ಸಿನಿಮಾ

ಕನ್ನಡಿಗರ ಸಾಧನೆ: ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ದೇಶದ ಪ್ರತಿಷ್ಠಿತ ನೇಮಕಾತಿ ಪರೀಕ್ಷೆ ಎಂದೇ ಪರಿಗಣಿತವಾಗಿರುವ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶಗಳು ಈಗ ಹೊರಹೊಮ್ಮಿದ್ದು, ಈ ಬಾರಿಯೂ ಅನೇಕ ಕನ್ನಡಿಗರು ಯಶಸ್ಸು ಸಾಧಿಸಿರುವುದು, ಅದರಲ್ಲೂ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುವುದು ಕರ್ನಾಟಕಕ್ಕೆ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಐಎಎಸ್, ಐಪಿಎಸ್, ಐಎಫ್​ಎಸ್, ಐಆರ್​ಎಸ್ ಸೇರಿದಂತೆ ಅಂದಾಜು 24 ರೀತಿಯ ಉನ್ನತ ಸೇವೆಯ ಹುದ್ದೆಗಳ ನೇಮಕಾತಿಗಾಗಿ ಪ್ರತಿವರ್ಷ ಕೇಂದ್ರ ಸರ್ಕಾರದ ವತಿಯಿಂದ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಸರ್ಕಾರಿ ಅಧಿಕಾರಿಯಾಗುವ ಕನಸನ್ನು ಬಹಳ ಮಂದಿ ಕಾಣುತ್ತಾರೆ. ಹೀಗಾಗಿ, 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪ್ರತಿವರ್ಷ ಈ ಪರೀಕ್ಷೆಯನ್ನು ಎದುರಿಸುತ್ತಾರೆ. ಮೂರು ಹಂತಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. ಮೊದಲು ಪ್ರಿಲಿಮ್ರಿ (ಪೂರ್ವಭಾವಿ) ಪರೀಕ್ಷೆ ನಡೆದು, ಅಂದಾಜು 13 ಸಾವಿರ ಅಭ್ಯರ್ಥಿಗಳು ಮೇನ್ಸ್ (ಮುಖ್ಯ) ಪರೀಕ್ಷೆ ಎದುರಿಸಲು ಅರ್ಹತೆ ಪಡೆಯುತ್ತಾರೆ. ಮೇನ್ಸ್ ಪರೀಕ್ಷೆಯಲ್ಲಿ ಅಂದಾಜು 2500 ಜನರು ಅಂತಿಮ ಹಂತದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನ ಎದುರಿಸಲು ಆಯ್ಕೆಯಾಗುತ್ತಾರೆ. ಅಂತಿಮವಾಗಿ ಅಂದಾಜು ಒಂದು ಸಾವಿರ ಅಭ್ಯರ್ಥಿಗಳು ಯಶ ಗಳಿಸಿ ಅಧಿಕಾರಿಗಳಾಗಿ ನೇಮಕಗೊಳ್ಳುತ್ತಾರೆ. ಒಟ್ಟಾರೆ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ ಯಶ ಗಳಿಸುವವರ ಸಂಖ್ಯೆ ಅಂದಾಜು 0.2 ಪ್ರತಿಶದಷ್ಟು ಮಾತ್ರ. ಅಂದರೆ, ಸಾವಿರಕ್ಕೆ ಇಬ್ಬರು ಮಾತ್ರ. ಈ ಪರೀಕ್ಷೆ ಎಷ್ಟೊಂದು ಕಠಿಣವಾಗಿರುತ್ತದೆ ಹಾಗೂ ಸ್ಪರ್ಧಾತ್ಮಕವಾಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಹಿಂದೆ ಈ ಪರೀಕ್ಷೆಗಳಲ್ಲಿ ಉತ್ತರ ಭಾರತದವರೇ ಹೆಚ್ಚು ಯಶಸ್ಸು ಗಳಿಸುತ್ತಿದ್ದರು. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದ್ದುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಅಲ್ಲದೆ, ದೇಶದ ರಾಜಧಾನಿ ದೆಹಲಿಯಲ್ಲಿ ಈ ಪರೀಕ್ಷೆಗೆ ಸಾಕಷ್ಟು ತರಬೇತಿ ಕೇಂದ್ರಗಳಿದ್ದು, ಅಲ್ಲಿ ಪರೀಕ್ಷೆ ತಯಾರಿಗೆ ಅಗತ್ಯವಿರುವ ವಾತಾವರಣವಿರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರು ಗಮನಾರ್ಹ ಪ್ರಮಾಣದಲ್ಲಿ ಈ ಪರೀಕ್ಷೆಯಲ್ಲಿ ಯಶ ಸಾಧಿಸುತ್ತಿದ್ದಾರೆ. ಮೇನ್ಸ್ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಎದುರಿಸಲು ಅವಕಾಶ ದೊರೆತಿರುವುದು ಸಹ ಇದಕ್ಕೆ ಕಾರಣವಾಗಿದೆ.

ಹೀಗಾಗಿ, ಕನ್ನಡ ಮಾಧ್ಯಮದಲ್ಲಿ ಓದಿದವರು, ಹಳ್ಳಿಯ ಶಾಲೆಗಳಲ್ಲಿ ಕಲಿತವರು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. 2020ರಲ್ಲಿ 18 ಹಾಗೂ 2021ರಲ್ಲಿ 27 ಮಂದಿ ಕರ್ನಾಟಕದಿಂದ ಯಶಸ್ಸು ಗಳಿಸಿದ್ದರು. 2022ರ ಈ ಬಾರಿಯ ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ ಈಗಲೂ ಸ್ವಲ್ಪ ಭಾಷಾ ತಾರತಮ್ಯ ಉಳಿದುಕೊಂಡಿದೆ ಎಂಬ ಆಕ್ಷೇಪವಿದೆ. ಪ್ರಿಲಿಮ್್ಸ ಪರೀಕ್ಷೆಯ ಬಹುಆಯ್ಕೆಯ ಪ್ರಶ್ನೆಪತ್ರಿಕೆ ಹಾಗೂ ಮೇನ್ಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೂಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಇದ್ದು, ಉತ್ತರವನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿರುತ್ತದೆ. ಪ್ರಾದೇಶಿಕ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆ ಒದಗಿಸುವ ಮೂಲಕ ಈ ಭಾಷಾ ತಾರತಮ್ಯ ನಿವಾರಿಸಬೇಕೆಂಬ ಆಗ್ರಹವಿದೆ.

22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

Latest Posts

ಲೈಫ್‌ಸ್ಟೈಲ್