Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸುಶಾಸನದ ಸಂಕಲ್ಪವಾಗಲಿ

Tuesday, 12.06.2018, 3:04 AM       No Comments

ಮಂತ್ರಿಪದವಿಗಾಗಿ ಮೇಲಾಟ, ನಿರ್ದಿಷ್ಟ ಖಾತೆಗೆ ನಡೆದ ಕೊನೆಮೊದಲಿಲ್ಲದ ಹಗ್ಗಜಗ್ಗಾಟ, ಹುಸಿಮುನಿಸು, ಬ್ಲಾ್ಯಕ್​ವೆುೕಲ್ ತಂತ್ರ, ಪರಾಕ್ರಮ ಪ್ರದರ್ಶನ- ಹೀಗೆ ಹಲವು ತೆರನಾದ ಚಟುವಟಿಕೆಗಳು ಮತ್ತು ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ರಾಜ್ಯ ರಾಜಕೀಯ ಸಾಗರದಲ್ಲಿನ ‘ಕದಡಿದ ನೀರು’ ಕೊನೆಗೂ ತಿಳಿಯಾಗುವ ಲಕ್ಷಣಗಳು ಕಾಣುತ್ತಿವೆ. ವಿಧಾನಸಭಾ ಚುನಾವಣಾ ಫಲಿತಾಂಶ ಹೊಮ್ಮಿಸಿದ ಅತಂತ್ರ ರಾಜಕೀಯ ಸನ್ನಿವೇಶಕ್ಕೆ ಮದ್ದರೆಯಲೋ ಎಂಬಂತೆ ಬಹುಮತವಿಲ್ಲದ ಎರಡು ರಾಜಕೀಯ ಪಕ್ಷಗಳು ಪರಸ್ಪರ ಕೈಕುಲುಕಿ ಸರ್ಕಾರ ರಚಿಸಿದರೂ ಗೊಂದಲಗಳು ಮುಗಿಯದಂಥ, ಸಮಸ್ಯೆ ಬಗೆಹರಿಯದಂಥ ಕಗ್ಗಂಟು ರೂಪುಗೊಂಡಾಗ ಶ್ರೀಸಾಮಾನ್ಯರು ಒಂದಿಡೀ ರಾಜಕೀಯ ವ್ಯವಸ್ಥೆಯ ಕುರಿತೇ ಹೇವರಿಕೆ ವ್ಯಕ್ತಪಡಿಸಿದ್ದುಂಟು. ಈಗ ಅವೆಲ್ಲ ನಿರ್ಣಾಯಕ ಹಂತಕ್ಕೆ ತಲುಪಿದ್ದು, ನಿಜಾರ್ಥದಲ್ಲಿ ಸರ್ಕಾರವೊಂದು ಕಾರ್ಯಾಚರಣೆಗೆ ಮೈಕೊಡವಿಕೊಂಡು ನಿಂತಿರುವಂತೆ ಭಾಸವಾಗುತ್ತಿದೆ. ಈ ಸುಸ್ಥಿರತೆ ಅಬಾಧಿತವಾಗಿರಲಿ ಎಂಬುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪ್ರಜ್ಞಾವಂತರೆಲ್ಲರ ಆಶಯ. ಹಲವು ದಿನಗಳ ನಂತರ ವಿಧಾನಸೌಧದಲ್ಲಿ ಮಂತ್ರಿ್ರಳ ಚಟುವಟಿಕೆ ಶುರುವಾಗಿದ್ದು, ಉತ್ತಮ ಆಡಳಿತದ ಬದ್ಧತೆಯನ್ನು ಎಲ್ಲರೂ ತೋರ್ಪಡಿಸಬೇಕಿದೆ. ಸಮ್ಮಿಶ್ರ ಸರ್ಕಾರದ ಪ್ರಯೋಗದ ಯಶಸ್ಸು-ಅಪಯಸ್ಸನ್ನು ನಿರ್ಧರಿಸುವಲ್ಲಿ ಸಚಿವರ ಕಾರ್ಯವೈಖರಿಯೂ ಮುಖ್ಯ ಪಾತ್ರವಹಿಸುತ್ತದೆ ಎಂಬುದನ್ನು ಮರೆಯಬಾರದು.

