ಸೂರಿನ ಕನಸಿಗೆ ರೆಕ್ಕೆ

ಇಂದಿನ ದುಬಾರಿ ಜಮಾನಾದಲ್ಲಿ ಜೀವನನಿರ್ವಹಣೆಗೇ ಕಸರತ್ತು ಪಡಬೇಕಾದ ಅನಿವಾರ್ಯತೆ. ಮಧ್ಯಮವರ್ಗ, ಕೆಳಮಧ್ಯಮವರ್ಗ, ಬಡವರಿಗೆ ಸ್ವಂತ ಸೂರಿನ ಕನಸು ನನಸಾಗುವುದಂತೂ ಸುಲಭವಲ್ಲ. ಈ ನಿಟ್ಟಿನಲ್ಲಿ ಮುಂಚೆಯಿಂದಲೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹೆಚ್ಚಿದ ಜನಸಂಖ್ಯೆ ಸಮಸ್ಯೆಯಿಂದ ಸರ್ವರಿಗೂ ಸೂರು ಎಂಬ ಆಶಯ ಈಡೇರಿಲ್ಲ. ಕೇಂದ್ರದಲ್ಲಿನ ಎನ್​ಡಿಎ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ) ಮೂಲಕ 2022ರ ಹೊತ್ತಿಗೆ ಸರ್ವರಿಗೂ ಸೂರು ಒದಗಿಸುವ ಮಹೋದ್ದೇಶ ಹೊಂದಿದೆ. ಪ್ರಸಕ್ತ ಈ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಸರ್ಕಾರ ಕಾರ್ಪೆಟ್ ಏರಿಯಾ ಹೆಚ್ಚಳ ಮಾಡಿದ್ದು, ಈಗ 200 ಚದರ ಮೀಟರ್ ವಿಸ್ತೀರ್ಣದ ಮನೆಗೂ ಸಬ್ಸಿಡಿ ದೊರೆಯಲಿದೆ. ಮನೆಯ ಗೋಡೆಗಳ ಒಳಗಿನ ಜಾಗ ಅಥವಾ ಮನೆಯಲ್ಲಿ ಸಂಪೂರ್ಣ ಬಳಕೆಗೆ ಸಿಗುವ ಸ್ಥಳವನ್ನು ಕಾರ್ಪೆಟ್ ಏರಿಯಾ ಎನ್ನಲಾಗುತ್ತದೆ. ಸಣ್ಣ ಪಟ್ಟಣಗಳಲ್ಲಿ ನಿರ್ವಿುಸಲಾಗುವ ಅಪಾರ್ಟ್​ವೆುಂಟ್, ಮನೆ ವಿಸ್ತೀರ್ಣ ಪಿಎಂಎವೈ ಯೋಜನೆ ವ್ಯಾಪ್ತಿಗೆ ಬರುತ್ತಿಲ್ಲ ಎಂದು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನೀತಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿರುವ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಅಧಿಕಾರಿಗಳು ಇದರಿಂದ ಗ್ರಾಹಕರಿಗೆ ಹಾಗೂ ಮನೆ ನಿರ್ಮಾಣ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ಯೋಜನೆ ಜಾರಿ ಮಾಡಿದ ಬಳಿಕ ಕಾಲಕಾಲಕ್ಕೆ ಅದನ್ನು ಪರಿಷ್ಕರಿಸಿ ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಸೂಕ್ತ ನಡೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಲಾಭ ದೊರಕಿಸಿಕೊಡಲು ಸಾಧ್ಯವಾಗಿ, ಯೋಜನೆಯ ಆಶಯವೂ ಈಡೇರುತ್ತದೆ. ಹಾಗಾಗಿಯೇ, ಕೇಂದ್ರ ಸರ್ಕಾರ ಎರಡನೇ ಬಾರಿ ಕಾರ್ಪೆಟ್ ಏರಿಯಾವನ್ನು ಹೆಚ್ಚಳ ಮಾಡಿದೆ. ಈ ಹಿಂದೆ 2017 ನವೆಂಬರ್​ನಲ್ಲಿ ಪಿಎಂಎವೈ ಯೋಜನೆಯ ಫಲಾನುಭವಿಗೆ ಗರಿಷ್ಠ ಕಾರ್ಪೆಟ್ ಏರಿಯಾವನ್ನು 90 ಚದರ್ ಮೀಟರ್​ನಿಂದ 120 ಚ.ಮೀ.ಗೆ ಹೆಚ್ಚಿಸಲಾಗಿತ್ತು.

ಮತ್ತೊಂದೆಡೆ, ವಸತಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವೂ ಸಿಹಿಸುದ್ದಿ ನೀಡಿದೆ. ವಸತಿ ಯೋಜನೆ ಫಲಾನುಭವಿಯಾದರೂ ಆರ್ಥಿಕ ಮುಗ್ಗಟ್ಟಿನಿಂದ ಸೂರು ಸೃಷ್ಟಿಸಿಕೊಳ್ಳಲಾಗದ ಬಡವರಿಗೆ ಮನೆ ತಳಪಾಯಕ್ಕಾಗಿ ಸ್ಥಳೀಯ ಸಹಕಾರ ಬ್ಯಾಂಕುಗಳಿಂದ ಸಾಲ ಒದಗಿಸಲು ಸರ್ಕಾರ ನಿರ್ಧರಿಸಿರುವ ಬಗ್ಗೆ ವಸತಿ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬೆಂಗಳೂರು ವಸತಿ ಯೋಜನೆ ಮಾದರಿಯಲ್ಲೇ ಇತರೆ ನಗರಗಳಲ್ಲೂ ಮೂರು ಅಂತಸ್ತಿನ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಲು ಆನ್​ಲೈನ್​ನಲ್ಲೇ ಅರ್ಜಿ ಆಹ್ವಾನ, ದಾಖಲೆ ಪರಿಶೀಲನೆ ಕಾರ್ಯ ನಡೆಯಲಿದೆ. ನಿಜಕ್ಕೂ ಈ ಕ್ರಮಗಳು ಜನಸ್ನೇಹಿಯಾಗಿವೆ. ಆದರೆ, ಅನುಷ್ಠಾನದ ಹಂತದಲ್ಲಿ ಲೋಪಗಳು ನುಸಳದಂತೆ, ದುರುಪಯೋಗ ಆಗದಂತೆ ಸೂಕ್ತ ನಿಗಾ ವಹಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಸತಿ ನೀತಿಯ ಆಶಯ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ಗುಡಿಸಲುಮುಕ್ತ ರಾಷ್ಟ್ರದ ಕನಸಿನ ಸಾಕಾರದ ನಿಟ್ಟಿನಲ್ಲಿ ಮತ್ತಷ್ಟು ಮುಂದೆ ಕ್ರಮಿಸಿದಂತಾಗುತ್ತದೆ. ಮುಂದೆ ಕೆಲ ವರ್ಷಗಳಲ್ಲಿ ಸರ್ವರಿಗೂ ಸೂರು ಒದಗಿದರೆ ನಿಜಕ್ಕೂ ಅಚ್ಛೇ ದಿನ್ ಬಂದಂತೆ.

Leave a Reply

Your email address will not be published. Required fields are marked *