ಸಂಪಾದಕೀಯ: ಭರವಸೆ ಈಡೇರಲಿ

blank

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ರಾಜ್ಯದ ಎಲ್ಲಾ ತಹಸೀಲ್ದಾರ್ ಹಾಗೂ ಎಡಿಎಲ್​ಆರ್​ಗಳ (ಭೂ ದಾಖಲೆಯ ಸಹಾಯಕ ನಿರ್ದೇಶಕರು) ಜತೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

blank

ಬಗರ್ ಹುಕುಂ ಯೋಜನೆಯ ನಿಯಮವನ್ನು ಕೊಂಚ ಸಡಿಲಿಸಿದ್ದು, ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಮೃತಪಟ್ಟಲ್ಲಿ ಅಂಥವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್ ಸಾಗುವಳಿ ಚೀಟಿ ನೀಡುವಂತೆ ಅವರು ನಿರ್ದೇಶನ ನೀಡಿರುವುದು ಗಮನಾರ್ಹ. ಬಗರ್ ಹುಕುಂ ಅರ್ಜಿ ಅರ್ಹವಾಗಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರಿ ಹೊತ್ತು ಜಮೀನು ಮಂಜೂರು ಮಾಡಬೇಕು ಎಂದೂ ಅವರು ಸೂಚಿಸಿದ್ದಾರೆ.

ಇದರಿಂದಾಗಿ, ಜಮೀನಿನ ಸಾಗುವಳಿ ಚೀಟಿ ಪಡೆಯಲಾಗದೆ ತೊಂದರೆ ಎದುರಿಸುತ್ತಿರುವ ರೈತರಲ್ಲಿ ಆಶಾಭಾವ ಮೂಡುವಂತಾಗಿದೆ. ಸಾಗುವಳಿ ಚೀಟಿ ಇಲ್ಲದಿದ್ದಲ್ಲಿ ರೈತರಿಗೆ ಸವಲತ್ತುಗಳು ದೊರೆಯುವುದು ಸಮಸ್ಯೆಯಾಗುತ್ತದೆ. ಬಗರ್ ಹುಕುಂ ಭೂಮಿ ಮಂಜೂರಾತಿಗೆ ಸಂಬಂಧಿಸಿ ಶಾಸಕರ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮಿತಿಗಳಿದ್ದು, ತ್ವರಿತವಾಗಿ ಈ ಸಮಿತಿಯ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡುವಂತೆಯೂ ಸಚಿವರು ಸೂಚಿಸಿದ್ದಾರೆ. ಇದರೊಂದಿಗೆ, ಪೋಡಿ ದುರಸ್ತಿ ಕಾರ್ಯದಲ್ಲಿನ ವಿಳಂಬದ ಬಗ್ಗೆಯೂ ಸಚಿವರು ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ರಾಜ್ಯ ಸರ್ಕಾರ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಿದೆ. ಆದರೆ, ಹಲವಾರು ತಾಲೂಕುಗಳಲ್ಲಿ 1-5 ನಮೂನೆ ಪೋಡಿ ದುರಸ್ತಿ ಮುಗಿದಿದ್ದರೂ ಸಂಬಂಧಪಟ್ಟ ಫೈಲುಗಳನ್ನು 6-10 ನಮೂನೆ ಸರ್ವೆ ಕೆಲಸಕ್ಕಾಗಿ ಭೂ ದಾಖಲೆಯ ಸಹಾಯಕ ನಿರ್ದೇಶಕರಿಗೆ ಕಳುಹಿಸಲು ತಹಸೀಲ್ದಾರರು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಈ ಬಗ್ಗೆಯೂ ಕೂಡಲೇ ಕ್ರಮವಾಗಬೇಕಿದೆ. ಅಧಿಕಾರಿಗಳ ಮಂದಗತಿಯ ಕೆಲಸ ಸಹಿಸಲು ಆಗದು ಎಂದು ಸಚಿವರು ಹೇಳಿದ್ದು, ಸಚಿವರ ಎಚ್ಚರಿಕೆ ಬರೀ ಮಾತಿಗೆ ಸೀಮಿತವಾಗದೆ ಅಧಿಕಾರಿಗಳು ಚುರುಕುಗತಿಯಿಂದ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ತಕರಾರು ಅರ್ಜಿ ಉಳಿಸಿಕೊಳ್ಳುವಂತಿಲ್ಲ ಎಂದಿದ್ದರೂ, ವರ್ಷಗಳಿಗಿಂತ ಹೆಚ್ಚುಕಾಲದಿಂದ ಬಾಕಿ ಉಳಿದಿರುವ ಬಗ್ಗೆ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿಯೂ ತಕ್ಷಣ ಕ್ರಮವಾಗಬೇಕು.

blank

ಕಂದಾಯ ಇಲಾಖೆ ಜನರು ಹಾಗೂ ರೈತರ ದೈನಂದಿನ ಬದುಕಿನಲ್ಲಿ ನೇರವಾಗಿ ಮಹತ್ವದ ಪಾತ್ರವನ್ನು ವಹಿಸುವುದರಿಂದ, ಇಲಾಖೆಯಲ್ಲಿನ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರು ನೀಡಿರುವ ಸಲಹೆ-ಸೂಚನೆಗಳು ಸ್ವಾಗತಾರ್ಹ. ಈ ಪೈಕಿ ಕೆಲವು ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳಾಗಿವೆ. ಇಂಥ ನ್ಯೂನತೆಗಳು ಮುಂದುವರಿದಷ್ಟು ಜನಸಾಮಾನ್ಯರಿಗೆ ತೊಂದರೆ. ಹೀಗಾಗಿ ಸಚಿವರು ತಮ್ಮ ಸಲಹೆಸೂಚನೆಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವ ದಿಕ್ಕಿನಲ್ಲಿಯೂ ಮುತುವರ್ಜಿ ವಹಿಸಬೇಕು.

Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…