ಆದರೆ, ಸೋಮವಾರ ಬೆಂಗಳೂರಿನಲ್ಲಿ ಅಭಿನಂದನಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತೋಡಿಕೊಂಡಿರುವ ಅಸಹಾಯಕತೆ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರಿ ಅಧಿಕಾರಿಗಳ ಹಂತದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರದ ಮೂಲೋತ್ಪಾಟನೆಗೆ ಏಕಾಏಕಿ ಮುಂದಾದಲ್ಲಿ, ತಾವು ಮುಖ್ಯಮಂತ್ರಿಯಾಗಿ ಮುಂದುವರಿಯದಂತೆ ಅವರೇ ಕೆಳಗಿಳಿಸಿಬಿಡುತ್ತಾರೆ ಎಂದಿರುವ ಮುಖ್ಯಮಂತ್ರಿಗಳು, ಇಂಥ ಭ್ರಷ್ಟಕೂಪದ ಸ್ವಚ್ಛತೆ ಅಂದುಕೊಂಡಷ್ಟು ಸುಲಭವಲ್ಲ ಎಂದೂ ಕೈಚೆಲ್ಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ವಿಳಂಬನೀತಿ, ಉತ್ತರದಾಯಿತ್ವದ ಕೊರತೆ ಇತ್ಯಾದಿಗಳನ್ನು ಬಿಡಿಸಿ ಹೇಳಬೇಕಿಲ್ಲ. ಜನಕಲ್ಯಾಣ ಹಾಗೂ ಅಭಿವೃದ್ಧಿ ಸಂಬಂಧಿತ ಯೋಜನೆಗಳು ಹೇರಳವಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಂತಿಮ ಫಲಾನುಭವಿಗಳು ಅವುಗಳ ಪರಿಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಾ ಗುತ್ತಿಲ್ಲ ಎಂಬುದೂ ದಿಟವೇ. ಆದರೆ ಇವೆಲ್ಲ ಯಾವುದೇ ಶಸ್ತ್ರ-ಗುರಾಣಿ ಹೊಂದಿಲ್ಲದ ಶ್ರೀಸಾಮಾನ್ಯರ ಅಳಲುಗಳಾಗಬೇಕೇ ವಿನಾ, ದಕ್ಷ ಆಡಳಿತ ನೀಡಲೆಂಬ ಹರಕೆ-ಹಾರೈಕೆ ಯೊಂದಿಗೆ ಶಕ್ತಿಕೇಂದ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸರ್ಕಾರದ ಮುಖ್ಯಸ್ಥನಿಂದಲ್ಲ. ತಾವು ಸನ್ನಿವೇಶದ ಶಿಶು ಎಂಬುದು ಮುಖ್ಯಮಂತ್ರಿಗಳ ಗ್ರಹಿಕೆ; ಸಮ್ಮಿಶ್ರ ಸರ್ಕಾರದ ದರ್ಬಾರಿನಲ್ಲಿ ಇಂಥದೊಂದು ಹಂಗು, ಮುಲಾಜಿನ ಅನಿವಾರ್ಯತೆ ಇದ್ದಿರಲೂಬಹುದು. ಆದರೆ ಜನಹಿತ- ರೈತಹಿತ ಕಾಯುವ, ನಿರುದ್ಯೋಗ-ಬಡತನವೇ ಮೊದಲಾದ ಸಮಸ್ಯೆಗಳನ್ನು ನಿವಾರಿಸುವ ಸಂಕಲ್ಪವನ್ನೊಮ್ಮೆ ಕಲ್ಪಿಸಿಕೊಂಡರೆ ಇಂಥ ಯಾವ ಮಿತಿಗಳೂ ಕಾರ್ಯಾಚರಣೆಗೆ ಅಡ್ಡಿಯಾಗಲಾರವು, ಆ ನಿಟ್ಟಿನಲ್ಲಿ ಜನರ ಶ್ರೀರಕ್ಷೆ ಇದ್ದೇ ಇರುತ್ತದೆ ಎಂಬುದನ್ನು ಅವರು ಅರಿತರೆ ಒಳಿತು. ಕಾರಣ ಅವರು ರಾಜಕೀಯ ಪಕ್ಷವೊಂದರ ಪ್ರತಿನಿಧಿ ಮಾತ್ರವೇ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸಾಂವಿಧಾನಿಕ ಪ್ರತಿನಿಧಿ. ಜನಸ್ನೇಹಿ ಕಾರ್ಯಗಳಿಗೆ ಚುರುಕು ನೀಡಿ, ಭ್ರಷ್ಟಾಚಾರವೃಕ್ಷವನ್ನು ಬುಡಮೇಲು ಮಾಡಲು ತಮಗೊಂದಿಷ್ಟು ಕಾಲಾವಕಾಶ ಬೇಕು ಎಂದು ಕೇಳಿದ್ದಾರೆ ಮುಖ್ಯಮಂತ್ರಿಗಳು. ಅದು ಹಿಂದೊಮ್ಮೆಯೂ ಅವರಿಗೆ ದಕ್ಕಿತ್ತು; ಈಗಲೂ ಮತ್ತೊಮ್ಮೆ ದಕ್ಕಿದೆ. ಇದಕ್ಕೆ ಬೇಕಾದುದು ರಾಜಕೀಯ ಇಚ್ಛಾಶಕ್ತಿ.

Leave a Reply

Your email address will not be published. Required fields are marked *

Back To Top