|ಗೊಲ್ಲರಹಟ್ಟಿಯಲ್ಲಿ ಹಸುಗೂಸು ಸಾವು
ಮೈಲಿಗೆಯ ಹೆಸರಿನಲ್ಲಿ ಬಾಣಂತಿ ಹಾಗೂ ಮಗುವನ್ನು ಗ್ರಾಮದಿಂದ ಹೊರಗಿಟ್ಟ ಪರಿಣಾಮ ಹಸುಗೂಸೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆಗೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಸಾಕ್ಷಿಯಾಗಿದೆ. ವ್ಯಾಪಕ ಆರೋಗ್ಯ ಕಾಳಜಿ ಇರುವ ಹಾಗೂ ವೈದ್ಯಕೀಯ ಸವಲತ್ತುಗಳಿಂದ ಸಮೃದ್ಧವಾಗಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮೌಢ್ಯಾಚಾರಣೆಯಿಂದಾಗಿ ಮಗುವೊಂದು ಸಾವನ್ನಪ್ಪಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ. ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ಕೇವಲ 10 ಕಿಮೀ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಬರೀ 87 ಕಿಮೀ ಅಂತರದ ಗ್ರಾಮದಲ್ಲಿ ಈ ಘಟನೆ ಜರುಗಿರುವುದು ತಳ ಸಮುದಾಯಗಳಲ್ಲಿ ಬೇರೂರಿರುವ ಜೀವಹಾನಿಕಾರಕ ಮೌಢ್ಯಗಳ ಆಚರಣೆ ನಿವಾರಣೆಗಾಗಿ ಜಾಗೃತಿಕ ಮೂಡಿಸುವಲ್ಲಿ ಆಡಳಿತ ವರ್ಗ ಹಾಗೂ ಸಮಾಜಮುಖಿ ಸಂಸ್ಥೆಗಳ ವೈಫಲ್ಯವನ್ನು ಬಿಂಬಿಸುತ್ತದೆ.
ಈ ಘಟನೆಯ ವಿವರವನ್ನು ಕೆದಕಿದಾಗ ಬೆಚ್ಚಿಬೀಳುವ ಅಂಶಗಳು ಕಂಡುಬರುತ್ತವೆ. ಬಾಣಂತಿಯರ ಮೈಗೆ ಕಾವು ನೀಡುತ್ತ ಕನಿಷ್ಠ 3 ತಿಂಗಳು ಮನೆಯೊಳಗೆ ಬೆಚ್ಚನೆಯ ವಾತಾವರಣದಲ್ಲಿ ಇಡುವ ಸಾಮಾನ್ಯ ರೂಢಿ ಎಲ್ಲೆಡೆ ಇದೆ. ಆದರೆ, ಹೊರಗೆ ಕಾಲಿಡಲೂ ಹಿಂಜರಿಯುವಂತಹ ಮಳೆಗಾಲದಲ್ಲಿ, ಅದರಲ್ಲೂ ಊರಾಚೆಯ ಗುಡಿಸಲೊಂದರಲ್ಲಿ ಅವಧಿಪೂರ್ವ ಪ್ರಸವದಿಂದ ಜನಿಸಿದ್ದ ಮಗು ಹಾಗೂ ಹಸಿ ಬಾಣಂತಿಯನ್ನು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇರಿಸಲಾಗಿತ್ತು. ಮಗು ಶೀತ ಹಾಗೂ ಜ್ವರಕ್ಕೆ ತುತ್ತಾಗಿದ್ದು, ನಂತರ ತುಮಕೂರು ಜಿಲ್ಲಾಸ್ಪತೆಯಲ್ಲಿ ಸಾವನ್ನಪ್ಪಿದೆ. ಕಳೆದ ಜೂನ್ 22ರಂದು ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಳು. ಒಂದು ಮಗು ಹುಟ್ಟುವಾಗಲೇ ಮೃತಪಟ್ಟಿದ್ದರೆ, ಮತ್ತೊಂದು ಮಗು ಈಗ ಮೌಢ್ಯದಿಂದ ಅಸುನೀಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಗೊಲ್ಲ ಜನಾಂಗದವರು ಅಲೆಮಾರಿಗಳು. ಬಯಲಿನಲ್ಲಿಯೇ ಜೀವನ ನಡೆಸಬೇಕಾಗಿದ್ದರಿಂದ ವಾತಾವರಣದ ಏರಿಳಿತ ತಡೆದುಕೊಳ್ಳುವ ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಹಿರಿಯರು ಮಗು-ಬಾಣಂತಿಯನ್ನು ಬಯಲು ಗುಡಿಸಲಿನಲ್ಲಿ ಇರಿಸುವ ಪದ್ಧತಿ ರೂಢಿಗೆ ತಂದಿರಬಹುದು. ಹಿಂದಿನ ತಲೆಮಾರುಗಳು ತಮ್ಮ ತಿಳಿವಳಿಕೆಗಳ ಅನುಗುಣವಾಗಿ ಸದುದ್ದೇಶದಿಂದಲೇ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿವೆ. ಆದರೆ, ಆಯಾ ಕಾಲಘಟ್ಟದಲ್ಲಿನ ವೈಜ್ಞಾನಿಕ ಬೆಳವಣಿಗಳು, ಚಿಂತನೆಗಳಿಗೆ ಅನುಸಾರವಾಗಿ ಇವುಗಳನ್ನು ನಮ್ಮ ಹಿತಕ್ಕಾಗಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಗೊಲ್ಲ ಜನಾಂಗದವರಲ್ಲಿ ಇನ್ನಾದರೂ ಜಾಗೃತಿ ಮೂಡುವ ಅವಶ್ಯಕತೆ ಇದೆ.
ಗೊಲ್ಲ ಸಮುದಾಯದಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿಲ್ಲವೆಂದೇನಲ್ಲ. ಈ ಹಿಂದೆ ಗೊಲ್ಲ ಜನಾಂಗದ ಕೆಲ ಸ್ವಾಮೀಜಿಗಳು ಗೊಲ್ಲರಹಟ್ಟಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಮಡಿ-ಮೈಲಿಗೆ ಅಂತ ಹೆಣ್ಣುಮಕ್ಕಳಿಗೆ ತೊಂದರೆ ತರಬೇಡಿ ಎಂದು ತಿಳಿವಳಿಕೆ ಹೇಳಿದ್ದರೂ ಮೌಢ್ಯಾಚರಣೆಗಳು ಸಂಪೂರ್ಣವಾಗಿ ಮರೆಯಾಗಿಲ್ಲ. ಇಂತಹ ಸಂಪ್ರದಾಯ ಆಚರಣೆ ಅವಧಿಯಲ್ಲಿ ಮಹಿಳೆಯರ ಗೋಳಾಟ ನಿವಾರಿಸಲು, ರಕ್ಷಣೆ ಒದಗಿಸಲು ಸರ್ಕಾರ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವತ್ತ ಚಿಂತಿಸಬೇಕಾಗಿದೆ.