Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಮಸ್ಯೆಯ ಮೂಲ ಅರಿಯಲಿ

Tuesday, 04.09.2018, 3:04 AM       No Comments

ರ್ನಾಟಕದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ದೋಷಿಗಳನ್ನು ಭೂಕಬಳಿಕೆ ನಿಷೇಧ ನ್ಯಾಯಾಲಯ ಜೈಲಿಗೆ ಅಟ್ಟುತ್ತಿದೆ. 11 ಲಕ್ಷ ಎಕರೆಗೂ ಅಧಿಕ ಸರ್ಕಾರಿ ಜಮೀನು ಒತ್ತುವರಿ ತೆರವಿಗಾಗಿ 2016ರಲ್ಲಿ ಈ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಕೋರ್ಟು ಈಗ ಕೈಗೊಳ್ಳುತ್ತಿರುವ ಕ್ರಮಗಳು ಸರ್ಕಾರಿ ಜಮೀನು ಕಬಳಿಸುವವರಿಗೆ ಎಚ್ಚರಿಕೆ ಗಂಟೆಯನ್ನೂ ರವಾನಿಸಿದೆ ಎಂಬುದು ಗಮನಾರ್ಹ. ಆದರೆ, ಜೀವನೋಪಾಯಕ್ಕಾಗಿ ಸಣ್ಣ ಪ್ರಮಾಣದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿರುವ ಲಕ್ಷಾಂತರ ರೈತರು ಇದೇ ಕಾಯ್ದೆಯಿಂದಾಗಿ ಜೈಲು ಸೇರುವ ಆತಂಕಕ್ಕೆ ಒಳಗಾಗಿರುವುದು ಕಡೆಗಣಿಸುವಂಥ ಸಂಗತಿಯಲ್ಲ.

ಬಗರ್​ಹುಕುಂ ಸಮಿತಿಯಲ್ಲಿ ಸಾಗುವಳಿ ಭೂಮಿ ಸಕ್ರಮ ಕೋರಿ ಲಕ್ಷಾಂತರ ಅರ್ಜಿಗಳ ವಿಲೇವಾರಿ ಇನ್ನೂ ಬಾಕಿ ಇದೆ. ಹೀಗಾಗಿ ಬಗರ್​ಹುಕುಂ ಸಾಗುವಳಿದಾರರನ್ನು ಭೂ ಕಬಳಿಕೆದಾರರೆಂದು ಪರಿಗಣಿಸದಂತೆ ಹಾಗೂ ಅವರ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸದಂತೆ ಸರ್ಕಾರಕ್ಕೆ ರೈತರು ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ. ಭೂಗಳ್ಳರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ವಿಷಯವನ್ನು ಸೂಕ್ಷ್ಮವಾಗಿ, ಸಂವೇದನೆಯಿಂದ ನೋಡುವ ಅಗತ್ಯವೂ ಇದೆ. ಆರ್ಥಿಕವಾಗಿ ಅಶಕ್ತರಾದ ಸಣ್ಣ ರೈತರು ಬೇರೆ ದಾರಿ ಕಾಣದೆ ಅಥವಾ ಬೇರೆ ಆಯ್ಕೆಗಳಿಲ್ಲದೆ ಸಣ್ಣ ಪ್ರಮಾಣದ ಹಿಡುವಳಿಯನ್ನು ಮಾಡಿಕೊಂಡಿದ್ದಾರೆ. ಇದು ಅವರ ಜೀವನಕ್ಕೆ ಆಧಾರವಲ್ಲದೆ, ಕುಟುಂಬವನ್ನೂ ಪೋಷಿಸುತ್ತಿದೆ. ಇವರು ದುರುದ್ದೇಶಪೂರ್ವಕವಾಗಿಯೋ, ದುರಾಸೆಗಾಗಿಯೋ ಹೀಗೆ ಮಾಡಿಲ್ಲ ಎಂಬುದು ಸ್ಪಷ್ಟ. ಹೊಟ್ಟೆಪಾಡಿಗಾಗಿ ಸರ್ಕಾರಿ ಜಾಗದಲ್ಲಿ ಅದೂ ಕಡಿಮೆ ಜಾಗದಲ್ಲಿ ಸಾಗುವಳಿ ಮಾಡುತ್ತಿರುವಾಗ ಸರ್ಕಾರ ಇವರ ಹಿತವನ್ನು ಕಾಯುವುದು ಕರ್ತವ್ಯವೂ ಹೌದು, ಈಗಿನ ಅನಿವಾರ್ಯತೆಯೂ ಹೌದು. ಕೃಷಿಯಲ್ಲದೆ ಇವರಿಗೆ ಪರ್ಯಾಯ ಹಾದಿಗಳಿಲ್ಲ. ಇದೇ ಸಂದರ್ಭದಲ್ಲಿ, ದುರುದ್ದೇಶದಿಂದ, ವಾಣಿಜ್ಯ ಲಾಭಕ್ಕಾಗಿ ಸರ್ಕಾರಿ ಜಾಗವನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಮುಲಾಜು ನೋಡಬಾರದು.

ಸಣ್ಣ ರೈತರಿಗೆ ಈ ಸಂಕಷ್ಟ ಎದುರಾಗಬಾರದು ಎಂಬ ನಿಟ್ಟಿನಲ್ಲಿಯೇ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸುವುದಾಗಿ ಈ ಹಿಂದೆ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಮತ್ತು ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದರು. ಆದರೆ, ಸದನದ ಒಪ್ಪಿಗೆ ದೊರೆಯದ ಪರಿಣಾಮ ಈ ಭರವಸೆ ಭರವಸೆಯಾಗಿಯೇ ಉಳಿದುಕೊಂಡಿದೆ. ಆದ್ದರಿಂದ ಸರ್ಕಾರ ವಸ್ತುಸ್ಥಿತಿ ಅರಿಯಲು ಸೂಕ್ತ ಅಧ್ಯಯನ ಅಥವಾ ಪರಿಶೀಲನೆ ನಡೆಸಲಿ. ಭೂಕಬಳಿಕೆಯ ಸಮಸ್ಯೆ ಹಲವು ಆಯಾಮಗಳನ್ನು ಹೊಂದಿದೆಯಾದರೂ, ಸಮಸ್ಯೆಯ ಮೂಲ ಅರಿಯಲು ಈ ಮೂಲಕ ಪ್ರಯತ್ನಿಸಲಿ. ಆಗ ಸಣ್ಣ ರೈತರ ಸಂಕಷ್ಟ ಅರಿವಿಗೆ ಬಾರದೆ ಇರದು.

ಸದ್ಯದ ಸ್ಥಿತಿಯಲ್ಲಿ ಉತ್ತಮ ಪರಿಹಾರವೆಂದರೆ ಈ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವುದು. ಅದಿಲ್ಲವಾದಲ್ಲಿ ರೈತರಿಗೆ ಆತಂಕ ತಪ್ಪಿದ್ದಲ್ಲ. ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ನಲುಗಿರುವ ರೈತ ಮತ್ತಷ್ಟು ಕುಸಿಯದಿರಲಿ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಹಾಗೂ ಕ್ಷಿಪ್ರ ಕ್ರಮಕ್ಕೆ ಮುಂದಾಗಬೇಕು. ಆಗ ಮಾತ್ರ ಲಕ್ಷಾಂತರ ರೈತರು ನಿರಾಳರಾಗಲು ಸಾಧ್ಯ. ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಒಮ್ಮತ ಪ್ರದರ್ಶಿಸಲೆಂಬುದು ಜನರ ಆಶಯ.

Leave a Reply

Your email address will not be published. Required fields are marked *

Back To Top