Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕುತೂಹಲಕರ ಪ್ರಯತ್ನ

Monday, 11.06.2018, 3:04 AM       No Comments

ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿರುವ ಪ್ರತಿಭಾವಂತರನ್ನು ಸರ್ಕಾರಿ ಸೇವೆಯೆಡೆ ಸೆಳೆಯುವ ಯತ್ನದ ಒಂದು ಭಾಗವಾಗಿ, ವಿಭಿನ್ನ ಖಾತೆಗಳಡಿ ಬರುವ 10 ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ರಸ್ತೆ ಸಾರಿಗೆ, ಹಣಕಾಸು ಸೇವೆ, ಆರ್ಥಿಕ ವ್ಯವಹಾರಗಳು, ಕಂದಾಯ, ಕೃಷಿ, ನಾಗರಿಕ ವಿಮಾನಯಾನ ಮತ್ತು ವಾಣಿಜ್ಯ, ಹಡಗು ಸಾರಿಗೆ, ಪರಿಸರ ಮತ್ತು ಅರಣ್ಯ ಖಾತೆಗಳಿಗೆಂದು ಈ ಆಹ್ವಾನ ನೀಡಲಾಗಿದ್ದು, ಸರ್ಕಾರಿ ಅಧಿಕಾರಿಶಾಹಿಯ ಆಡಳಿತ ವೈಖರಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇದೊಂದು ಕುತೂಹಕರ ಪ್ರಯತ್ನ ಎನ್ನಲಡ್ಡಿಯಿಲ್ಲ.

ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣದಡಿ ಬರುವ ಬಹುತೇಕ ಇಲಾಖೆಗಳಲ್ಲಿ, ಅವ್ಯವಸ್ಥೆ ತಾಂಡವವಾಡುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ, ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ‘ಕೆಂಪುಪಟ್ಟಿ’ಯ ಹಿಡಿತ ಢಾಳಾಗೇ ಇದೆ ಎಂದು ವಿಶ್ವದ ಮಿಕ್ಕ ರಾಷ್ಟ್ರಗಳು ಮಾತಾಡಿಕೊಳ್ಳುವಂತಾಗಿದೆ. ಈ ಗ್ರಹಿಕೆಯನ್ನು ಬದಲಿಸಿ, ಖಾಸಗಿ ಕಂಪನಿಗಳು ಮತ್ತು ಉದ್ದಿಮೆಗಳಲ್ಲಿ ಕಂಡುಬರುವ ‘ಕಾಪೋರೇಟ್’ ಶಿಸ್ತನ್ನು ಸರ್ಕಾರಿ ವ್ಯವಸ್ಥೆಯಲ್ಲೂ ಅಳವಡಿಸುವ ಗುರಿ ಕೇಂದ್ರದ ಈ ಆಶಯದ ಹಿಂದಿದೆ ಎಂಬುದು ಸ್ಪಷ್ಟಗೋಚರ. ವಿಷಯತಜ್ಞರು ಮತ್ತು ಪರಿಣತರು ಆಯಕಟ್ಟಿನ ಜಾಗಗಳಲ್ಲಿದ್ದುಕೊಂಡು ನಿರ್ಣಾಯಕ ಪಾತ್ರ ವಹಿಸುವುದರಿಂದ, ಜನಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಬಂದು ಸರ್ವಾಂಗೀಣ ಪ್ರಗತಿ ಸಾಕಾರಗೊಳ್ಳುತ್ತದೆ ಎಂಬುದು ಸರ್ಕಾರದ ಅಂದಾಜು ಇದ್ದಿರಲಿಕ್ಕೂ ಸಾಕು. ಈ ಅಂದಾಜು-ಆಶಯಗಳು ಸಮರ್ಥವಾಗಿ ಕೈಗೂಡುವಂತಾಗಲಿ ಎಂದು ಹಾರೈಸೋಣ.

