Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಹಿರಿಯರ ಕಾಳಜಿ

Monday, 16.04.2018, 3:03 AM       No Comments

ವಯೋವೃದ್ಧರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಥವರ ಪಾಲನೆಯ ಹೊಣೆಗಾರಿಕೆಯನ್ನು ಅವರ ಮಕ್ಕಳು ಮಾತ್ರವಲ್ಲದೆ, ಅಳಿಯ-ಸೊಸೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನ-ಮಂಥನ ನಡೆಸಿದೆ. ಈ ಕುರಿತಂತೆ, ‘ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಯೋಗಕ್ಷೇಮ (ತಿದ್ದುಪಡಿ) ಕಾಯ್ದೆ, 2018’ ಅನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಅದು ಸಜ್ಜಾಗಿದೆ. ಮನೆ ಹಾಗೂ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರಿಗೆ ಇನ್ನಷ್ಟು ಕಾನೂನಾತ್ಮಕ ನೆರವು ನೀಡುವ, ತನ್ಮೂಲಕ ಅವರ ಹಿತಕಾಯುವ ಸದಾಶಯ ಹೊತ್ತಿರುವ ಈ ಕಾಯ್ದೆ ನಿಜಕ್ಕೂ ಶ್ಲಾಘನೀಯ ಮತ್ತು ಸ್ವಾಗತಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದರ ದುರ್ಬಳಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಹಾಗೂ ಸೂಕ್ತ ಉಪಬಂಧಗಳನ್ನು ಕಾಯ್ದೆಯಲ್ಲಿ ಅಳವಡಿಸಬೇಕಾದ ಅನಿವಾರ್ಯತೆಯೂ ಇದೆ. ಕಾರಣ, ಪರಿಷ್ಕೃತ ಕಾಯ್ದೆಯ ಕರಡು ಪ್ರತಿಯ ಅನುಸಾರ, ಪಾಲಕರು-ಹಿರಿಯ ನಾಗರಿಕರ ನಿಗಾವಣೆಯನ್ನು ನಿರ್ಲಕ್ಷಿಸುವರನ್ನು 6 ತಿಂಗಳವರೆಗೆ ಸೆರೆವಾಸಕ್ಕೆ ಕಳುಹಿಸುವ ಉಪಬಂಧಕ್ಕೂ ಇಲ್ಲಿ ಆಸ್ಪದ ಕಲ್ಪಿಸಲಾಗಿದೆ. ಸ್ವಾರ್ಥಸಾಧಕರು ಇದನ್ನು ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ಕೆಲವರ ಅಭಿಮತ.

ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಉಲ್ಲೇಖವಿಲ್ಲಿ ಸೂಕ್ತ. ಮದುವೆಯಾಗಿ ಗಂಡನ ಮನೆಗೆ ಬಂದು ಸೇರುವ ಹೆಣ್ಣುಮಕ್ಕಳು ಯಾವುದೇ ತೆರನಾದ ದೌರ್ಜನ್ಯಕ್ಕೆ ಒಳಗಾಗುವಂತಾಗಬಾರದು ಎಂಬ ಸದಾಶಯದೊಂದಿಗೆ ಜಾರಿಯಾದ ಕಾಯ್ದೆಯಿದು. ಆದರೆ ಇದರ ದುರುಪಯೋಗಕ್ಕೆ ಮುಂದಾದ ಕೆಲ ಮಹಿಳೆಯರು, ಗಂಡ ಮತ್ತು ಆತನ ಪಾಲಕರು, ಸೋದರ-ಸೋದರಿಯರೇ ಮೊದಲಾದ ಮಿಕ್ಕ ಕುಟುಂಬ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂಥ ಚಾಳಿ ಹೆಚ್ಚುತ್ತಲೇ ಹೋಗಿ ಕಾಯ್ದೆ ಮೂಲಾಶಯಕ್ಕೇ ಧಕ್ಕೆಯಾಗಿತ್ತು. ಇಂಥ ದುರುದ್ದೇಶಪೂರಿತ, ಸುಳ್ಳು ಪ್ರಕರಣಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಸವೋಚ್ಚ ನ್ಯಾಯಾಲಯದ ನ್ಯಾಯಪೀಠವೊಂದು, ವರದಕ್ಷಿಣೆ ಪ್ರಕರಣದ ಆರೋಪಿಗಳನ್ನು ಏಕಾಏಕಿ ಬಂಧಿಸುವಂತಿಲ್ಲ ಎಂದು ಆದೇಶಿಸಬೇಕಾಗಿ ಬಂತು ಎಂಬುದಿಲ್ಲಿ ಸ್ಮರಣಾರ್ಹ. ಇಂಥದೊಂದು ಸಂಭಾವ್ಯ ಬೆಳವಣಿಗೆ ಮತ್ತು ಗ್ರಹಿಕೆಯ ಬೆಳಕಲ್ಲೇ ‘ಪಾಲಕರು-ಹಿರಿಯ ನಾಗರಿಕರ ನಿರ್ವಹಣೆ ಮತ್ತು ಯೋಗಕ್ಷೇಮ (ತಿದ್ದುಪಡಿ) ಕಾಯ್ದೆ’ಯ ಸಾಧ್ಯತೆಯನ್ನು ಲೆಕ್ಕಿಸಬೇಕಾಗಿ ಬಂದಿದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ. ಸ್ವಾರ್ಥಲಾಲಸೆಯ ಕೆಲವರಿಂದಾಗಿ ಹಿರಿಯ ಜೀವಿಗಳು ಸಂಬಂಧ-ಸಂಪತ್ತು-ಸಂಸರ್ಗವೇ ಮೊದಲಾದ ತಮ್ಮದೆಲ್ಲದರಿಂದ ದೂರವಾಗಿ, ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೊಳಗಾಗಿ ವೃದ್ಧಾಶ್ರಮಗಳಲ್ಲಿ ದಿನಗಳನ್ನು ಎಣಿಸುವಂಥ ಸಂದರ್ಭಗಳಿರುವುದು ಹೌದು. ಆದರೆ ಇಂಥ ಎಲ್ಲ ನಿದರ್ಶನಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಬದಲಾದ ಕಾಲಘಟ್ಟ, ಸ್ಥಳಾವಕಾಶದ ಲಭ್ಯತೆ ಹಾಗೂ ಔದ್ಯೋಗಿಕ ಅನಿವಾರ್ಯತೆಯಂಥ ಕಾರಣಗಳಿಂದಾಗಿ, ಅವಿಭಕ್ತ ಕುಟುಂಬಗಳ ಜಾಗವನ್ನೀಗ ವಿಭಕ್ತ ಕುಟುಂಬಗಳು ಆಕ್ರಮಿಸಿವೆ. ಹೀಗಾಗಿ ಪಾಲಕರು-ಹಿರಿಯರ ಪಾಲನೆ-ಪೋಷಣೆ ಸಮರ್ಪಕವಾಗಿ ಸಾಗುವುದಿಲ್ಲ ಎಂಬ ಗ್ರಹಿಕೆಯಲ್ಲಿ ಅವರನ್ನು ವೃದ್ಧಾಶ್ರಮಗಳಲ್ಲಿರಿಸುವ ಪರಿಪಾಠ ಹೆಚ್ಚುತ್ತಿದೆ. ಹೀಗಾಗಿ ‘ಹಿರಿಯರಿಗೆ ಅನ್ಯಾಯವಾಗುತ್ತಿದೆ’ ಎಂಬ ಗ್ರಹಿಕೆ ಮುನ್ನೆಲೆಗೆ ಬಂದಾಕ್ಷಣ ಅದನ್ನು ಅಳೆದುತೂಗಿ ಅಂತಿಮ ನಿರ್ಣಯಕ್ಕೆ ಬರಬೇಕಾದ ಅಗತ್ಯವಿದೆ. ಮೂಲ ಕಾಯ್ದೆಯಲ್ಲಿ ವೃದ್ಧಾಶ್ರಮಗಳಿಗೆ ಯಾವುದೇ ಮಾನದಂಡವಿರಲಿಲ್ಲ; ಆದರೆ ಕಾಯ್ದೆಯ ಪರಿಷ್ಕೃತ ಕರಡಿನ ಅನುಸಾರ, ಅವು ಕನಿಷ್ಠಮಟ್ಟದ ಸವಲತ್ತನ್ನಾದರೂ ಹೊಂದಿರಬೇಕಾದ, ಗುಣಮಟ್ಟ ನಿಯಂತ್ರಕ ವ್ಯವಸ್ಥೆಯಿಂದ ಶ್ರೇಯಾಂಕ ಪಡೆಯಬೇಕಾದ ಅಗತ್ಯವೀಗ ಎದುರಾಗಿದೆ. ಸಾಮಾಜಿಕ ಸಮಸ್ಯೆಯೊಂದನ್ನು ಬಳಸಿಕೊಂಡು ಹಣಗಳಿಕೆಗೆಂದು ಅಣಬೆಗಳಂತೆ ತಲೆಯೆತ್ತುವ ತಥಾಕಥಿತ ವೃದ್ಧಾಶ್ರಮಗಳ ಪಾಲಿಗೆ ಇದು ಚಾಟಿಯಾಗಲಿರುವುದಂತೂ ಖರೆ.

Leave a Reply

Your email address will not be published. Required fields are marked *

Back To Top