ಸೂಕ್ತ ಮಾತು, ತಕ್ಕ ನಡೆ

ಶಾಂಘೈ ಸಹಕಾರ ಒಕ್ಕೂಟಕ್ಕೆ (ಎಸ್​ಸಿಒ) ಭಾರತ ಕಾಯಂ ಸದಸ್ಯರಾಷ್ಟ್ರವಾದ ಬಳಿಕ ಚೀನಾದ ಕ್ಯುಂಗ್ಡಾವೋನಲ್ಲಿ ನಡೆದ ಶೃಂಗ ಭಾರಿ ನಿರೀಕ್ಷೆ ಮೂಡಿಸಿತ್ತು. ಈ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ನೆರೆರಾಷ್ಟ್ರಗಳೊಂದಿಗಿನ ಸಂಬಂಧ ವೃದ್ಧಿಗೆ ಆದ್ಯತೆ ನೀಡಿತಲ್ಲದೆ ತನ್ನ ನಿಲುವುಗಳನ್ನು ಖಡಾಖಂಡಿತವಾಗಿ ಮಂಡಿಸಿದ್ದು ವಿಶೇಷವಾಗಿತ್ತು. ಚೀನಾ, ಭಾರತಕ್ಕೆ ಅರೆಸ್ನೇಹಿತನೂ ಹೌದು, ಶತ್ರುವೂ ಹೌದು. ಚೀನಾದೊಂದಿಗೆ ಭಾರತದ ವಾಣಿಜ್ಯ ಸಂಬಂಧಗಳು ಬಲಿಷ್ಠವಾಗಿವೆ. ಮತ್ತೊಂದೆಡೆ, ಉಭಯ ರಾಷ್ಟ್ರಗಳ ನಡುವಿನ ಗಡಿವಿವಾದವೂ ಜೀವಂತವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಬಂಧ ಸುಧಾರಣೆಗೆ ಯತ್ನಿಸುತ್ತಲೇ ಭಾರತದ ಸಾರ್ವಭೌಮತೆ, ಗಡಿಯ ವಿಷಯ ಬಂದಾಗ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಎಸ್​ಸಿಒ ಶೃಂಗ ಉದ್ದೇಶಿಸಿ ಮಾತನಾಡಿದ ಮೋದಿ ಭಯೋತ್ಪಾದನೆ ವಿರುದ್ಧ ಹೋರಾಟ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡುತ್ತಲೇ ಚೀನಾದ ‘ಒನ್ ಬೆಲ್ಟ್ ಒನ್ ರೋಡ್’(ಒಬಿಒಆರ್) ಯೋಜನೆಗೆ ಭಾರತದ ಬೆಂಬಲವಿಲ್ಲ ಎಂದು ಗಟ್ಟಿದನಿಯಲ್ಲಿ ಸಾರಿದರು. ಒಬಿಒಆರ್ ಯೋಜನೆ ಮೂಲಕ ಚೀನಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ರಸ್ತೆನಿರ್ವಣಕ್ಕೆ ಮುಂದಾಗಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕರು ಪಿಒಕೆ ಮೂಲಕವೇ ಭಾರತದ ಗಡಿ ಪ್ರವೇಶಿಸಲು ಯತ್ನಿಸುತ್ತಿರುವುದೂ ರಹಸ್ಯವೇನಲ್ಲ. ಈ ಹಿಂದೆ, ಭಾರತ ಪಿಒಕೆಯಲ್ಲಿ ಸರ್ಜಿಕಲ್ ದಾಳಿ ನಡೆಸಿ ಭಯೋತ್ಪಾದಕರ ಹಲವು ಅಡಗುದಾಣಗಳನ್ನು ಧ್ವಂಸಗೊಳಿಸಿತ್ತು. ಹೀಗಿರುವಾಗ, ಚೀನಾದ ಒಬಿಒಆರ್ ಯೋಜನೆ ಭಾರತದ ಸುರಕ್ಷತೆ ಮತ್ತು ಸಾರ್ವಭೌಮತೆಗೆ ಅಪಾಯ ತಂದೊಡ್ಡುವಂಥದ್ದು ಎಂಬುದು ಖಚಿತ. ಆದ್ದರಿಂದಲೇ, ಈ ಹಿಂದೆಯೇ ಪ್ರಸಕ್ತ ಯೋಜನೆಗೆ ಭಾರತ ತನ್ನ ವಿರೋಧ ತೋರಿಯಾಗಿದೆ. ಈಗ, ಶಾಂಘೈ ಸಹಕಾರ ಒಕ್ಕೂಟದಂಥ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ನಿಲುವು ಸ್ಪಷ್ಟಪಡಿಸುವ ಮೂಲಕ ಪ್ರಧಾನಿ ದಿಟ್ಟತನ ತೋರಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಎಸ್​ಸಿಒ ಸದಸ್ಯರಾಷ್ಟ್ರಗಳ ಪೈಕಿ ಒಬಿಒಆರ್ ಯೋಜನೆಗೆ ವಿರೋಧ ತೋರಿದ್ದು ಭಾರತವೊಂದೇ. ಅಂದರೆ, ಭಾರತ ಯಾವುದೇ ಒತ್ತಡಗಳಿಗೆ ಮಣಿಯದೆ ತನ್ನ ನಿಲುವಿಗೆ ಬದ್ಧವಾಗಿರುವ ಮೂಲಕ ಆತ್ಮಾಭಿಮಾನ ಮೆರೆದಿರುವುದು ಸಕಾರಾತ್ಮಕ ಬೆಳವಣಿಗೆಯೇ ಸರಿ.

