Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಅಣ್ವಸ್ತ್ರ ಅಪಾಯ

Friday, 07.09.2018, 3:04 AM       No Comments

ಲವು ರಂಗಗಳಲ್ಲಿ ವಿಪರೀತ ಸಮಸ್ಯೆ, ಆಂತರಿಕ ತೊಳಲಾಟ ಎದುರಿಸುತ್ತಿರುವ ಪಾಕಿಸ್ತಾನ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬಂತೆ ಅಣ್ವಸ್ತ್ರಗಳನ್ನು ಹೆಚ್ಚಿಸಿಕೊಳ್ಳುವ ಹುಚ್ಚುಸಾಹಸದಲ್ಲಿ ತೊಡಗಿದೆ. ಭಯೋತ್ಪಾದಕರ ಶಿಬಿರಗಳಿಗೆ ಆಶ್ರಯತಾಣವಾಗಿರುವ ಪಾಕಿಸ್ತಾನ ಈಗಾಗಲೇ ಜಾಗತಿಕ ಶಾಂತಿಗೆ ಅಪಾಯವೊಡ್ಡಿದ್ದು, ಇನ್ನು, ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿಕೊಂಡರೆ ಗತಿಯೇನು? ಪ್ರಸ್ತುತ ಪಾಕಿಸ್ತಾನದ ಬಳಿ 140-150 ಅಣ್ವಸ್ತ್ರಗಳಿದ್ದು, ಈ ಸಂಖ್ಯೆ 2025ರ ಸುಮಾರಿಗೆ 220-250, ಮುಂದಿನ ಒಂದು ದಶಕದಲ್ಲಿ 350ಕ್ಕೆ ತಲುಪಲಿದೆ ಎಂದು ಅಮೆರಿಕದ ಭದ್ರತಾ ತಜ್ಞರು ನೀಡಿರುವ ‘ಪಾಕಿಸ್ತಾನಿ ನ್ಯೂಕ್ಲಿಯರ್ ಫೋರ್ಸ್ 2018’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಪಾಕ್ ಇದೇ ವೇಗದಲ್ಲಿ ಮುಂದುವರಿದರೆ ವಿಶ್ವದ ಅತಿದೊಡ್ಡ 5ನೇ ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬ ಎಚ್ಚರಿಕೆಯ ಗಂಟೆಯೂ ಮೊಳಗಿದೆ.

ಭಾರತವೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರವೇ. ಆದರೆ, ಇದು ತನ್ನ ಸುರಕ್ಷೆಗಾಗಿಯೇ ಹೊರತು ಯಾರ ಮೇಲೂ ಆಕ್ರಮಣ ಮಾಡುವುದಕ್ಕಲ್ಲ. ಇದಕ್ಕೆ ಇತಿಹಾಸವೂ ಸಾಕ್ಷಿಯಾಗಿದೆ. ಭಾರತ ಈವರೆಗೂ ಬೇರೊಂದು ದೇಶದ ಮೇಲೆ ಯುದ್ಧ ಸಾರಿದ ಅಥವಾ ಆಕ್ರಮಣಗೈದ ಉದಾಹರಣೆಗಳಿಲ್ಲ. ಆದರೆ, ಯಾವುದೋ ಅಣ್ವಸ್ತ್ರ ರಾಷ್ಟ್ರವೊಂದು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರೆ ಭಾರತ ಸುಮ್ಮನೆ ಕೂರಲಾಗದು.

ಈಗ ಜಗತ್ತು ಶಾಂತಿಯನ್ನು ಬಯಸುತ್ತಿದೆಯೇ ಹೊರತು ಪರಮಾಣು ಸಂಘರ್ಷವನ್ನಲ್ಲ. ಹಠಮಾರಿ ರಾಷ್ಟ್ರಗಳೂ ನಿಧಾನವಾಗಿ ಈ ವಾಸ್ತವ ಅರಿಯುತ್ತಿವೆ. ಅಣ್ವಸ್ತ್ರ ಸಂಗ್ರಹದಲ್ಲಿ ತೊಡಗಿದ್ದ ಉತ್ತರ ಕೊರಿಯಾ ಕೂಡ ಅಮೆರಿಕದ ಬೆದರಿಕೆ-ಎಚ್ಚರಿಕೆ ನಡುವೆ ಎಚ್ಚೆತ್ತುಕೊಂಡಿದೆ. ಉತ್ತರ ಕೊರಿಯಾದ ಅವಿವೇಕದ ನಡೆ ಅಣ್ವಸ್ತ್ರ ಯುದ್ಧಕ್ಕೆ ನಾಂದಿ ಹಾಡಲಿದೆ ಎಂಬಂಥ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಇದರ ಗಂಭೀರತೆ ಅರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ಅಧ್ಯಕ್ಷರೊಂದಿಗೆ ಮೊದಲ ಬಾರಿಗೆ ಮಾತುಕತೆ ನಡೆಸುವ ಮೂಲಕ ಆತಂಕದ ಕಾಮೋಡವನ್ನು ಕರಗಿಸಿದ್ದಾರೆ.

