More

  ಸಂಪಾದಕೀಯ: ಸುರಕ್ಷೆಯ ಕಡೆಗಣನೆ ಸಲ್ಲ

  ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಗ್ಗೆ ಕಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 15 ಜನರು ಸಾವಿಗೀಡಾಗಿದ್ದು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಿಗ್ನಲ್​ನಲ್ಲಿನ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಲ್ಲದೆ, ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ವಿಫಲಗೊಂಡಿದ್ದರಿಂದ ಗೂಡ್ಸ್ ರೈಲಿನ ಲೋಕೋಪೈಲಟ್​ಗೆ ಕೆಂಪುದೀಪ ದಾಟಲು ರಾಣಿಪತ್ರಾ ಸ್ಟೇಷನ್ ಮಾಸ್ಟರ್ ಅನುಮತಿಸಿದ್ದರು ಎಂದು ರೈಲ್ವೆ ಮೂಲಗಳು ಹೇಳಿವೆ. ನಿಜಕ್ಕೂ ಇದು ದುರದೃಷ್ಟಕರ ಘಟನೆಯಾಗಿದ್ದು, ಸುರಕ್ಷೆಯನ್ನು ಮೊದಲ ಆದ್ಯತೆಯಾಗಿಸಬೇಕಾದ ಅಗತ್ಯವಿದೆ.

  ಅಪಘಾತದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿರುವುದು ವಿಪರ್ಯಾಸ. ಇಂಥ ಸಂಕಷ್ಟಗಳ ಸಮಯದಲ್ಲಾದರೂ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರಿಂದ ಜನರು ಸಂವೇದನೆಯ ನಡವಳಿಕೆಯನ್ನು ನಿರೀಕ್ಷಿಸುತ್ತಾರೆ. ಪ್ರತಿಪಕ್ಷವೆಂದರೆ ಬರೀ ಟೀಕೆ ಮಾಡುವುದಕ್ಕೆ ಸೀಮಿತವಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಪಕ್ಷಗಳಿಗೆ ಮಹತ್ತರ ಹೊಣೆಗಾರಿಕೆ ಇದ್ದು, ಆ ಉತ್ತರದಾಯಿತ್ವವನ್ನು ನಿಭಾಯಿಸಬೇಕಿದೆ.

  ಪಶ್ಚಿಮ ಬಂಗಾಳದ ಘಟನೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ರಾಜೀನಾಮೆಗೂ ಆಗ್ರಹಿಸಿದ್ದಾರೆ. ಇದು ಆರೋಪ-ಪ್ರತ್ಯಾರೋಪಗಳ ಸಮಯ ಅಲ್ಲ. ಘಟನೆಗೆ ನೈಜ ಕಾರಣ ಕಂಡುಹಿಡಿದು ಮುಂದೆ ಯಾವತ್ತೂ ಅಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಸಮಯ. ಇದರ ಜತೆಗೆ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

  292 ಜನರ ಸಾವಿಗೆ ಕಾರಣವಾದ 2023ರ ಬಾಲೇಶ್ವರ ಅವಘಡಕ್ಕೂ ಕೊನೆಯ ಕ್ಷಣದಲ್ಲಿ ಸಿಗ್ನಲ್ ಬದಲಾವಣೆ ಆಗಿದ್ದೇ ಕಾರಣ ಎಂಬುದು ತನಿಖೆಯಿಂದ ತಿಳಿದುಬಂತು. ದೇಶದಲ್ಲಿ 2017ರಿಂದ 2021ರ ನಡುವೆ 1,800 ರೈಲು ಅವಘಡಗಳು ಸಂಭವಿಸಿವೆ. ಅವುಗಳಲ್ಲಿ ಸಿಗ್ನಲ್ ಸಮಸ್ಯೆಗೆ ಸಂಬಂಧಿಸಿದ ಅಪಘಾತಗಳ ಸಂಖ್ಯೆ 211. ‘ಸಿಗ್ನಲ್ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶದ ಸಂಪನ್ಮೂಲ ಮತ್ತು ಜೀವಕ್ಕೆ ಹಾನಿಯಾಗುತ್ತದೆ. ಇದನ್ನು ತಪ್ಪಿಸಬೇಕು’ ಎಂದು 2022ರ ಡಿಸೆಂಬರ್​ನಲ್ಲಿ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೂ, ಸಿಗ್ನಲ್ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸದಿರುವುದು ರೈಲ್ವೆ ಇಲಾಖೆ ತಳೆದಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿ. ರೈಲು ಮತ್ತು ರೈಲು ಹಳಿಗಳ ಸುರಕ್ಷತೆಯನ್ನು ರೈಲ್ವೆ ಇಲಾಖೆ ನಿರ್ಲಕ್ಷಿಸಿದೆ ಎಂದು ಬೊಟ್ಟು ಮಾಡಿದ್ದ ಸಿಎಜಿ ವರದಿ, ರೈಲು ಹಳಿಗಳ ನವೀಕರಣ ಮತ್ತು ನಿರ್ವಹಣೆ ಮಾಡದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶದಡಿ ಪ್ರತಿ ಆರ್ಥಿಕ ವರ್ಷದಲ್ಲಿ ಮಾಡುತ್ತಿರುವ ಸುರಕ್ಷಾ ವೆಚ್ಚವೂ ಇಳಿಕೆಯಾಗಿದೆ.

  See also  ಜನಪ್ರಿಯತೆ, ಜಾತಿ ಬಲವೇ ಮಾನದಂಡ

  ಹೊಸ ತಂತ್ರಜ್ಞಾನದ ಅಳವಡಿಕೆ ಮತ್ತು ಮೂಲಸೌಕರ್ಯದ ಹೆಚ್ಚಳದಲ್ಲಿ ರೈಲ್ವೆ ಇಲಾಖೆ ಗಮನಾರ್ಹ ಸಾಧನೆ ಮಾಡಿರುವುದು ಹೌದಾದರೂ, ಸುರಕ್ಷಾ ಕ್ರಮಗಳ ಅಳವಡಿಕೆಯಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬೇಕು.

   

  ರಾಷ್ಟ್ರ ರಾಜಧಾನಿಯಲ್ಲೇ ಮರ್ಯಾದೆಗೇಡು ಹತ್ಯೆ; ಸ್ವಂತ ಮಗಳನ್ನೇ ನಿರ್ದಯವಾಗಿ ಕೊಂದ ತಂದೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts