More

    ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು…

    ಒಂದೆಡೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವ ಕನಸು. ಮತ್ತೊಂದೆಡೆ, ಪಾತಾಳಕ್ಕೆ ಇಳಿಯುತ್ತಿರುವ ಜಿಡಿಪಿ, ಕುಸಿತ ಕಾಣುತ್ತಿರುವ ಉದ್ಯಮವಲಯ, ನಷ್ಟ ಹೆಚ್ಚಿಸಿಕೊಳ್ಳುತ್ತಿರುವ ಪಿಎಸ್​ಯುುಗಳು. ಇನ್ನು, ಉದ್ಯೋಗಸೃಷ್ಟಿ ಪ್ರಕ್ರಿಯೆ ಆಮೆಗತಿ ತಳೆದಿರುವುದರಿಂದ ಯುವಕರ ನಿರೀಕ್ಷೆ, ಕನಸುಗಳು ಕಮರುತ್ತಿವೆ. ಅಷ್ಟೇ ಅಲ್ಲ, ಹಲವು ವಲಯಗಳಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆ ವೇಗವಾಗಿ ಸಾಗಿದ್ದು, ಇದರಿಂದ ನೇರ ಜನಸಾಮಾನ್ಯರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ. ಎನ್​ಡಿಎ ಮೊದಲ ಅವಧಿಯಲ್ಲಿ ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿಯಂಥ ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು. ಇದರಿಂದ ಸಕಾರಾತ್ಮಕ-ನಕಾರಾತ್ಮಕ ಎರಡೂ ಪರಿಣಾಮಗಳನ್ನು ಕಾಣಬೇಕಾಯಿತು.

    ಎನ್​ಡಿಎ ಎರಡನೇ ಅವಧಿಯಲ್ಲಿ ಆರ್ಥಿಕಾಭಿವೃದ್ಧಿಯ ದೊಡ್ಡ ಕನಸುಗಳನ್ನೇ ಬಿತ್ತಲಾಯಿತು. ಆದರೆ, ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿ ಸಾಗಿದೆ ಎಂಬುದಕ್ಕೆ ದೇಶದಲ್ಲಿನ ಬೆಳವಣಿಗೆಗಳೇ ಸಾಕ್ಷಿ. ರೂಪಾಯಿ ಕುಸಿತ ಕಂಡಿದೆ, ಉದ್ಯಮಗಳು ಬಾಗಿಲು ಹಾಕುತ್ತಿವೆ, ಅಗತ್ಯವಸ್ತುಗಳ ಬೆಲೆಏರಿಕೆ ಆಗುತ್ತಿದೆ. ಅಲ್ಲದೆ, ಪರಿಪೂರ್ಣ ಸಿದ್ಧತೆ ಇಲ್ಲದೆ ಜಾರಿಗೊಳಿಸಿದ ಜಿಡಿಪಿ ಹಲವು ಸಮಸ್ಯೆಗಳಿಗೂ ಕಾರಣವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೂ ಆಗಿದೆ ಎಂಬುದು ನಿಜವಾದರೂ, ಅದು ದೀರ್ಘಾವಧಿಯಾಗಿ ಮುಂದುವರಿಯುತ್ತಿರುವುದು ಹಲವು ಪ್ರಶ್ನೆ, ಅನುಮಾನಗಳಿಗೆ ಕಾರಣವಾಗಿದೆ. ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಈ ಬಾರಿ ವಿತ್ತ ಖಾತೆಯ ಹೊಣೆ ಹೊತ್ತಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಿದ್ದಾರೆ ಎಂಬ ಆಕ್ಷೇಪಗಳು ದೊಡ್ಡದನಿಯಲ್ಲಿ ಕೇಳಿಬರುತ್ತಿವೆ. ಜನಸಾಮಾನ್ಯರಂತೂ ಬಿಡಿ, ನಿರ್ಮಲಾರ ಪತಿಯೇ ಈ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದರು ಎಂಬುದನ್ನು ಮರೆಯುವಂತಿಲ್ಲ. ಅಷ್ಟೇ ಅಲ್ಲ, ಈರುಳ್ಳಿ ದರಏರಿಕೆಯ ಪ್ರಶ್ನೆ ಬಂದಾಗ ಪರಿಹಾರದ ದಾರಿ ಬಗ್ಗೆ ರ್ಚಚಿಸುವುದನ್ನು ಬಿಟ್ಟು ವಿತ್ತ ಸಚಿವರು ‘ನಮ್ಮ ಮನೆಯಲ್ಲಿ ಈರುಳ್ಳಿ ತಿನ್ನುವುದಿಲ್ಲ’ ಎಂಬ ಹೇಳಿಕೆ ನೀಡಿದ್ದು, ವಿರೋಧ ಮತ್ತು ಚರ್ಚೆಗೆ ಕಾರಣವಾಗಿತ್ತು.