ಪಾಕಿಸ್ತಾನದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧ. ಸೇನಾಪ್ರಾಬಲ್ಯವೇ ಹೆಚ್ಚಿರುವ ಪಾಕ್​ನಲ್ಲಿ ಏನು ಸಂಭವಿಸಿದರೂ ಅಚ್ಚರಿ ಪಡದಂಥ ಸ್ಥಿತಿ. ಅಲ್ಲಿನ ಸೇನಾಮುಖ್ಯಸ್ಥರು ಪ್ರಧಾನಿಗಿಂತ ಪ್ರಭಾವಿಯಾಗಿ ವರ್ತಿಸುವುದೂ ಉಂಟು. ಸದಾ ರಣೋತ್ಸಾಹದಲ್ಲಿರುವ ಅಲ್ಲಿನ ಸೇನೆಗೆ ಜಾಗತಿಕ ಶಾಂತಿ, ಸೌಹಾರ್ದ ಬೇಕಿಲ್ಲ. ಒಂದು ವೇಳೆ, ಅಣ್ವಸ್ತ್ರಗಳನ್ನು ಪೇರಿಸಿಟ್ಟು ಯುದ್ಧೋನಾದ್ಮಕ್ಕೆ ಮುಂದಾದರೆ ಗತಿ ಏನು? ಪಾಕ್​ನ ಹೊಸ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಪರ್ ಎಂಬುದು ಜಗಜ್ಜಾಹೀರಾಗಿದೆ. ಭಯೋತ್ಪಾದಕ ಸಂಘಟನೆಗಳ ಮುಖಂಡರು ರಾಜಾರೋಷವಾಗಿ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಮುಂದೊಂದು ದಿನ, ಅಣ್ವಸ್ತ್ರಗಳ ಬತ್ತಳಿಕೆ ಈ ಭಯೋತ್ಪಾದಕರ ಕೈಗೆ ಸೇರುವುದಿಲ್ಲ

ಎಂಬುದಕ್ಕೆ ಖಚಿತತೆ ಏನು?

ಪಾಕಿಸ್ತಾನದಲ್ಲಿ ಹಲವು ಅಣ್ವಸ್ತ್ರ ಯೋಜನೆಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ. ಪ್ಲುಟೋನಿಯಂ ಉತ್ಪಾದನೆಯ ನಾಲ್ಕು ರಿಯಾಕ್ಟರ್​ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಪಾಕ್​ನ ಈ ಹೆಜ್ಜೆಗಳು ಭಾರತದ ಭದ್ರತೆಗೆ ಮಾತ್ರವಲ್ಲ ಜಾಗತಿಕ ಭದ್ರತೆಗೂ ಅಪಾಯ. ಅಮೆರಿಕ ಈಗಾಗಲೇ ಪಾಕ್​ಗೆ ರಕ್ಷಣಾ ನೆರವನ್ನು ಕಡಿತಗೊಳಿಸಿದೆ. ಆದರೂ, ಪಾಕ್ ಬುದ್ಧಿ ಕಲಿತಂತಿಲ್ಲ. ಆದ್ದರಿಂದ, ಅಣ್ವಸ್ತ್ರ ಅಪಾಯವನ್ನು ಗ್ರಹಿಸಿ ಪಾಕಿಸ್ತಾನವನ್ನು ಕಟ್ಟಿಹಾಕಲು ಭಾರತದ ಜತೆಗೆ ಅಮೆರಿಕವೂ ಯತ್ನಿಸಬೇಕು. ಇಲ್ಲದಿದ್ದಲ್ಲಿ, ಭವಿಷ್ಯದ ದಿನಗಳಲ್ಲಿ ಆತಂಕ ತಪ್ಪಿದ್ದಲ್ಲ.

Leave a Reply

Your email address will not be published. Required fields are marked *

Back To Top