ಆದರೆ ಈ ನಿಟ್ಟಿನಲ್ಲಿರುವ ಸಾಧಕ-ಬಾಧಕಗಳ ಅವಲೋಕನವೂ ಅತ್ಯಗತ್ಯ. ಸರ್ಕಾರಿ ಕಚೇರಿಗಳಲ್ಲಿ ಹಾಸುಹೊಕ್ಕಾಗಿರುವ ವಿಳಂಬನೀತಿ, ಭ್ರಷ್ಟಾಚಾರ, ಉತ್ತರದಾಯಿತ್ವ ಇಲ್ಲದಿರುವಿಕೆ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಿಕೆಯಂಥ ಸಮಸ್ಯೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಈ ‘ಕಾಪೋರೇಟ್ ಶಿಸ್ತು’ ಯಶ ಕಂಡೀತು. ಹಾಗಾದಲ್ಲಿ ಅದು ಶ್ಲಾಘನೀಯವೇ. ಆದರೆ, ಜಂಟಿ ಕಾರ್ಯದರ್ಶಿಯಂಥ ಆಯಕಟ್ಟಿನ ಹುದ್ದೆಗಳಿಗೆ ಪರಿಣತರು, ಪ್ರತಿಭಾವಂತರು ನೇಮಕಗೊಂಡರೂ, ಅವರಿಗೆ ಎಷ್ಟರ ಮಟ್ಟಿಗಿನ ಕಾರ್ಯಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ ಸಿಗುತ್ತದೆ ಎಂಬುದಿಲ್ಲಿ ಪ್ರಶ್ನೆ. ಕಾರಣ, ಈ ಹುದ್ದೆಗಳನ್ನು ಅಲಂಕರಿಸುವವರು ಸಹಜವಾಗಿಯೇ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮತ್ತಿತರ ಉನ್ನತಾಧಿಕಾರಿಗಳು, ಮಂತ್ರಿ-ಮಹೋದಯರ ಹುಕುಂ ಅಥವಾ ಮರ್ಜಿಗೆ ತಕ್ಕಂತೆಯೇ ವರ್ತಿಸಬೇಕಾಗುತ್ತದೆ. ಅದು ಸದಾಶಯದ ಕ್ರಮವಾಗಿದ್ದರೆ ತಪ್ಪೇನಿಲ್ಲ; ಆದರೆ ಒಂದೊಮ್ಮೆ ವಾಮಮಾರ್ಗದ ವಾಸನೆ ಅಲ್ಲಿ ಕಂಡುಬಂದರೆ ಏನು ಮಾಡಬೇಕು? ಮತ್ತೊಂದೆಡೆ, ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಸೇರಿದ ಪ್ರತಿಷ್ಠಿತ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಪರಿಣತರು, ಸರ್ಕಾರಿ ವ್ಯವಸ್ಥೆಯೊಳಗೆ ತೂರಿಕೊಂಡ ನಂತರ ಮೂಲಸಂಸ್ಥೆಗೆ ಅನುಕೂಲಕರವಾಗುವಂಥ ಕಾರ್ಯಕ್ರಮ ನಿರೂಪಣೆಯಲ್ಲೋ, ಪ್ರಭಾವ ಬೀರುವಿಕೆಯಲ್ಲೋ ಅಥವಾ ಸ್ವಹಿತಾಸಕ್ತಿಯ ನೆರವೇರಿಕೆಯಲ್ಲೋ ತೊಡಗಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಈ ಎರಡೂ ರೀತಿಯ ‘ದಿಕ್ಚ್ಯುತಿಗಳು’ ಜನಕಲ್ಯಾಣದ ಆಶಯದಿಂದ ವಿಮುಖವಾಗುವುದಕ್ಕೆ ಒತ್ತಾಸೆ ನೀಡುತ್ತವೆ ಎಂಬ ಕಹಿಸತ್ಯವನ್ನು ಮರೆಯಲಾಗದು. ಹೊರಗಿನ ಪ್ರತಿಭಾವಂತರನ್ನು ಆಯಕಟ್ಟಿನ ಸರ್ಕಾರಿ ಹುದ್ದೆಗಳಿಗೆ ನೇಮಿಸಿಕೊಳ್ಳುವ ಚಿಂತನೆ ಈಗಷ್ಟೇ ಹೊಮ್ಮಿದೆ. ಹೀಗಾಗಿ ಇದು ವಿಫಲಗೊಳ್ಳುತ್ತದೆ ಎನ್ನುವುದೋ ಅಥವಾ ವಿನಾಕಾರಣ ಟೀಕಿಸುವುದೋ ಸಿನಿಕತನವಾದೀತು. ಆದರೆ ಸಂಭಾವ್ಯ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ‘ತಪ್ಪಿಗೆ ಆಸ್ಪದವಿಲ್ಲದಂಥ’ ಉಪಕ್ರಮಗಳನ್ನು ಅಳವಡಿಸಿಕೊಂಡರೆ, ಸರ್ಕಾರಿ ಅಧಿಕಾರಿಶಾಹಿಯಲ್ಲೂ ಕ್ರಾಂತಿಕಾರಕ ಬದಲಾವಣೆಗಳನ್ನು ತರುವುದು ಸಾಧ್ಯವಿದೆ ಎಂಬುದಂತೂ ಸತ್ಯ. ಅಂಥ ಕಾಲ ಆದಷ್ಟು ಬೇಗ ಬರಲಿ.

Leave a Reply

Your email address will not be published. Required fields are marked *

Back To Top