More

  ಸಂಪಾದಕೀಯ | ಸಾಮಾಜಿಕ ಸ್ವಾಸ್ಥ್ಯ; ಮುಖ್ಯ ನಿಯಮಗಳು ಪಾಲನೆಯಾಗಲಿ

  ಓವರ್ ದಿ ಟಾಪ್ (ಒಟಿಟಿ) ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಸಿನಿಮಾ, ಧಾರಾವಾಹಿ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಕಳವಳ, ಆತಂಕ ವ್ಯಕ್ತವಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಮೇಲೆ ನಿಗಾ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಕರಡು ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ, ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ‘ಒಟಿಟಿ ವೇದಿಕೆಗಳಲ್ಲಿ ಸಿನಿಮಾ, ಧಾರಾವಾಹಿ ಮುಂತಾದ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ಮುನ್ನ ಪರಿಶೀಲಿಸುವುದು ಅಗತ್ಯ. ಅವುಗಳಲ್ಲಿ ಅಶ್ಲೀಲ ಅಂಶಗಳಿರುವುದೇ ಇದಕ್ಕೆ ಕಾರಣ’ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ವೇದಿಕೆಗಳ ನಿಯಂತ್ರಣಕ್ಕೆ ನಿಗದಿಪಡಿಸಿರುವ ಮಾರ್ಗಸೂಚಿಗಳ ವಿವರಗಳನ್ನು ಸಲ್ಲಿಸುವೆಂತೆಯೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

  ಒಟಿಟಿ ಮುಖಾಂತರ ಜನರ ಭಾವನೆಗಳನ್ನು ಘಾಸಿಗೊಳಿಸುವಂಥ ವಿಷಯಗಳು ಪ್ರಸಾರವಾಗುತ್ತಿರುವುದು ವಿವಾದಕ್ಕೆ, ವಿರೋಧಕ್ಕೆ ಕಾರಣವಾಗಿದೆ. ವಾಕ್ ಸ್ವಾತಂತ್ರ್ಯದ ಚೌಕಟ್ಟನ್ನು ಮೀರಿ ಇವು ವರ್ತಿಸುತ್ತಿರುವ ಕುರಿತಂತೆ ವ್ಯಾಪಕ ಕಳವಳವೂ ವ್ಯಕ್ತವಾಗಿದೆ. ಹಿಂಸೆ, ಕ್ರೌರ್ಯ, ಅಶ್ಲೀಲತೆಯನ್ನು ಹರಡುವ ಸಂಗತಿಗಳು ಸಮಾಜದ ಸ್ವಾಸ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೆ, ಹದಿಹರೆಯದವರು, ಯುವಕರು ಇಂಥ ಕಂಟೆಂಟ್​ಗಳಿಂದ ದಾರಿತಪು್ಪವ ಸಾಧ್ಯತೆಯೂ ಇರುತ್ತದೆ. ನಮ್ಮಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಅದರದ್ದೇ ಆದ ಚೌಕಟ್ಟು, ನಿಯಂತ್ರಣಾ ವ್ಯವಸ್ಥೆ, ನೈತಿಕ ಮೌಲ್ಯಗಳಿವೆ. ಅಲ್ಲದೆ, ಪ್ರಸಾರ ಅಥವಾ ಮುದ್ರಣದ ಮುನ್ನ ಪರಾಮಶಿಸಿ, ಸರಿಯಾದುದನ್ನೇ ಸಮಾಜಕ್ಕೆ ತಲುಪಿಸುವ ಹೊಣೆಗಾರಿಕೆ ಇದೆ. ಆದರೆ, ಸಾಮಾಜಿಕ ಮಾಧ್ಯಮಗಳು ಅದರಲ್ಲೂ ಒಟಿಟಿಯಂಥ ವೇದಿಕೆಗಳು ಇಂಥ ಯಾವುದೇ ಸ್ವಯಂ ನೀತಿಸಂಹಿತೆಯನ್ನು ಅಳವಡಿಸಿಕೊಂಡಿಲ್ಲ. ಅಲ್ಲದೆ, ಮನರಂಜನೆ ಹೆಸರಲ್ಲಿ ಸಮಾಜದ ದಿಕ್ಕು ತಪ್ಪಿಸುತ್ತಿರುವ, ತಪ್ಪುಸಂದೇಶ ರವಾನಿಸುತ್ತಿರುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿಯೇ, ಕೇಂದ್ರದ ಬಳಿಕ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

  See also  ಬ್ರೇಕಿಂಗ್​: 2022ರ ಏಪ್ರಿಲ್​ 14ಕ್ಕೆ 'ಕೆಜಿಎಫ್​ 2' ಬಿಡುಗಡೆ

  ಹೊಸ ಕರಡು ನಿಯಮಗಳ ಕುರಿತಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಒಟಿಟಿ ಕಂಪನಿಗಳ ಜತೆ ಸಭೆ ನಡೆಸಿದ್ದು, ಆ ಕಂಪನಿಗಳು ಮಾರ್ಗದರ್ಶಿ ಸೂತ್ರಗಳನ್ನು ಒಪ್ಪಿಕೊಂಡಿರುವುದು ಗಮನಾರ್ಹ ಬೆಳವಣಿಗೆ. ಈ ನಿಯಮಗಳ ಪ್ರಕಾರ, ಒಟಿಟಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳುವುದು ಅವಶ್ಯ. ಇದಲ್ಲದೆ, ಸ್ವಯಂ ನಿಯಂತ್ರಣ ಸಂಸ್ಥೆ/ಮಂಡಳಿ ಸ್ಥಾಪಿಸುವುದು ಅಗತ್ಯವಾಗಿದ್ದು, ಸರ್ಕಾರದಿಂದ ಮೇಲ್ವಿಚಾರಣಾ ವ್ಯವಸ್ಥೆಯೂ ಇರಲಿದೆ. ಮಾಹಿತಿ-ತಂತ್ರಜ್ಞಾನ ಹಲವು ಅನುಕೂಲಗಳನ್ನು ತಂದುಕೊಟ್ಟಿದೆ ನಿಜ. ಆದರೆ, ಮನರಂಜನೆ ಹೆಸರಲ್ಲಿ ನಕಾರಾತ್ಮಕ ಭಾವ ಬಿತ್ತುವ, ವಿವಾದವನ್ನು ಸೃಷ್ಟಿಸುವ ಸಂಗತಿಗಳು ಅಪಾಯಕಾರಿ. ಇನ್ನಾದರೂ ಒಟಿಟಿ ಕಂಪನಿಗಳು ಎಚ್ಚೆತ್ತುಕೊಳ್ಳಬೇಕು ಮತ್ತು ನ್ಯಾಯಾಲಯ ಅಭಿಪ್ರಾಯ ಪಟ್ಟಿರುವಂತೆ ಸಿನಿಮಾ ಅಥವಾ ಧಾರಾವಾಹಿ ಬಿಡುಗಡೆಗೆ ಮುನ್ನ ಪರಿಶೀಲನೆ ನಡೆಸುವ ವ್ಯವಸ್ಥೆ ರೂಪುಗೊಳ್ಳಬೇಕು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts