Friday, 16th November 2018  

Vijayavani

Breaking News

ಅನುಕರಣೀಯ ಬದುಕು

Friday, 17.08.2018, 3:03 AM       No Comments

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ದೊಡ್ಡ ಶೂನ್ಯವೊಂದನ್ನು ಸೃಷ್ಟಿಸಿದೆ. ಅಟಲ್​ಗೆ ಅವರೇ ಸಾಟಿ ಎನ್ನುವಂಥ ಧೀಮಂತ ವ್ಯಕ್ತಿತ್ವ, ಪ್ರಖರ ರಾಷ್ಟ್ರಭಕ್ತಿ, ಮೌಲ್ಯಯುತ ಜೀವನ. ಅದಕ್ಕಾಗಿಯೇ ರಾಜಕೀಯಭೇದ ಬದಿಗಿಟ್ಟು ಎಲ್ಲ ಪಕ್ಷಗಳ ನಾಯಕರು ವಾಜಪೇಯಿಯನ್ನು ಗೌರವದಿಂದ, ಹಿರಿಯಣ್ಣನನ್ನು ಕಾಣುವ ಅಕ್ಕರೆಯಿಂದ, ಸ್ನೇಹದಿಂದ ಪ್ರೀತಿಸುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ಅವರ ಮಾತು ಕೇಳಲೆಂದೇ ದೂರದೂರದ ಪ್ರದೇಶಗಳಿಂದಲೂ ಅಪಾರ ಜನಸಮೂಹ ಬಂದು ಸೇರುತ್ತಿತ್ತು. ಸದನದಲ್ಲಿ ವಿಪಕ್ಷಗಳ ನಾಯಕರೂ ಏಕಾಗ್ರವಾಗಿ ಅವರ ಭಾಷಣ ಆಲಿಸುತ್ತಿದ್ದರು. ನೆಹರುರಂತೂ 50ರ ದಶಕದಲ್ಲೇ ವಾಜಪೇಯಿ ಪ್ರತಿಭೆ ಗುರುತಿಸಿ ‘ಭವಿಷ್ಯದ ಪ್ರಧಾನಿ’ ಎಂದು ಗುರುತಿಸಿದ್ದರು.

ಸುದೀರ್ಘ ರಾಜಕೀಯ ಜೀವನದಲ್ಲಿ ಕಪು್ಪಚುಕ್ಕೆ ಇಲ್ಲದೆ ನಿಷ್ಕಳಂಕವಾಗಿ ಜೀವನಯಾತ್ರೆ ಪೂರ್ಣಗೊಳಿಸಿದ ವಾಜಪೇಯಿ ರಾಜಕೀಯದಲ್ಲಿದ್ದರೂ ಭಾವಜೀವಿಯಾಗಿದ್ದರು. ಅದಕ್ಕೆಂದೆ, ಜನಸಾಮಾನ್ಯರ ಕಡುಕಷ್ಟಗಳು ಬಹುಬೇಗ ಅವರ ಅನುಭವಕ್ಕೆ ಬರುತ್ತಿದ್ದವು, ಅದಕ್ಕೆ ಪರಿಹಾರ ಹುಡುಕುವ ದಾರಿಗಳನ್ನು ಶೋಧಿಸಲು ಪ್ರೇರೇಪಿಸುತ್ತಿದ್ದವು. ಕವಿಹೃದಯದ ಅಟಲ್ ಎಂದೂ ಸಂಯಮ ಕಳೆದುಕೊಳ್ಳಲಿಲ್ಲ. ‘ವಿಚಾರಗಳ ಭೇದವನ್ನು ರಚನಾತ್ಮಕವಾಗಿ ರ್ಚಚಿಸೋಣ, ಆದರೆ ವ್ಯಕ್ತಿಗತ ಟೀಕೆ-ಟಿಪ್ಪಣಿ ರಾಜನೀತಿಗೆ ಶೋಭೆಯಲ್ಲ’ ಎಂಬ ಅವರ ಮಾತು ಮತ್ತು ಅದರಂತೇ ನಡೆದುಕೊಂಡ ಅವರ ನಡೆ ಇಂದಿನ ಎಲ್ಲ ರಾಜಕೀಯ ಪಕ್ಷಗಳಿಗೂ ದೊಡ್ಡಪಾಠ.

ಮುರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶ ಮಂತ್ರಿಯಾಗಿ, ಅಲ್ಲದೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಾಂಗ ನೀತಿಗೆ ಬಲ ತುಂಬಿ ಭಾರತದ ವರ್ಚಸ್ಸು ಹೆಚ್ಚಿಸಿದರು. ಪಾಕಿಸ್ತಾನ, ಅಮೆರಿಕದ ಗಮನಕ್ಕೆ ಬಾರದಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ಭಾರತದ ಶಕ್ತಿಯನ್ನು ಮನದಟ್ಟು ಮಾಡಿಕೊಟ್ಟರು. ಅಣ್ವಸ್ತ್ರರಾಷ್ಟ್ರವಿದ್ಯಾಗೂ ಶಾಂತಿಮಂತ್ರ ಪಠಿಸುತ್ತ ಸಾಂಪ್ರದಾಯಿಕ ವೈರಿ ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚಿದರು, ಮನಸ್ಸುಗಳು ಬೆಸೆಯಲಿ ಎಂಬ ಆಶಯದಿಂದ ಲಾಹೋರ್​ಗೆ ಬಸ್ ಸೇವೆಯನ್ನೂ ಆರಂಭಿಸಿದರು.

ನಿಜಾರ್ಥದಲ್ಲಿ ಅಜಾತಶತ್ರುವಾಗಿದ್ದ, ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಸಾರಿದ ವಾಜಪೇಯಿ ಬದುಕು ಮತ್ತು ಆದರ್ಶ ಇಂದಿನ ನಾಯಕರ ಪಾಲಿಗೆ ಸದಾ ಅನುಕರಣೀಯ. ವಾಜಪೇಯಿ ತೋರಿಸಿಕೊಟ್ಟ ಮೌಲ್ಯಗಳು ರಾಜನೀತಿಯಲ್ಲಿ, ಸಾರ್ವಜನಿಕ ಬದುಕಿನಲ್ಲಿ ಅನುಷ್ಠಾನವಾದರೆ ಭಾರತ ಮತ್ತಷ್ಟು ಶಕ್ತಿಶಾಲಿ ಮತ್ತು ನೈತಿಕವಾಗಿ ಗಟ್ಟಿ ಆಗುವುದರಲ್ಲಿ ಸಂದೇಹವಿಲ್ಲ. ಭೌತಿಕವಾಗಿ ಅಳಿದರೂ ವಾಜಪೇಯಿ ಕೋಟ್ಯಂತರ ಹೃದಯಗಳಲ್ಲಿ ಆದರ್ಶವಾಗಿ, ಮೌಲ್ಯವಾಗಿ ಶಾಶ್ವತವಾಗಿ ಪ್ರತಿಷ್ಠಾಪನೆಗೊಳ್ಳಲಿ.

Leave a Reply

Your email address will not be published. Required fields are marked *

Back To Top