ಸಹಭಾಗಿತ್ವದ, ಪಾರದರ್ಶಕ ಮತ್ತು ಸುಸ್ಥಿರ ಯೋಜನೆಗಳನ್ನು ಕೈಗೆತ್ತಿಕೊಂಡರೆ ಅದಕ್ಕೆ ಭಾರತ ಬೆಂಬಲ ನೀಡಲಿದೆ ಎಂದು ಮೋದಿ ಸ್ಪಷ್ಟಪಡಿಸಿದರು. ಬ್ರಹ್ಮಪುತ್ರ ನದಿನೀರು ಹರಿವಿನ ಮಾಹಿತಿ ಹಂಚಿಕೆ ಒಪ್ಪಂದ ಏರ್ಪಡುವ ಮೂಲಕ ಒಂದೆಡೆ ಚೀನಾದೊಂದಿಗೆ ಸಂಬಂಧವೂ ವೃದ್ಧಿಯಾಗಿದೆ. ಜತೆಗೆ, ನೆರೆರಾಷ್ಟ್ರಗಳು ಗಡಿ ಮತ್ತು ಪ್ರಾದೇಶಿಕ ಏಕತೆಯನ್ನು ಗೌರವಿಸಬೇಕು ಎನ್ನುವ ಸಂದೇಶವನ್ನೂ ಮೋದಿ ರವಾನಿಸಿದರು. ಚೀನಾ ಕೂಡ ಕ್ರಮೇಣವಾಗಿ ಭಾರತದ ಶಕ್ತಿಯನ್ನು, ಅಂತಾರಾಷ್ಟ್ರೀಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದೆ. ಭಾರತದ ವಿರೋಧ ಕಟ್ಟಿಕೊಂಡು ಮುಂದಡಿ ಇಡುವುದು ಕಷ್ಟಕರ ಎಂಬ ಅರಿವು ಅದಕ್ಕಿದೆ. ಹಾಗಾಗಿಯೇ, ಸಂಬಂಧ ಸುಧಾರಣೆಗೆ ಪ್ರಾಮುಖ್ಯ ನೀಡಿದೆ ಅಲ್ಲದೆ ಭಾರತದ ನಿಲುವಿಗೆ, ಮಾತಿಗೆ ಮನ್ನಣೆ ನೀಡುತ್ತಿದೆ. ಗಟ್ಟಿ ವಿದೇಶಾಂಗ ನೀತಿಯನ್ನು ಹೊಂದಿದರೆ ಮಾತ್ರ ದೇಶದ ಹಿತವನ್ನು ಕಾಯ್ದುಕೊಳ್ಳಲು ಸಾಧ್ಯ. ಆದರೆ ಇದಕ್ಕೆ ಪ್ರತಿಯಾಗಿ ಚೀನಾದ ನಡೆ ಏನಿರುತ್ತದೆಂಬ ಬಗ್ಗೆ ಭಾರತ ಜಾಗರೂಕವಾಗಿರಬೇಕು.

Leave a Reply

Your email address will not be published. Required fields are marked *