ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಈ ವರ್ಷ ಇಸ್ರೋ 7 ಉಪಗ್ರಹಗಳ ಉಡಾವಣೆಗೆ ಯೋಜನೆ ಸಿದ್ಧಪಡಿಸಿದೆ. ಇದರಲ್ಲಿ ಮಾನವರಹಿತ ಗಗನಯಾನವೂ ಸೇರಿದೆ. ಭೂ ವೀಕ್ಷಣಾ ಉಪಗ್ರಹಗಳು, ಸಾಗರ ಅಧ್ಯಯನ, ರಿಮೋಟ್ ಸೆನ್ಸಿಂಗ್ ಉಪಗ್ರಹ, ನ್ಯಾವಿಗೇಶನ್ ಉಪಗ್ರಹಗಳು ಈ ಸರಣಿಯಲ್ಲಿ ಸೇರಿವೆ. ಸೂರ್ಯನ ಅಧ್ಯಯನಕ್ಕೆ ಸಂಬಂಧಿಸಿ ಇಸ್ರೋ ಆದಿತ್ಯ-ಎಲ್1 ಎಂಬ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದೆ, ಆದರೆ ಆ ಯೋಜನೆ ಈ ವರ್ಷ ಜಾರಿ ಆಗುವುದಿಲ್ಲ ಎಂದು ಇಸ್ರೋ ತಿಳಿಸಿದೆ.

ಮಾನವರಹಿತ ಗಗನಯಾನವು ಮಾನವಸಹಿತ ಗಗನಯಾನದ ಪೂರ್ವಭಾವಿ ಹಂತವಾಗಿದ್ದು, ಇಲ್ಲಿ ಸಿಗುವ ಅನುಭವ ಮುಂದಿನ ಹಂತದ ಯೋಜನೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದಲ್ಲದೆ, ಇಸ್ರೋ ಮತ್ತು ಅಮೆರಿಕದ ನಾಸಾ ಜಂಟಿ ಪಾಲುದಾರಿಕೆಯಲ್ಲಿ ನಿಸಾರ್ ಎಂಬ ಉಪಗ್ರಹ 2023ರಲ್ಲಿ ಉಡಾವಣೆಯಾಗಲಿದೆ. ಇದರನ್ವಯ, ಎರಡು ರಡಾರ್ ಹೊಂದಿರುವ ಉಪಗ್ರಹವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದು ಇಂಥ ಮೊದಲ ಉಪಗ್ರಹ ಎಂಬುದು ವಿಶೇಷ. ಈ ಉಪಗ್ರಹವು ಎರಡು ರೇಡಿಯೊ ತರಂಗಾಂತರ ಹೊಂದಿದ್ದು, ಎಲ್ಲ ರೀತಿಯ ಹವಾಮಾನದಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸವ ಸಾಮರ್ಥ್ಯ ಹೊಂದಿರಲಿದೆ. ನಿಸಾರ್ 2800 ಕೆಜಿ ತೂಕ ಹೊಂದಿರಲಿದ್ದು, ಜಗತ್ತಿನ ಅತ್ಯಂತ ದುಬಾರಿ ಇಮೇಜಿಂಗ್ ಉಪಗ್ರಹ ಕೂಡಾ ಆಗಲಿದೆ. ಇಸ್ರೋ ಈಗ ಸ್ವನಿರ್ವಿುತ ಉಪಗ್ರಹಗಳನ್ನು ಮಾತ್ರವಲ್ಲದೆ, ವಿದೇಶಿ ಉಪಗ್ರಹಗಳನ್ನೂ ಕಕ್ಷೆಗೆ ಸೇರಿಸುವ ಕಾರ್ಯ ಮಾಡುತ್ತಿದೆ. ಇದರಿಂದ ಸಂಸ್ಥೆಗೆ ಆದಾಯವೂ ಬರುತ್ತದೆ. ಹೀಗಾಗಿ, ಕೇವಲ ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗುವ ಪ್ರಮೇಯ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಜತೆಗೆ ಬಾಹ್ಯಾಕಾಶ ರಂಗದಲ್ಲಿ ಜಾಗತಿಕವಾಗಿ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚುತ್ತದೆ.

ಇಸ್ರೋ ಉಡಾಯಿಸುವ ಉಪಗ್ರಹಗಳಿಂದಾಗಿ ಕೃಷಿ, ಹವಾಮಾನ, ತಂತ್ರಜ್ಞಾನ, ಸಂಪರ್ಕ ಮಾಧ್ಯಮ ಮತ್ತು ಗಡಿಯಲ್ಲಿ ನಿರಂತರ ನಿಗಾ ಮುಂತಾದ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಭಾರತದಲ್ಲಿ ಈಗ ಬಾಹ್ಯಾಕಾಶ ರಂಗವನ್ನು ಖಾಸಗಿಗೂ ತೆರೆಯುವ ನಿರ್ಣಯವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಹೀಗಾಗಿ ಖಾಸಗಿ ಸಂಸ್ಥೆಗಳು ಸಹ ಇನ್ನು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ವಿದೇಶಗಳಲ್ಲಿ ಎಲನ್ ಮಸ್ಕ್ ಅವರ ಸ್ಪೇಸ್ ಎಕ್ಸ್​ನಂತಹ ಸಂಸ್ಥೆಗಳು ಈಗಾಗಲೇ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ರಂಗ ಅಪಾರ ಹೂಡಿಕೆ ಮತ್ತು ಇನ್ನಷ್ಟು ಸಾಧ್ಯತೆಗಳ ಕ್ಷೇತ್ರವಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಭಾರತವೂ ಸಜ್ಜಾಗಬೇಕಾಗುತ್ತದೆ, ಸಜ್ಜಾಗುತ್ತಿದೆ ಕೂಡಾ.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…