Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸೀಟು ವಂಚನೆ ಜಾಲ

Wednesday, 05.09.2018, 3:04 AM       No Comments

ಪ್ರತಿಷ್ಠಿತ ಕಾಲೇಜುಗಳಲ್ಲಿ ಮಕ್ಕಳಿಗೆ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಯವಾದ ಮಾತಾಡಿ, ಅದಕ್ಕೆಂದು ಅಗಾಧ ಹಣವನ್ನೂ ವಸೂಲುಮಾಡಿ ನಂತರ ಹೇಳಹೆಸರಿಲ್ಲದಂತೆ ಮಾಯವಾಗುವ ವಂಚಕರ ಜಾಲಕ್ಕೆ ಬೀಳದಂತೆ ಪಾಲಕರು ಎಚ್ಚರವಹಿಸಬೇಕಿದೆ. ಇಂಥ ಸೀಟ್​ಗಾಗಿ ಹಂಬಲಿಸುವವರ ಸಂಪರ್ಕ ಸಂಖ್ಯೆಯನ್ನು ಹೇಗೋ ದಕ್ಕಿಸಿಕೊಳ್ಳುವ ವಂಚಕರು, ಪಾಲಕರನ್ನು ಹಂತಹಂತವಾಗಿ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಾರೆಂಬುದು ಈಗಾಗಲೇ ವರದಿಯಾಗಿರುವ ಸಂಗತಿ. ಮತ್ತೊಂದೆಡೆ, ಸಿಇಟಿ, ನೀಟ್ ಮೊದಲಾದ ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿಗಳ ಸಂಪರ್ಕ ಸಂಖ್ಯೆ, ಸ್ವವಿವರಗಳು ಟ್ಯೂಷನ್ ಕೇಂದ್ರಗಳ ಮೂಲಕ ಸೋರಿಕೆಯಾಗಿ ಇಂಥದೇ ವಂಚಕರ ಕೈಸೇರುತ್ತಿದೆಯೆಂಬ ಆಘಾತಕಾರಿ ಸಂಗತಿ ಬೆಂಗಳೂರು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ತಮಿಳುನಾಡು, ಒಡಿಶಾ ಹಾಗೂ ತೆಲಂಗಾಣದಂಥ ಹೊರರಾಜ್ಯಗಳ ಟ್ಯೂಷನ್ ಕೇಂದ್ರಗಳಿಂದಲೂ ವಿದ್ಯಾರ್ಥಿಗಳ ಅಗತ್ಯ ಮಾಹಿತಿ ದಕ್ಕಿಸಿಕೊಳ್ಳುವಷ್ಟರ ಮಟ್ಟಿಗೆ ವಂಚಕರ ಕಾರ್ಯಜಾಲ ವ್ಯಾಪಿಸಿದೆ ಎಂಬುದು ಹಗುರವಾಗಿ ಪರಿಗಣಿಸುವಂಥ ಸಂಗತಿಯಲ್ಲ.

