Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಆತ್ಮಾವಲೋಕನವಾಗಲಿ

Wednesday, 15.08.2018, 3:04 AM       No Comments

ದೇಶ ಮತ್ತೊಂದು ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಸಮೃದ್ಧ ಸಂಸ್ಕೃತಿ, ಇತಿಹಾಸ, ವೀರ-ಧೀರರ ಪರಂಪರೆಯ ಹಿನ್ನೆಲೆಯಿದ್ದೂ ವಸಾಹತುಶಾಹಿ ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿ ನಲುಗಬೇಕಾಗಿ ಬಂದದ್ದು ಭಾರತಕ್ಕೆ, ಭಾರತೀಯರಿಗೆ ಒದಗಿದ ಕೆಟ್ಟಕನಸು. ತಕ್ಕಡಿ ಹಿಡಿದು ಬಂದವರು ದೇಶದ ಅಧಿಕಾರಸೂತ್ರವನ್ನು ಹಿಡಿದುಕೊಳ್ಳುವಷ್ಟು ಧಾಷ್ಟರ್್ಯ ತೋರಿದ್ದು, ಕಾಲಕ್ರಮೇಣ ಅದಕ್ಕೆ ಭಾರತೀಯರಿಂದ ಪ್ರತಿರೋಧ ಒದಗಿ, ದೇಶಕ್ಕೆ ಸ್ವಾತಂತ್ರ್ಯ ನೀಡುವಂತಾಗಿದ್ದು- ಇವೆಲ್ಲ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಅಧ್ಯಾಯಗಳಾಗಿವೆ.

ಈ ಅಧ್ಯಾಯಗಳಿಂದ ನಾವು ಕಲಿತ ಪಾಠವೇನು ಎಂಬುದರ ಅವಲೋಕನಕ್ಕೆ ಈ ಸ್ವಾತಂತ್ರ್ಯೋತ್ಸವ ಪರ್ವಕಾಲವಾಗಬೇಕು. ಕಾರಣ, ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಳ್ಳುವುದಕ್ಕೂ ಮೊದಲು ‘ದೇಶ ಸ್ವತಂತ್ರವಾಗಬೇಕು’ ಎಂಬುದೊಂದೇ ಸಮಸ್ತ ಭಾರತೀಯರಲ್ಲಿ ಹರಳುಗಟ್ಟಿದ್ದ ಸಂಕಲ್ಪವಾಗಿತ್ತು. ಅದೀಗ ದಕ್ಕಿ ದಶಕಗಳೇ ಉರುಳಿವೆ. ಸಾರ್ವಭೌಮ-ಸರ್ವತಂತ್ರ-ಸ್ವತಂತ್ರ ಸಮಾಜವಾಗಿ ನಾವೀಗ ಹೊಮ್ಮಿದ್ದೇವೆ. ಆದರೆ ಸ್ವಾತಂತ್ರ್ಯ ದಕ್ಕಿಸಿಕೊಡುವಲ್ಲಿನ ಧೀರರ-ಧೀಮಂತರ ತ್ಯಾಗಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆಯೇ? ಸ್ವಾತಂತ್ರೊ್ಯೕತ್ತರದ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಲ್ಲಿ ಯಾವ ಸ್ತರದಲ್ಲಿದ್ದೇವೆ? ಎಂದು ಪ್ರತಿ ಭಾರತೀಯನೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

‘ಅಚಲ ರಾಷ್ಟ್ರೀಯತೆ’ ಎಂಬುದು ಅಂದಿನ ಭಾರತೀಯರಲ್ಲಿ ಮಡುಗಟ್ಟಿದ್ದ ಸ್ಥಾಯೀಭಾವವಾಗಿತ್ತು. ಈ ರಾಷ್ಟ್ರೀಯ ಪ್ರಜ್ಞೆ ಈಗಲೂ ಅಷ್ಟೇ ಗಾಢವಾಗಿದೆಯೇ ಅಥವಾ ಜಾಗತೀಕರಣದ ಪರಿಣಾಮ ಅಥವಾ ಪ್ರಾಂತೀಯ ಅಸ್ತಿತ್ವ ಕಾಯ್ದುಕೊಳ್ಳುವ ಹಪಹಪಿಯಲ್ಲಿ ಪ್ರತ್ಯೇಕತೆಯ ಭಾವ ಮುನ್ನೆಲೆಗೆ ಬಂದು ಅದಕ್ಕೆ ಸಂಚಕಾರ ಒದಗಿದೆಯೇ? ವಿವಿಧತೆಯಲ್ಲಿ ಅಖಂಡತೆ ಕಾಯ್ದುಕೊಳ್ಳುವ ಸಂಕಲ್ಪದ ತಳಹದಿ ಈಗಲೂ ಅಷ್ಟೇ ಗಟ್ಟಿಯಾಗಿದೆಯೇ? ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಿದೆ. ಕಾರಣ, ಪ್ರಾದೇಶಿಕ ಅಸ್ಮಿತೆಯು ರಾಷ್ಟ್ರೀಯತೆಯ ಪರಿಕಲ್ಪನೆಗೆ ಸಂಕಷ್ಟ ಒಡ್ಡುವಂತಾಗಬಾರದು.

ವಿದೇಶಿ ಅವಲಂಬನೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ತಗ್ಗಿಸಿ-ತಪ್ಪಿಸಿ, ಸ್ವದೇಶಿ ಪರಿಕಲ್ಪನೆ, ಉತ್ಪನ್ನ ಅಥವಾ ಸೇವೆಯನ್ನು ಉತ್ತೇಜಿಸುವ ಉಪಕ್ರಮಗಳಿಗೆ ಬಲತುಂಬಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಇಂಥದೇ ಆಶಯವಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಭಾರತವು ಚೀನಾದ ಅಗ್ಗದ ಸರಕುಗಳ ‘ಸುರಿತಾಣ’ವಾಗುವಂಥ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇಂಥ ಉಪಕ್ರಮಗಳು ದೇಶದ ಆರ್ಥಿಕತೆಯನ್ನು ಸುಧಾರಿಸುವುದರ ಜತೆಜತೆಗೆ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತವೆ.

ಒಂದು ಕಾಲಕ್ಕೆ ಕೌಶಲ ಆಧಾರಿತ ಶಿಕ್ಷಣ, ಗುರುಕುಲ ಪದ್ಧತಿಗೆ ಒಗ್ಗಿಸಿಕೊಂಡಿದ್ದ ಹಾಗೂ ನಲಂದಾ, ತಕ್ಷಶಿಲಾ, ವಿಕ್ರಮಶಿಲಾ, ಕಾಶಿ ಪ್ರತಿಷ್ಠಾನದಂಥ ವಿಶ್ವವಿದ್ಯಾಲಯ/ವಿದ್ಯಾಪೀಠಗಳಿಂದ ವಿಶ್ವಮಾನ್ಯವಾಗಿದ್ದ ಭಾರತ, ಮೆಕಾಲೆ-ಪ್ರಣೀತ ಶಿಕ್ಷಣಪದ್ಧತಿಗೆ ಒಡ್ಡಿಕೊಂಡಾಗಿನಿಂದ ಕೇವಲ ಗುಮಾಸ್ತರನ್ನು ತಯಾರಿಸುವಂತಾಗಿದೆ. ಅದಕ್ಕೆ ಪ್ರತಿಷ್ಠೆಯ ಮುಖವಾಡವೂ ದಕ್ಕಿಬಿಟ್ಟಿದೆ. ಇದು ಭಾರತೀಯರ ಅಸ್ಮಿತೆಗೆ, ‘ಭಾರತೀಯತೆ’ಯ ಪರಿಕಲ್ಪನೆಗೆ ಪರೋಕ್ಷವಾಗಿ ಕವಿದ ಮಸುಕೂ ಹೌದು. ಇಂಥ ಎಲ್ಲ ಭ್ರಮೆಯ ಪೊರೆಗಳನ್ನು ಕಳಚಿಕೊಂಡು ನಿಜಾರ್ಥದಲ್ಲಿ ಭಾರತೀಯರಾಗುವ, ಭಾರತೀಯವಾದುದನ್ನೇ ಸ್ವೀಕರಿಸುವ ಸಂಕಲ್ಪ ತಾಳಬೇಕಾಗಿದೆ.

ಪಾಕಿಸ್ತಾನ, ಚೀನಾದಂಥ ರಾಷ್ಟ್ರಗಳು ಭಾರತದ ನೆಮ್ಮದಿಗೆ ಭಂಗತರಲು ಒಂದಲ್ಲ ಒಂದು ರೀತಿಯಲ್ಲಿ ಸಂಚುಹೂಡುತ್ತಲೇ ಇವೆ. ಭಾಷೆ-ಬಣ್ಣ-ಪ್ರದೇಶ ಯಾವುದೇ ಇರಲಿ, ‘ಭಾರತೀಯರು ನಾವು ಎಂದೆಂದು ಒಂದೇ, ಭಾವೈಕ್ಯದಲಿ ಕೂಡಿ ನಡೆಯುವೆವು ಮುಂದೆ’ ಎಂಬ ಗಟ್ಟಿದನಿ ಹೊಮ್ಮಿದಲ್ಲಿ, ಯಾವ ಬಾಹ್ಯಶಕ್ತಿಯೂ ನಮ್ಮ ಅಸ್ತಿತ್ವವನ್ನು ಅಲುಗಾಡಿಸಲಾಗದು ಎಂಬುದನ್ನು ಮರೆಯದಿರೋಣ.

(ಓದುಗರ ಗಮನಕ್ಕೆ: ಸ್ವಾತಂತ್ರ್ಯೋತ್ಸವ ವಿಶೇಷ ಪುಟದ ಕಾರಣದಿಂದಾಗಿ ‘ಜಗದಗಲ’, ‘ಜರೂರ್ ಮಾತು’ ಮತ್ತು ಮನೋಲ್ಲಾಸ ಅಂಕಣಗಳು ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top