ರಾಜ್ಯದಲ್ಲಿ ಎರಡೇ ದಿನಗಳಲ್ಲಿ ಎರಡು ದರೋಡೆಗಳು, ಅದೂ ಹಾಡಹಗಲೇ ನಡೆದಿರುವುದು ಕಾನೂನು ಸುವ್ಯವಸ್ಥೆಗೆ ಗ್ರಹಣ ಹಿಡಿದಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುರುಳರು ಆಕಳುಗಳ ಕೆಚ್ಚಲನ್ನು ಕತ್ತರಿಸಿ ಹಾಕಿದ ಪೈಶಾಚಿಕ ಕೃತ್ಯ ರಾಜ್ಯವನ್ನೇ ಬೆಚ್ಚಿಬೀಳಿಸಿತು.
ಇದರ ಬೆನ್ನಲ್ಲೇ, ಬೀದರ್ನ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಗುರುವಾರ ಮಧ್ಯಾಹ್ನದ ಸಮಯದಲ್ಲಿ ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಲಕ್ಷಾಂತರ ರೂಪಾಯಿಯನ್ನು ದರೋಡೆ ಮಾಡಲಾಗಿದೆ. ಗಂಡೇಟಿಗೆ ಓರ್ವ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿ ಇರುವಾಗಲೇ ಉಳ್ಳಾಲದಲ್ಲಿ ಬ್ಯಾಂಕ್ ಲೂಟಿ ನಡೆದಿದೆ. ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ (ಕೋಟೆಕಾರು ಬ್ಯಾಂಕ್) ಹಾಡಹಗಲೇ ನುಗ್ಗಿದ ಐದು ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನಾಭರಣ, ನಗದು ಹೊತ್ತೊಯ್ದಿದ್ದಾರೆ.
ಈ ಘಟನೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದು, ಆರೋಪಿಗಳ ಶೀಘ್ರ ಪತ್ತೆಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ‘ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್ಗಳನ್ನು ದಾಟಿ ಹೋಗಿದ್ದಾರೆ? ಟೋಲ್ಗಳಲ್ಲಿ ಯಾಕೆ ತಪಾಸಣೆ ಬಿಗಿಗೊಳಿಸಲಿಲ್ಲ?’ ಎಂಬ ಸರಣಿ ಪ್ರಶ್ನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಕೇಳಿದ್ದಾರೆ.
ರಾಜ್ಯದಲ್ಲಿ ಈ ಘಟನೆಗಳು ಆತಂಕ ಮೂಡಿಸಿರುವುದಂತೂ ಹೌದು. ಇದ್ದಕ್ಕಿದ್ದಂತೆ ದರೋಡೆಯ ಘಟನೆಗಳು ಹೆಚ್ಚಿರುವುದು ಹೇಗೆ? ಅದರಲ್ಲೂ, ಹಗಲಿನಲ್ಲೇ ಇಂಥ ಕೃತ್ಯ ನಡೆಸುವಷ್ಟು ಭಂಡಧೈರ್ಯ ದುರುಳರಿಗೆ ಬಂದದ್ದು ಹೇಗೆ? ರಾಜ್ಯದಲ್ಲಿ ಏನಾಗುತ್ತಿದೆ? ಯಾಕೆ ಈ ಬಗೆಯ ಘಟನೆಗಳು ಸಂಭವಿಸುತ್ತಿವೆ? ಎಂಬ ಆತಂಕಭರಿತ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.
ಕರ್ನಾಟಕ ಕಾನೂನು ಸುವ್ಯವಸ್ಥೆಗೆ ಹೆಸರಾದ ರಾಜ್ಯ. ಜಟಿಲ ಪ್ರಕರಣಗಳಲ್ಲೂ ತಪ್ಪಿತಸ್ಥರ ಹೆಡೆಮುರಿ ಕಟ್ಟಿ, ಅವರನ್ನು ಕಾನೂನಿನ ಕ್ರಮಕ್ಕೆ ಒಳಪಡಿಸಿರುವ ನಿದರ್ಶನಗಳಿವೆ. ಆದರೆ, ಈಗ ಇಂಥ ಘಟನೆಗಳು ಏಕೆ ಸಂಭವಿಸುತ್ತಿವೆ? ದರೋಡೆಕೋರರು ಹೊರರಾಜ್ಯದವರಾಗಿದ್ದರೆ, ಅಂಥವರ ಬಂಧನ ಏಕೆ ಸಾಧ್ಯವಾಗುತ್ತಿಲ್ಲ, ಹೊರರಾಜ್ಯದ ದರೋಡೆಕೋರರಿಗೆ ಇಲ್ಲಿ ಸಹಕರಿಸುತ್ತಿರುವವರು ಯಾರು, ಸ್ಥಳೀಯವಾಗಿ ಮಾಹಿತಿ ಒದಗಿಸುತ್ತಿರುವವರು ಯಾರು, ದುಷ್ಕೃತ್ಯ ಎಸಗಿಯೂ ಸುಲಭವಾಗಿ ತಪ್ಪಿಸಿಕೊಂಡು ಹೋಗುತ್ತಿರುವುದು ಹೇಗೆ ಎಂಬ ಹಲವು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.
ರಾಜ್ಯದಲ್ಲಿನ ರಾಜಕೀಯ ಗೊಂದಲಗಳು, ಭಿನ್ನಾಭಿಪ್ರಾಯಗಳು ಕಾನೂನು ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಾರದು. ಪೊಲೀಸ್ ಇಲಾಖೆಗೆ ಸುಳಿವು ಸಿಗದಂತೆ ದರೋಡೆ ಪ್ರಕರಣಗಳು ನಡೆಯುತ್ತಿವೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಸಮಾಜಘಾತಕ ಶಕ್ತಿಗಳಿಗೆ ಭಯವೇ ಇಲ್ಲದಂತಾಗಿರುವುದು ನಿಜಕ್ಕೂ ದುರದೃಷ್ಟಕರ. ಇನ್ನಾದರೂ, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ತಪ್ಪಿತಸ್ಥರನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಬೇಕು. ಮತ್ತು ಇತರೆಡೆಗಳಲ್ಲಿ ದರೋಡೆ ಅಥವಾ ಕಳ್ಳತನ ಸೇರಿದಂತೆ ಸಮಾಜವಿರೋಧಿ ಕೃತ್ಯಗಳು ನಡೆಯದಂತೆ ವ್ಯವಸ್ಥೆಯನ್ನು, ಬಂದೋಬಸ್ತ್ನ್ನು ಬಿಗಿಗೊಳಿಸಬೇಕು.