    2020ಕ್ಕೆ ಅಡಿ ಇಟ್ಟಿರುವುದರಿಂದ ಜನರ ನಿರೀಕ್ಷೆಗಳೂ ಹೆಚ್ಚಿವೆ. ಈ ನಿರೀಕ್ಷೆಗಳ ಭಾರ ಹೆಚ್ಚಿರುವುದರಿಂದ ಸುಧಾರಣೆಯ ಗತಿ ಸ್ಪಷ್ಟವಾಗಿ ಕಾಣಿಸದೆ ಇರಬಹುದು. ಅದೇನಿದ್ದರೂ, ನಿರುದ್ಯೋಗ ಪ್ರಮಾಣ ಏರುತ್ತಿರುವುದು, ಯುವಕರಲ್ಲಿ ನಿರಾಸೆ ಮನೆ ಮಾಡಿರುವುದು, ಜಿಡಿಪಿ ಕುಸಿಯುತ್ತಲೇ ಸಾಗಿರುವುದು ಗೋಡೆಬರಹದಷ್ಟೇ ಸ್ಪಷ್ಟ. ಈ ಸಂಬಂಧ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಮತ್ತಷ್ಟು ಹೊಸ ಸಮಸ್ಯೆಗಳು ಸೃಷ್ಟಿಯಾಗುವುದನ್ನು ತಳ್ಳಿಹಾಕುವಂತಿಲ್ಲ. ಈ ಆರ್ಥಿಕ ಗ್ರಹಣ ಯಾವಾಗ ಬಿಡುವುದು ಎಂಬ ಜನಸಾಮಾನ್ಯರ ಪ್ರಶ್ನೆ, ಆತಂಕಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕಿದೆ. ಬೆಲೆಏರಿಕೆ ತಡೆಯಲು, ಉದ್ಯಮಗಳು ಚೇತರಿಕೆ ಕಾಣುವಂತಾಗಲು ಕಾಳಜಿ ವಹಿಸಬೇಕು. ಸಿಎಎ-ಎನ್​ಆರ್​ಸಿಯ ಪರ-ವಿರೋಧ ದನಿಗಳ ಅಬ್ಬರದ ಮಧ್ಯೆ ಆರ್ಥಿಕತೆಗೆ ಸಂಬಂಧಿಸಿದ ಸರಣಿ ಸಮಸ್ಯೆಗಳು ಹಿನ್ನೆಲೆಗೆ ಸರಿಯುತ್ತಿವೆ. ಹಾಗಾಗಿ, ಸರ್ಕಾರ ಎಚ್ಚೆತ್ತುಕೊಂಡು ಮುಂದಿನ ದಾರಿಯನ್ನು ಶೋಧಿಸಬೇಕು, ಹೊಸ ವರ್ಷದಲ್ಲಿ ಆರ್ಥಿಕ ಪ್ರಗತಿಯ ಮಾರ್ಗವನ್ನು ಪ್ರಶಸ್ತವಾಗಿಸಬೇಕು. ಆಗಲೇ ಅಭಿವೃದ್ಧಿಯ ಆಶಯ, ಜನರ ನಿರೀಕ್ಷೆ ಈಡೇರಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts