Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅನ್ನದಾತ ಹತಾಶಗೊಳ್ಳದಿರಲಿ

Monday, 23.07.2018, 3:04 AM       No Comments

ರಾಜ್ಯದ ಕೆಲವೆಡೆ ಶನಿವಾರ(ಜು.21) ರೈತ ಹುತಾತ್ಮ ದಿನವನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಅನ್ನದಾತರು ವಿವಿಧ ಆಯಾಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗಾಗಿ ರೈತರು ದಯಾಮರಣಕ್ಕೆ ಕೋರುವಷ್ಟರ ಮಟ್ಟಿಗೆ ದುಸ್ಥಿತಿಗೆ ತಲುಪಿದ್ದರೂ ಆಳುಗರಿಗೆ ಕರುಣೆ ಬಂದಿಲ್ಲ ಎಂಬುದರಿಂದ ಮೊದಲ್ಗೊಂಡು, ಮಹದಾಯಿ ಯೋಜನೆ ಜಾರಿಯಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂಬ, ರೈತರ ಸಂಪೂರ್ಣ ಸಾಲಮನ್ನಾ ಮಾಡದಿದ್ದರೆ ಆಗಸ್ಟ್ 15ರಂದು ಕಪು್ಪಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸುತ್ತೇವೆಂಬ ಘೋಷಣೆಗಳವರೆಗೆ, ಜನಪ್ರತಿನಿಧಿಗಳ ವಿರುದ್ಧದ ಘೋಷಣೆ-ಅಸಮಾಧಾನಗಳು ರೈತರಿಂದ ಹೊಮ್ಮಿವೆ.

ಕಾಲಕ್ಕೆ ತಕ್ಕಂತೆ ಮಳೆ ಬಾರದಿರುವ, ಬಂದರೂ ಇಳುವರಿಯ ಬೆಳೆ ಕೈಗೆ ಸಿಗದಿರುವ, ಸಿಕ್ಕರೂ ಮಾರುಕಟ್ಟೆಯಾಗಲೀ ಬೆಂಬಲ ಬೆಲೆಯಾಗಲೀ ದಕ್ಕದಿರುವಂಥ ಸಮಸ್ಯೆಯನ್ನು ರೈತರು ಬಹಳ ಕಾಲದಿಂದಲೂ ಎದುರಿಸಿಕೊಂಡೇ ಬಂದಿದ್ದಾರೆ ಎಂಬುದು ಗೊತ್ತಿರುವ ಸಂಗತಿಯೇ. ಇಷ್ಟು ಸಾಲದೆಂಬಂತೆ, ಮಧ್ಯವರ್ತಿಗಳ ಕಾಟ, ಬಿತ್ತನೆ ಬೀಜ-ರಸಗೊಬ್ಬರಗಳು ಸಕಾಲದಲ್ಲಿ ಸಿಗದಿರುವಿಕೆ, ಶೈತ್ಯಾಗಾರಗಳೂ ಸೇರಿದಂತೆ ಕೃಷಿಗೆ ಪೂರಕವಾಗಿರುವ ಸೌಲಭ್ಯಗಳ ಕೊರತೆಯೂ ರೈತರನ್ನು ಕಾಡುತ್ತಿವೆ. ಈ ಎಲ್ಲದರ ಪರಿಣಾಮವಾಗಿ, ರೈತರು ಸಾಲದ ಶೂಲಕ್ಕೆ, ಆತ್ಮಹತ್ಯೆಯ ಕೂಪದಲ್ಲಿ ಸಿಲುಕುವಂತಾಗಿದೆ ಎಂಬುದೂ ದಿಟವೇ. ಇದರಲ್ಲಿ ಆಳುಗರ ನಿರ್ಲಕ್ಷ್ಯದ ಪ್ರಮಾಣ ಎಷ್ಟು ಎಂಬುದು ಬೇರೆ ಆಯಾಮದ ಚರ್ಚಾವಿಷಯ. ಆದರೆ, ರೈತರು ಇಂಥ ಹತಾಶೆಯಲ್ಲೇ ದಿನದೂಡುವುದನ್ನಾಗಲೀ, ‘ಇನ್ನು ಎಲ್ಲವೂ ಮುಗಿದುಹೋಯಿತು’ ಎಂದು ಕೈಚೆಲ್ಲಿ ಕೂರುವುದನ್ನಾಗಲೀ ಮಾಡುವುದು ಬೇಡ ಎಂಬುದು ಬಹುಜನರ ಆಶಯ.

ಇಷ್ಟುದಿನ ವರುಣನ ಅವಕೃಪೆಯಿಂದ ಬಳಲಿದ್ದ ರೈತರಿಗೆ ಶುಭಸುದ್ದಿ ಎಂಬಂತೆ, ಕಾವೇರಿ ಕಣಿವೆ ಜಲಾಶಯ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು ಸಾಕಷ್ಟು ದಿನಗಳವರೆಗೆ ಇದು ಕೃಷಿಕಾರ್ಯಗಳಿಗೆ ಪೂರಕವಾಗಲಿದೆ ಎಂಬುದು ಸಮಾಧಾನಕರ ಸಂಗತಿ. ಇನ್ನು, ಈಗಷ್ಟೇ ಅಧಿಕಾರಕ್ಕೆ ಬಂದಿರುವ ಹೊಸ ಸಮ್ಮಿಶ್ರ ಸರ್ಕಾರ, ರೈತರ ಸಾಲಮನ್ನಾ ವಿಷಯದಲ್ಲಿ ಗಮನಾರ್ಹ ಹೆಜ್ಜೆಯನ್ನೇ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳೆಡೆಗೆ ಅದು ಗಮನ ಹರಿಸಲು ಸಾಧ್ಯವಿದೆ. ಕೇಂದ್ರ ಸರ್ಕಾರ ಕೂಡ ರೈತರ ಹಿತಕ್ಕಾಗಿ ಕೆಲ ಕ್ರಮಗಳನ್ನು ಕೈಗೊಂಡಿದೆ.

ಕೃಷಿವಲಯದ ಸಮಸ್ಯೆಗಳು ರಾತ್ರೋರಾತ್ರಿ ಪರಿಹಾರವಾಗಬೇಕು ಎಂದು ಅಪೇಕ್ಷಿಸುವುದೂ ಸಲ್ಲ, ಅದು ಕಾರ್ಯಸಾಧ್ಯವೂ ಅಲ್ಲ. ಸಾಲದ ಶೂಲಕ್ಕೆ ತಾವು ಸಿಲುಕುವಂತಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಒಂದೊಂದಾಗಿ ವಿಶ್ಲೇಷಿಸಿ, ಅದಕ್ಕಿರುವ ಪರ್ಯಾಯ ಪರಿಹಾರಮಾರ್ಗಗಳನ್ನು ಸ್ವತಃ ಕಂಡುಕೊಳ್ಳುವುದಕ್ಕೆ ರೈತರು ಮುಂದಾಗಬೇಕಿದೆ. ಬೆಳೆಗಳ ಆವರ್ತನ ಅಥವಾ ಸರದಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಿಕೆ, ಸಾಂಪ್ರದಾಯಿಕ ಬೆಳೆಗಳ ಜತೆಜತೆಗೆ ಆಯಾ ಕಾಲಘಟ್ಟದಲ್ಲಿ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಉಪಬೆಳೆಗಳು/ವಾಣಿಜ್ಯ ಬೆಳೆಗಳನ್ನು ಬೆಳೆಯುವಿಕೆ, ಪಾರಂಪರಿಕ ಮತ್ತು ಅನುಭವ ಜನ್ಯ ಕೃಷಿಕಾರ್ಯದ ಜತೆಜತೆಗೆ ಆಧುನಿಕ ಕೃಷಿ ಪದ್ಧತಿಗಳನ್ನೂ ಅಳವಡಿಸಿಕೊಂಡು ಹೆಚ್ಚೆಚ್ಚು ಇಳುವರಿ ತೆಗೆಯುವಿಕೆ, ಜಾನುವಾರು ಸಾಕಣೆ ಮತ್ತು ಹೈನೋದ್ಯಮವನ್ನು ಪೂರಕವಾಗಿ ನಿರ್ವಹಿಸುವಿಕೆ- ಹೀಗೆ ವೈವಿಧ್ಯಮಯ ಪ್ರಯೋಗಗಳಿಗೆ ಕೃಷಿಕರು ಒಡ್ಡಿಕೊಂಡು ಸಮಸ್ಯೆಯ ಕೂಪದಿಂದ ಆಚೆಗೆ ಬರಬೇಕಿದೆ. ಹೀಗಾದಲ್ಲಿ, ಆಳುಗರೂ ಸೇರಿದಂತೆ, ಸಮಾಜದ ಮಿಕ್ಕೆಲ್ಲ ವರ್ಗಗಳ ಸಹಾನುಭೂತಿ-ಸಹಕಾರ ಅವರಿಗೆ ದಕ್ಕುತ್ತದೆ.

Leave a Reply

Your email address will not be published. Required fields are marked *

Back To Top