ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಕೈಗಾರಿಕಾ ವಲಯವು ಮಹತ್ವದ ಪಾತ್ರ ವಹಿಸುತ್ತಿದೆ. ಅದರಲ್ಲೂ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ, ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ವಿಸ್ತರಣೆ ಆಗುತ್ತಿರುವುದು ಪೂರಕ ಬೆಳವಣಿಗೆ. ಅಲ್ಲದೆ, ಎಂಎಸ್ಎಂಇಗಳು ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಅಲ್ಪಾವಧಿಯಲ್ಲೇ ವಿಸ್ತಾರಗೊಳ್ಳುತ್ತಿರುವುದರಿಂದ ಇವುಗಳ ವ್ಯಾಪ್ತಿ ಮತ್ತು ಶಕ್ತಿ ಎರಡೂ ಹೆಚ್ಚುತ್ತಿವೆ. ರಾಜ್ಯದ ಅಭಿವೃದ್ಧಿಗೂ, ಎಂಎಸ್ಎಂಇ ಬೆಳವಣಿಗೆಗೂ ನೆರವಾದ ನಂಟಿದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳೆದಷ್ಟು ರಾಜ್ಯದ ಅಭಿವೃದ್ಧಿ ಸಾಧ್ಯ. ಇದರಿಂದ ತಲಾ ಆದಾಯ ಹೆಚ್ಚಿ, ಜೀವನಮಟ್ಟ ಉತ್ತಮಗೊಳ್ಳುತ್ತದೆ, ನಿರುದ್ಯೋಗ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವೂ ಆಗಿದೆ. ಕರ್ನಾಟಕವು 20 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳನ್ನು ಹೊಂದಿದ್ದು. ಇವುಗಳ ಮೂಲಕ 1.85 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಯಾಗಿದೆ ಎಂಬುದೇ ಈ ವಲಯದ ಸಾಮರ್ಥ್ಯಕ್ಕೆ ನಿದರ್ಶನ. ರಾಜ್ಯದಲ್ಲಿ ಕೃಷಿ ಕ್ಷೇತ್ರವನ್ನು ಬಿಟ್ಟರೆ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿರುವುದು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೇ ಎಂಬುದು ಗಮನಾರ್ಹ. ಯುವಕರಿಗೆ, ಉದ್ಯೋಕಾಂಕ್ಷಿಗಳಿಗೆ ಕೌಶಲ ತರಬೇತಿ ನೀಡಿ, ಅವರನ್ನು ಉದ್ಯೋಗಕ್ಕೆ ಅಣಿಗೊಳಿಸಿದರೆ ಈ ವಲಯ ಪ್ರವೇಶಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.

ಎಂಎಸ್ಎಂಇಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿವೆ. ಆದರೆ, ಎಂಎಸ್ಎಂಇಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡಬೇಕು. ಇದರಿಂದ ಆಡಳಿತ ವಿಕೇಂದ್ರೀಕರಣ ಸೇರಿದಂತೆ ಹಲವು ಅನುಕೂಲ ಆಗುತ್ತದೆ ಎಂದು ರಾಜ್ಯದ ಉದ್ಯಮ ವಲಯ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದೆ. ಕೊನೆಗೂ, ಈ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕಾಸಿಯಾ ಅಮೃತ ಮಹೋತ್ಸವ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಎಂಎಸ್ಎಂಇಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡಲಾಗುವುದು. ಅದಕ್ಕೆ ಮಂತ್ರಿ ಮತ್ತು ಕಾರ್ಯದರ್ಶಿಯನ್ನು ನೇಮಿಸಲಾಗುವುದು. ಇದಕ್ಕೆ ಸಂಬಂಧಿಸಿ ಶೀಘ್ರ ಸಭೆ ಕರೆದು ರ್ಚಚಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಇದೊಂದು ಉತ್ತಮ ಮತ್ತು ಸಕಾಲಿಕ ಹೆಜ್ಜೆ. ಹಲವು ರಾಜ್ಯಗಳಲ್ಲಿ ಇದು ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕದಲ್ಲೂ ಪ್ರತ್ಯೇಕ ಇಲಾಖೆ ಅಸ್ತಿತ್ವಕ್ಕೆ ಬಂದರೆ ಎಂಎಸ್ಎಂಇ ವಲಯದ ಕಳವಳಗಳಿಗೆ, ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಸಿಗಲಿದೆ. ಬೆಳವಣಿಗೆಗೂ ಹೆಚ್ಚಿನ ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಯಾವುದೇ ಬಗೆಯ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಸ್ಪಷ್ಟವಾದ ನೀತಿಯನ್ನು ರೂಪಿಸಬೇಕು. ಅನುದಾನದ ಲಭ್ಯತೆ, ಬಳಕೆ ಮತ್ತು ಬಜೆಟ್ನಲ್ಲಿ ಘೋಷಿಸಲಾದ ಇತರ ಕಾರ್ಯಕ್ರಮಗಳ ಅನುಷ್ಠಾನವು ಪ್ರತ್ಯೇಕ ಇಲಾಖೆಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬಹುದು. ಸಣ್ಣ ಕೈಗಾರಿಕೆಗಳು ವಿತ್ತ ಕ್ಷೇತ್ರದಲ್ಲಿ ಹೊಸ ಆಶಾವಾದವನ್ನು ಮೂಡಿಸಿದ್ದು, ಅದಕ್ಕೆ ಪೂರಕವಾದಂಥ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾದರೆ ಹೆಚ್ಚು ಪ್ರಯೋಜನಕಾರಿ.