Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಹೊಣೆಗಾರಿಕೆಯ ಹಂಚಿಕೆಯಾಗಲಿ

Thursday, 06.09.2018, 3:04 AM       No Comments

ಪ್ರಜೆಗಳ ಅಳಲನ್ನು ಮುಖ್ಯಮಂತ್ರಿಯೇ ಖುದ್ದಾಗಿ ಆಲಿಸಿ, ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂಥ ಪರಿಕಲ್ಪನೆಯನ್ನು ಒಳಗೊಂಡಿರುವಂಥದ್ದು ‘ಜನತಾದರ್ಶನ’ ಕಾರ್ಯಕ್ರಮ. ಗ್ರಾಮ/ತಾಲೂಕು/ಜಿಲ್ಲಾ ಮಟ್ಟದ ಕಚೇರಿಗಳಿಗೆ ಎಡತಾಕಿಯೂ ಪರಿಹಾರ ದಕ್ಕಿಸಿಕೊಳ್ಳಲಾಗದಿದ್ದಂಥ ಸಾರ್ವಜನಿಕರ ಕೆಲ ಸಮಸ್ಯೆಗಳು ಈ ಕಾರ್ಯಕ್ರಮದ ಮುಖೇನ ಸ್ಥಳದಲ್ಲೇ ಪರಿಹಾರ ಕಂಡುಕೊಂಡಂಥ ಅಥವಾ ನಿರ್ಣಾಯಕ ಘಟ್ಟಕ್ಕೆ ತಲುಪಿದಂಥ ನಿದರ್ಶನಗಳಿವೆ. ಕ್ಯಾನ್ಸರ್​ಪೀಡಿತ ತಾಯಿಯ ಚಿಕಿತ್ಸೆಗೆಂದು ಮೊರೆಯಿಟ್ಟ ಬಾಲಕನಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಸ್ಥಳದಲ್ಲೇ 10 ಸಾವಿರ ರೂ. ಮೌಲ್ಯದ ಚೆಕ್ ವಿತರಿಸಿದ್ದು ಹಾಗೂ ಹೆರಿಗೆ ಸಂದರ್ಭದಲ್ಲಾದ ಅಗಾಧ ಖರ್ಚಿಗೆ ಸಹಾಯ ಕೋರಿದ ಅನಾಥ ಮಹಿಳೆಗೆ ಸ್ಥಳದಲ್ಲೇ 10 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದು ಇತ್ತೀಚಿನ ಜನತಾದರ್ಶನದ ಇಂಥ ಒಂದೆರಡು ಉದಾಹರಣೆಗಳು. ಜನಕಲ್ಯಾಣವು ಪ್ರಜಾಸತ್ತಾತ್ಮಕ ಹಾಗೂ ಜನಪ್ರಿಯ ಸರ್ಕಾರವೊಂದರ ಮೂಲಾಶಯವೂ ಆಗಿರುತ್ತದೆಯಾದ್ದರಿಂದ ಇಂಥ ಉಪಕ್ರಮಗಳು ಸರ್ವಕಾಲಕ್ಕೂ ಸಮ್ಮತವೇ. ಆದರೆ ಒಂದಿಡೀ ರಾಜ್ಯದ ಆಡಳಿತ ನಿರ್ವಹಣೆ, ಕಾನೂನು-ಸುವ್ಯವಸ್ಥೆಯ ಪರಿಪಾಲನೆ ಸೇರಿದಂತೆ ಹಲವು ಮಹತ್ವದ ಬಾಬತ್ತುಗಳೆಡೆಗೆ ಗಮನಹರಿಸಬೇಕಾದ ಮುಖ್ಯಮಂತ್ರಿಗಳು, ಜನತಾ ದರ್ಶನಕ್ಕೇ ಹೆಚ್ಚು ಸಮಯ ವಿನಿಯೋಗಿಸಲಾಗುತ್ತದೆಯೇ? ದೂರಗಾಮಿ ನೆಲೆಗಟ್ಟಿನಲ್ಲಿ ಅದೆಷ್ಟರಮಟ್ಟಿಗೆ ಕಾರ್ಯಸಾಧು? ಎಂಬೆಲ್ಲ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ.

ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್​ನಂಥ ವಿಕೇಂದ್ರಿತ ಅಧಿಕಾರ ವ್ಯವಸ್ಥೆಗೆ ನಾವು ಒಡ್ಡಿಕೊಂಡು ಸಾಕಷ್ಟು ಸಮಯವಾಗಿದೆ. ಜತೆಗೆ, ಈ ಸ್ತರಗಳಲ್ಲಿ ಅಗತ್ಯಾನುಸಾರ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳು, ಸೇವಾಕೇಂದ್ರಗಳೂ ಇದ್ದೇ ಇರುತ್ತವೆ. ಜನರು ‘ಜನತಾ ದರ್ಶನ’ಮುಖಿಗಳಾಗುವುದರಲ್ಲಿ ತಪ್ಪೇನಿಲ್ಲ, ಮುಖ್ಯಮಂತ್ರಿಗಳು ಅವರಿಗೆ ಸ್ಪಂದಿಸುವುದರಿಂದ ಬಾಧಕವೇನಿಲ್ಲ; ಆದರೆ ಸ್ಥಳೀಯ ಮಟ್ಟದಲ್ಲೇ ಪರಿಹಾರವಾಗಬಲ್ಲಂಥ ಸಮಸ್ಯೆ/ಚರ್ಚಾವಿಷಯವೊಂದು ಮುಖ್ಯಮಂತ್ರಿವರೆಗೆ ಬರುವುದು ಎಷ್ಟು ಸರಿ ಎಂಬುದೇ ಇಲ್ಲಿನ ಪ್ರಶ್ನೆ. ಸೆ. 1ರಂದು ಆಯೋಜಿತವಾಗಿದ್ದ ಜನತಾದರ್ಶನ ಕಾರ್ಯಕ್ರಮದ ವೇಳೆ ಹರಿದುಬಂದಿದ್ದ ಜನಸಾಗರ, ನಿಗದಿತ ಕಾಲಾವಧಿಗಿಂತ ತಡವಾಗಿ ಮುಖ್ಯಮಂತ್ರಿಗಳು ಅಲ್ಲಿಗೆ ಬರುವಂತಾಗಿದ್ದು, ‘ದರ್ಶನಭಾಗ್ಯ’ ಸಿಕ್ಕವರಿಗೆ ಕೆಲವೇ ನಿಮಿಷದಷ್ಟು ಸಮಯ ನೀಡಲು ಅವರಿಗೆ ಸಾಧ್ಯವಾಗಿದ್ದು ಈ ಎಲ್ಲ ಅಂಶಗಳು ಇಂಥ ಕಾರ್ಯಕ್ರಮಗಳಿಗಿರುವ ಮಿತಿ, ಪರಿಣಾಮಕಾರಿತ್ವಗಳಿಗೆ ಹಿಡಿದ ಕನ್ನಡಿಯಾಗುತ್ತವೆ. ಗ್ರಾಮದ ಮಟ್ಟದಲ್ಲೋ, ತಾಲೂಕು/ಜಿಲ್ಲಾ ಕಚೇರಿಗಳಲ್ಲೋ ವ್ಯವಹರಿಸಬಹುದಾದಂಥ ವಿಷಯಗಳನ್ನು, ಜನರು ಸಾಕಷ್ಟು ಹಣ-ಸಮಯ ಖರ್ಚುಮಾಡಿಕೊಂಡು ದೂರದ ಊರುಗಳಿಂದ ಮುಖ್ಯಮಂತ್ರಿಗಳವರೆಗೆ ಹೊತ್ತುತರುತ್ತಾರೆಂದರೆ, ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದರ್ಥವಲ್ಲವೇ? ಇದು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಉಸ್ತುವಾರಿ ಸಚಿವರ ಕರ್ತವ್ಯಲೋಪಕ್ಕೆ ಕನ್ನಡಿ ಹಿಡಿಯುವುದಿಲ್ಲವೇ?

ಈ ಎಲ್ಲ ಮಾತಿನ ಹಿಂದಿರುವುದು, ಮುಖ್ಯಮಂತ್ರಿಗಳ ‘ಜನತಾದರ್ಶನ’ಕ್ಕೆ ತಣ್ಣೀರೆರಚುವ ಉದ್ದೇಶವಲ್ಲ; ಬದಲಿಗೆ ನಾಡಿನ ಸಮಸ್ತ ಜನರ ಆಶೋತ್ತರಗಳ ಪ್ರತಿನಿಧಿಯಾಗಿರುವ ಅವರು, ನಿಯೋಜಿತ ಕರ್ತವ್ಯದಲ್ಲಿ ಇನ್ನೂ ಗುರುತರವಾಗಿ ತೊಡಗಿಸಿಕೊಂಡು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವಂಥ ಭೂಮಿಕೆ ಸೃಷ್ಟಿಯಾಗಲಿ ಎಂಬ ಆಶಯ. ರಾಜ್ಯದೆಲ್ಲೆಡೆಯ ವಿವಿಧ ಸ್ತರದ ಅಧಿಕಾರಕೇಂದ್ರಗಳಿಗೆ ಉತ್ತರದಾಯಿತ್ವ ಮತ್ತು ಕಾರ್ಯಸಂಪನ್ನತೆಯ ಕಾಲಮಿತಿ ವಿಧಿಸುವ ಮೂಲಕ ಹೊಣೆಗಾರಿಕೆಯ ಹಂಚಿಕೆಯಾಗುವಂತಾಗಬೇಕು. ಅದು ಈಗ ಇಲ್ಲ ಎಂದೇನಲ್ಲ; ಆದರೆ ಅಧಿಕೃತವಾಗಿ ಅಂಥದೊಂದು ಚಿತ್ತಸ್ಥಿತಿ ನಿರ್ವಣಗೊಂಡಿಲ್ಲ. ಇದು ನೆರವೇರಿದರೆ, ಸಣ್ಣ ಸಮಸ್ಯೆಯನ್ನೂ ಬೆಂಗಳೂರಿನವರೆಗೆ ಹೊತ್ತುತರುವ ಪರಿಪಾಠವೂ ನಿಲ್ಲುತ್ತದೆ.

Leave a Reply

Your email address will not be published. Required fields are marked *

Back To Top