ವಾಮಮಾರ್ಗದಲ್ಲಾದರೂ ಸರಿ, ಒಂದಕ್ಕೆರಡು ಹಣ ಚೆಲ್ಲಿದರೂ ಸರಿ ಪ್ರತಿಷ್ಠಿತ ಕಾಲೇಜುಗಳಲ್ಲಿ ವೃತ್ತಿಶಿಕ್ಷಣದ ಸೀಟು ದಕ್ಕಿಸಿಕೊಳ್ಳಬೇಕು ಎಂಬ ಪಾಲಕರ ಹಪಹಪಿ, ಹುಸಿಪ್ರತಿಷ್ಠೆಗಳೇ ಇಂಥ ಖತರ್ನಾಕ್ ತಂಡಗಳಿಗೆ ಆಹಾರವಾಗುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಮೆಡಿಕಲ್, ಇಂಜಿನಿಯರಿಂಗ್ ಸೀಟು ಕೊಡಿಸುವ ಭರವಸೆ ನೀಡುವ ಕರೆ, ಎಸ್​ಎಂಎಸ್ ಮತ್ತು ವಾಟ್ಸ್​ಆಪ್ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದೆಂಬ ಎಚ್ಚರವಿದ್ದರೂ, ಸ್ವತಃ ವಿದ್ಯಾವಂತರಾಗಿದ್ದರೂ ಪಾಲಕರು ಇಂಥ ಪ್ರಲೋಭನೆಗಳಿಗೆ ಹೇಗೆ ಒಳಗಾಗುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಸಿಇಟಿ, ನೀಟ್ ಪರೀಕ್ಷೆಗಳ ನಿಯಮಗಳನ್ನು ವಿದ್ಯಾರ್ಥಿಗಳು ಚಾಚೂತಪ್ಪದಂತೆ ಪಾಲಿಸುವಂತೆ ನೋಡಿಕೊಳ್ಳುವ ಮೂಲಕ ಹಾಗೂ ಸಂಬಂಧಿತ ಕಾಲೇಜಿಗೆ ಮುಖತಃ ಭೇಟಿನೀಡಿ ಸೀಟು ಲಭ್ಯತೆ, ಶುಲ್ಕ ವಿವರಗಳನ್ನು ಪಡೆಯುವ ಮೂಲಕ ಪಾಲಕರು ಹೊಣೆಗಾರಿಕೆ ಮೆರೆಯಬೇಕಾದುದು ಅಪೇಕ್ಷಣೀಯ. ಇದರ ಬದಲು ಅಡ್ಡದಾರಿ ಹಿಡಿಯುವುದಕ್ಕೆ ಮುಂದಾಗಿ ಹಳ್ಳಕ್ಕೆ ಬೀಳುವುದು ಅನಪೇಕ್ಷಿತ ಬೆಳವಣಿಗೆಯೇ ಸರಿ. ಒಂದೊಮ್ಮೆ ಹೀಗೆ ವಾಮಮಾರ್ಗದಲ್ಲಿ ಸೀಟು ದಕ್ಕಿಸಿಕೊಂಡರೂ ಸದರಿ ವಿದ್ಯಾರ್ಥಿ ಸಮಾಜಮುಖಿಯಾಗಿ ಮುಂದುವರಿಯುತ್ತಾನೆ ಎಂಬುದಕ್ಕೆ ಖಾತ್ರಿಯೇನು? ಇನ್ನು, ಈ ರೀತಿಯ ಜಾಲಗಳು, ಅವುಗಳ ಮಧ್ಯವರ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಹಾಗೂ ಪ್ರತಿವರ್ಷದ ಕೋರ್ಸ್ ದಾಖಲಾತಿ ಅವಧಿಯಲ್ಲೂ ಅವು ಕಾರ್ಯೋನ್ಮುಖವಾಗುತ್ತವೆ ಎಂಬುದು ಆಯಾ ಕಾಲಘಟ್ಟದ ಸರ್ಕಾರಗಳಿಗೆ ಗೊತ್ತಿದ್ದರೂ, ಈ ವಿಷಜಾಲದ ಹೆಡೆಮುರಿ ಕಟ್ಟಬಲ್ಲ ಪರಿಣಾಮಕಾರಿ ಕಟ್ಟಳೆಯೊಂದನ್ನು ರೂಪಿಸಲಾಗಿಲ್ಲವೇಕೆ ಎಂಬುದು ಶ್ರೀಸಾಮಾನ್ಯರ ಸಹಜಪ್ರಶ್ನೆ. ಜತೆಗೆ, ಉನ್ನತಶಿಕ್ಷಣ ಸೇರಿದಂತೆ ಯಾವುದೇ ಕಾರ್ಯಕ್ಷೇತ್ರವೂ ಇಂಥ ಅಪಸವ್ಯಗಳಿಂದ ಹೊರತಾದ ನಿದರ್ಶನಗಳಿಲ್ಲ. ಇಂಥ ಪಿಡುಗುಗಳನ್ನು ಸರ್ಕಾರವೊಂದೇ ನಿಮೂಲನ ಮಾಡಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಜಾಗೃತ ವಿದ್ಯಾರ್ಥಿಗಳು-ಪಾಲಕರು, ಟ್ಯೂಷನ್ ಕೇಂದ್ರಗಳು, ವೃತ್ತಿಶಿಕ್ಷಣ ಕಾಲೇಜುಗಳು, ಜನಹಿತದ ಆಶಯ ಹೊತ್ತಿರುವ ಮತ್ತಿತರ ಸಂಘಸಂಸ್ಥೆಗಳ ಜಂಟಿ ಸಹಭಾಗಿತ್ವವೂ ಇಲ್ಲಿ ಅನಿವಾರ್ಯವಾಗುತ್ತದೆ. ಜತೆಗೆ, ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟುಗಳು ಸಿಕ್ಕಿಬಿಟ್ಟರೆ ‘ಜೀವನಪಾವನ’ ಎಂಬ ಚಿತ್ತಸ್ಥಿತಿಯಿಂದ ವಿದ್ಯಾರ್ಥಿಗಳು, ಪಾಲಕರು ಮೊದಲು ಹೊರಬರಬೇಕಿದೆ. ಭೌತ-ರಸಾಯನ-ಜೀವವಿಜ್ಞಾನ, ಭೂವಿಜ್ಞಾನ, ಬಾಹ್ಯಾಕಾಶ ವಿಜ್ಞಾನದಂಥ ವಿಜ್ಞಾನ ಶಾಖೆಗಳಿಗೂ ಮಹತ್ವವಿದೆ, ಜೀವನೋಪಾಯ ಕಂಡುಕೊಳ್ಳಲು ಸಾಧ್ಯವಿದೆ ಎಂಬುದನ್ನೂ ಅವರು ಅರಿಯುವುದು ಒಳಿತು.

Leave a Reply

Your email address will not be published. Required fields are marked *

Back To Top