Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪರಿಹಾರ ಕಾರ್ಯ ಚುರುಕಾಗಲಿ

Saturday, 18.08.2018, 3:04 AM       No Comments

ಳೆಯ ಆರ್ಭಟಕ್ಕೆ ರಾಜ್ಯದ ಕರಾವಳಿ, ಮಲೆನಾಡು ಪ್ರದೇಶ ಮತ್ತು ನೆರೆಯ ಕೇರಳ ರಾಜ್ಯ ತತ್ತರಿಸಿವೆ. ಆಗಸ್ಟ್ 21ರವರೆಗೂ ಭಾರಿ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತಷ್ಟು ಆತಂಕ ತಂದಿದೆ. ಕೇರಳದಲ್ಲಿ ಮಳೆ ಸಂಬಂಧಿತ ಅನಾಹುತಗಳಿಗೆ ಜೀವ ಕಳೆದುಕೊಂಡವರ ಸಂಖ್ಯೆ 300ರ ಗಡಿ ದಾಟಿದ್ದರೆ, ರಾಜ್ಯದಲ್ಲಿ ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಜನ ನಾಪತ್ತೆಯಾಗಿದ್ದಾರೆ. ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಮುಖ್ಯವಾಗಿ, ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಲ್ಕು ದಿಕ್ಕುಗಳಿಂದಲೂ ನೀರು ಆವರಿಸಿಕೊಂಡಿರುವ ಪರಿಣಾಮ ನೆರೆಸಂತ್ರಸ್ತರ ಬಳಿಗೆ ತಲುಪುವುದೇ ಸಾಹಸವಾಗಿದೆ. ಹಲವೆಡೆ ಭೂಕೂಸಿತ ಉಂಟಾಗಿದ್ದರೆ, ಮತ್ತೆ ಕೆಲವೆಡೆ ಹಳ್ಳಿಗೆ ಹಳ್ಳಿಗಳೇ ಮುಳುಗಿ ಹೋಗಿವೆ. ಅದೆಷ್ಟೋ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ನೆರವಿನ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ.

ಕುಶಾಲನಗರ, ಸೋಮವಾರಪೇಟೆಗಳಂತೂ ದ್ವೀಪಗಳಾಗಿ ಮಾರ್ಪಟ್ಟಿದ್ದು, ಎಲ್ಲೆಲ್ಲೂ ನೀರು ಆವರಿಸಿಕೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಮಳೆ ಅವಾಂತರಕ್ಕೀಡಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳಿಗೆ ಪರಿಹಾರ ಹಾಗೂ ನೆರವು ಕಾರ್ಯಾಚರಣೆಗಾಗಿ 200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪರಿಸ್ಥಿತಿ ಘೋರವಾಗಿದ್ದು, ಜನಸಾಮಾನ್ಯರ ರಕ್ಷಣೆಗೆ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಾಗಿ ನಡೆಸಬೇಕಿದೆ. ಎಲ್ಲದಕ್ಕೂ ಸರ್ಕಾರದ ಆದೇಶಕ್ಕೆ ಕಾಯದೆ, ಸ್ಥಳೀಯಾಡಳಿತಗಳು ಒಂದು ಹೆಜ್ಜೆ ಮುಂದೆ ಹೋಗಿ ಪರಿಹಾರ ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕಿದೆ. ನೆರೆಸಂತ್ರಸ್ತರಲ್ಲಿ ಭರವಸೆ, ವಿಶ್ವಾಸ ಮೂಡಿಸಬೇಕಿದೆ. ಸರ್ಕಾರ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಸಭೆ ನಡೆಸಿ ಸೂಚನೆಯನ್ನೇನೋ ನೀಡಿದೆ. ಇಷ್ಟು ಮಾತ್ರ ಸಾಕಾಗದು. ಆ ಸೂಚನೆಗಳು ಸ್ಥಳೀಯವಾಗಿ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿದೆ, ರಕ್ಷಣಾ ಕಾರ್ಯಾಚರಣೆ ಹೇಗೆ ಸಾಗಿದೆ ಎಂಬ ಪ್ರಕ್ರಿಯೆಯ ಮೇಲೆ ಸೂಕ್ತ ನಿಗಾ ಇರಿಸಿ, ಕೆಲಸಗಳ ವೇಗ ವರ್ಧಿಸಬೇಕು.

ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಅದರಲ್ಲೂ ಜಲಾಘಾತದಂಥ ಸನ್ನಿವೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನುರಿತ ಸಿಬ್ಬಂದಿಯೇ ಬೇಕು. ಆದರೆ, ‘ರಾಜ್ಯ ವಿಪತ್ತು ಸ್ಪಂದನ ಪಡೆ’(ಎಸ್​ಆರ್​ಡಿಎಫ್)ಯ ಸಿಬ್ಬಂದಿಯೇ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವುದು ವಿಪರ್ಯಾಸ. ‘ಪ್ರವಾಹದ ವೇಳೆ ಜನರ ರಕ್ಷಣೆಗೆ ಶ್ರಮಿಸುವ ನಮಗೆ ಊಟಕ್ಕೆ ಹಣ ಇರುವುದಿಲ್ಲ. ಸಂಬಳವೂ ವಿಳಂಬವಾಗಿ ಸಿಗುತ್ತದೆ’ ಎಂದು ಎಸ್​ಡಿಆರ್​ಎಫ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಸರ್ಕಾರ ಈ ಸಿಬ್ಬಂದಿಗೆ ನೀಡಿದ ಆಶ್ವಾಸನೆಗಳೂ ಈಡೇರಿಲ್ಲ. ಹೀಗಿರುವಾಗ ಈ ಸಿಬ್ಬಂದಿ ಕಾರ್ಯದಕ್ಷತೆಯಿಂದ ಮುಂದುವರಿಯಲು ಹೇಗೆ ಸಾಧ್ಯ?

ನೈಸರ್ಗಿಕ ವಿಕೋಪಗಳು ಹೇಳಿಕೇಳಿ ಬರುವಂಥದ್ದಲ್ಲ. ದಿಢೀರ್ ಆಗಿ, ಆಕಸ್ಮಿಕವಾಗಿ ಎರಗುವ ಇಂಥ ಆಪತ್ತುಗಳನ್ನು ಎದುರಿಸುವ ವ್ಯವಸ್ಥೆಗಳನ್ನು ಸುಸ್ಥಿತಿಯಲ್ಲಿ ಇರಿಸುವ, ಅವುಗಳಿಗೆ ಮತ್ತಷ್ಟು ಬಲ ತುಂಬುವ ಕೆಲಸ ನಡೆಯಬೇಕಿದೆ. ಒಟ್ಟಾರೆ, ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದ್ದು, ಅಲ್ಲಿನ ಜನಜೀವನ ಸಹಜಸ್ಥಿತಿಗೆ ಮರಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಲಿ, ಕ್ಷಿಪ್ರವಾಗಿ ಸ್ಪಂದಿಸಲಿ.

Leave a Reply

Your email address will not be published. Required fields are marked *

Back To Top