More

  ಸಂಪಾದಕೀಯ: ಕುಚೋದ್ಯದ ನಡೆ

  ಅಕ್ಕಪಕ್ಕದ ರಾಜ್ಯಗಳು ಸಾಮರಸ್ಯ, ಸಮನ್ವಯದೊಂದಿಗೆ ಇರಬೇಕು. ಆದರೆ, ಮಹಾರಾಷ್ಟ್ರ ಸರ್ಕಾರ ಒಂದಿಲ್ಲ ಒಂದು ತಂಟೆ, ವಿವಾದವನ್ನು ಕೆದಕಿ ಕನ್ನಡಿಗರ ಭಾವನೆಗಳಿಗೆ ಘಾಸಿ ಉಂಟುಮಾಡುತ್ತಿದೆ. ಇಂಥ ಧೋರಣೆ ಖಂಡನೀಯ. ತನ್ನ ನಡೆಯನ್ನು ಅಲ್ಲಿನ ಸರ್ಕಾರ ಬದಲಿಸಿ, ಸುಧಾರಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಮತ್ತೊಮ್ಮೆ ಸುಳ್ಳಾಗಿದೆ. ರಾಜ್ಯ ಸರ್ಕಾರವು ನಾಮಫಲಕಗಳಲ್ಲಿ ಶೇಕಡ 60 ಕನ್ನಡ ಭಾಷೆ ಬಳಕೆ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವುದು, ಗಡಿಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ನೇಮಕ ಸೇರಿದಂತೆ ಈ ಹಿಂದೆಯೇ ಕನ್ನಡ ಹಾಗೂ ಕರ್ನಾಟಕ ವಿರೋಧಿ ಧೋರಣೆಗಳನ್ನು ತಳೆಯುತ್ತ ಬಂದಿದೆ. ಸರ್ಕಾರಿ ಕಚೇರಿಗಳನ್ನು ಸ್ಥಾಪಿಸುವ, ಅಧಿಕಾರಿಗಳನ್ನು ನೇಮಿಸುವ ಮೂಲಕ ಆ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಷಡ್ಯಂತ್ರ ನಡೆಸಿರುವ ಮಹಾರಾಷ್ಟ್ರ ಸರ್ಕಾರ ಈಗ ಇನ್ನೊಂದು ಹೆಜ್ಜೆ ಮುಂದಿರಿಸಿದೆ.

  ಗಡಿ ಭಾಗದ ಸಾಂಗ್ಲಿ ಮತ್ತು ಸೊಲ್ಲಾಪುರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಉದ್ದೇಶಪೂರ್ವಕವಾಗಿಯೇ ಮರಾಠಿ ಶಿಕ್ಷಕರನ್ನು ನೇಮಕ ಮಾಡಿದೆ. ಇದು ಕನ್ನಡವನ್ನು ಕ್ರಮೇಣ ಅಳಿಸಿಹಾಕುವ ಹುನ್ನಾರವಾಗಿದೆ. ಗಡಿಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದು, ಆ ಮಕ್ಕಳನ್ನು ಕನ್ನಡ ಕಲಿಕೆಯಿಂದ ವಂಚಿತರಾಗಿಸುವ ಕುತಂತ್ರ ಇದಾಗಿದೆ. ಮರಾಠಿ ಶಿಕ್ಷಕರನ್ನು ನೇಮಿಸಿದರೆ, ಅವರಿಂದ ವಿದ್ಯಾರ್ಥಿಗಳು ಕನ್ನಡ ಕಲಿಯಲು ಹೇಗೆ ಸಾಧ್ಯ? ಕನ್ನಡ ಕಲಿಕೆಯಿಂದ ವಿಮುಖ ಮಾಡಲು ಇಂಥ ತಂತ್ರಗಳನ್ನು ಬಳಸಲಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರ ಕೂಡಲೇ ಪ್ರತಿಭಟನೆ ದಾಖಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿನ ಮುಖ್ಯಮಂತ್ರಿ ಜತೆ ಮಾತನಾಡಿ, ಕನ್ನಡಿಗ ಶಿಕ್ಷಕರನ್ನೇ ನೇಮಕ ಮಾಡುವಂತೆ, ಉತ್ತಮ ಶೈಕ್ಷಣಿಕ ಪರಿಸರ ಕಲ್ಪಿಸುವಂತೆ ಒತ್ತಾಯಿಸಬೇಕು.

  ಇದಲ್ಲದೆ, ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಕಲ್ಲಿದ್ದಲು ಮಾಫಿಯಾದವರಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಅಧಿಕಾರಿ ಮೇಲೆ ಗುರುವಾರ ಹಲ್ಲೆ ನಡೆದಿದೆ. ಅಲ್ಲಿ 40 ಕನ್ನಡಿಗರು ಕೆಲಸ ಮಾಡುತ್ತಿದ್ದು, ಈ ರೀತಿ ಆಗಾಗ ಹಲ್ಲೆ ನಡೆಯುತ್ತಲೇ ಇರುತ್ತವೆ. ಹಿರಿಯ ಅಧಿಕಾರಿ ಮೇಲೆ ಹಲ್ಲೆ ವಿಷಯ ತಿಳಿದು, ಉಳಿದ ಇಂಜಿನಿಯರ್​ಗಳು ಹಾಗೂ ನೌಕರರು ಭಯಭೀತರಾಗಿದ್ದಾರೆ. ಚಂದ್ರಾಪುರ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಶುರುವಾದ ನಂತರ ಹಲ್ಲೆ ಘಟನೆ ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಮುಖ್ಯ ಇಂಜಿನಿಯರ್ (ಎಲೆಕ್ಟ್ರಿಕಲ್) ಮೇಲೂ ಹಲ್ಲೆ ನಡೆಸಲಾಗಿತ್ತು. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಇಲ್ಲದಿದ್ದಲ್ಲಿ ಹೊರನಾಡಿನಲ್ಲಿ ಕನ್ನಡಿಗರು ಭಯಭೀತಿಯಲ್ಲೇ ಕೆಲಸ ಮಾಡುವಂಥ ಸ್ಥಿತಿ ಸೃಷ್ಟಿಯಾಗುತ್ತದೆ. ಹಾಗಾಗುವ ಮುನ್ನ, ಸರ್ಕಾರ ಎಚ್ಚೆತ್ತುಕೊಂಡು, ಸೂಕ್ತ ಕ್ರಮ ಕೈಗೊಳ್ಳಲಿ.

  ಸೂರಜ್‌ ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಮಾಡಿದ ವ್ಯಕ್ತಿ ವಿರುದ್ಧವೇ ಎಫ್‌ಐಆರ್!

  See also  ಮೈಕೈ ನೋವು, ತಲೆನೋವು ಕೂಡ ಕರೊನಾ ಲಕ್ಷಣವಂತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts