ಎಚ್ಚರಿಕೆಯ ಗಂಟೆ

ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವುದರೊಂದಿಗೆ, ಹಲವು ದಿನಗಳಿಂದ ಕಾಣಬರುತ್ತಿದ್ದ ರಾಜಕೀಯ ಮೇಲಾಟಗಳಿಗೆ, ಕಾಲೆಳೆತಗಳಿಗೆ ನಿರ್ಣಾಯಕ ಅಂತ್ಯ ಸಿಕ್ಕಂತಾಗಿದೆ. ಕದಡಿದ ನೀರು ನಿಧಾನಕ್ಕೆ ತಿಳಿಯಾಗುತ್ತಿದೆ. ಆದರೆ ಮೇಲ್​ಸ್ತರದಲ್ಲಿ ಶಾಂತತೆ ಕಾಯ್ದುಕೊಂಡಿದ್ದರೂ ಆಳದಲ್ಲಿ ಕ್ಷೋಭೆಯನ್ನು ಒಳಗೊಂಡಿರುವ ಸಮುದ್ರದಂತೆ, ರಾಜಕೀಯ ಹಗ್ಗಜಗ್ಗಾಟಗಳು ಗುಪ್ತಗಾಮಿನಿಯಾಗೇ ಇರುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಚುನಾವಣಾ ಪ್ರಚಾರದ ವೇಳೆಯಲ್ಲಿ ನೀಡಲಾಗಿದ್ದ ‘ರೈತರ ಸಾಲಮನ್ನಾ’ ಭರವಸೆಯೇ ಸರ್ಕಾರಕ್ಕೆ ಆ ನಿಟ್ಟಿನಲ್ಲಿ ‘ಮೊದಲ ಕುಣಿಕೆ’ಯಾಗುವ ಸಂಭವವಿದ್ದು, ಉಗುಳಲೂ ಆಗದ ನುಂಗಲೂ ಆಗದ ಬಿಸಿತುಪ್ಪವಾಗಿ ಅದು ಪರಿಣಮಿಸಿದೆ ಎನ್ನಲಡ್ಡಿಯಿಲ್ಲ. ಈ ಭರವಸೆ ಈಡೇರದಿದ್ದಲ್ಲಿ ಬರುವ ಸೋಮವಾರ ಕರ್ನಾಟಕ ಬಂದ್ ಹಮ್ಮಿಕೊಳ್ಳುವುದಾಗಿ ವಿಪಕ್ಷ ನಾಯಕ ಯಡಿಯೂರಪ್ಪನವರು ಈಗಾಗಲೇ ಅಬ್ಬರಿಸಿದ್ದಾರೆ. ಆದರೆ, ಮುಖ್ಯಮಂತ್ರಿಯವರದ್ದು ಅಕ್ಷರಶಃ ‘ಅತ್ತ ದರಿ, ಇತ್ತ ಪುಲಿ’ ಶೈಲಿಯ ಉಭಯಸಂಕಟ. ಕಾರಣ, ಭರವಸೆ ಈಡೇರಿಕೆಗೆ ಮುಂದಾದಲ್ಲಿ ಅದು ಬೊಕ್ಕಸಕ್ಕೆ ಅಗಾಧ ಹೊರೆಯಾಗಿ ಪರಿಣಮಿಸುವ ಸಂಕಷ್ಟವಂತೂ ಇದ್ದೇ ಇದೆ. ಒಂದೊಮ್ಮೆ ಭಂಡಧೈರ್ಯ ಮಾಡಿ ಸಾಲಮನ್ನಾ ಮಾಡೋಣವೆಂದರೆ, ಸರ್ಕಾರದಲ್ಲಿನ ಕಾಂಗ್ರೆಸ್ ಸಹಭಾಗಿಗಳ ಸಮ್ಮತಿಯಿಲ್ಲದೆ ನೆರವೇರುವ ಬಾಬತ್ತಲ್ಲ ಅದು. ಒಟ್ಟಿನಲ್ಲಿ, ಸಮ್ಮಿಶ್ರ ಸರ್ಕಾರವೊಂದಕ್ಕೆ ಅನಿವಾರ್ಯವಾಗಿ ಎದುರಾಗಬಹುದಾದ ಹತ್ತು ಹಲವು ಸವಾಲುಗಳ ಯಾದಿಯಲ್ಲಿ ಮೊದಲನೆಯದು ಮುಂಚೂಣಿಗೆ ಬಂದಿದೆ. ಈ ಕುಣಿಕೆ ಹಗ್ಗವನ್ನು ಮುಖ್ಯಮಂತ್ರಿ ಸಡಿಲಿಸಲು ಶಕ್ಯರಾಗುತ್ತಾರೋ, ಕೊರಳೊಡ್ಡುತ್ತಾರೋ ಎಂಬುದು ಅವರ ಸಾಮರ್ಥ್ಯಕ್ಕೆ ಬಿಟ್ಟ ವಿಷಯ. ಒಟ್ಟಿನಲ್ಲಿ ರಾಜಕೀಯ ಪಡಸಾಲೆಗಳಲ್ಲಿ, ಊರೂರ ಅರಳೀಕಟ್ಟೆಗಳಲ್ಲಿ ಇದು ಕುತೂಹಲ ಹುಟ್ಟುಹಾಕಿರುವುದಂತೂ ಖರೆ.

ಮತ್ತೊಂದೆಡೆ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಇಂದಿಗೆ 4 ವರ್ಷಗಳನ್ನು ಯಶಸ್ವಿಯಾಗಿ ಮುಗಿಸುತ್ತಿದೆ. ಈ ಸಂದರ್ಭದಲ್ಲಿ, 2019ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿ ಕೈಗೊಂಡ ಸಮೀಕ್ಷೆಯಲ್ಲಿ, ಎನ್​ಡಿಎ ಒಕ್ಕೂಟಕ್ಕೆ ಸರಳ ಬಹುಮತ ಬರುವ ಮುನ್ನಂದಾಜು ಹೊಮ್ಮಿದೆ. ಆದರೆ, ಮುಖ್ಯಮಂತ್ರಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜಮೆಯಾಗಿದ್ದ ಎಲ್ಲ ವಿಪಕ್ಷಗಳ ದಂಡು ಈ ಮುನ್ನಂದಾಜಿಗೆ ಪೆಟ್ಟುಕೊಡಬಲ್ಲಂಥ ಸಜ್ಜಿಕೆ ರೂಪಿಸುವ ಹವಣಿಕೆಯಲ್ಲಿರುವುದನ್ನು ತೋರಿಸಿಕೊಟ್ಟಿದೆ. ಒಂದೊಮ್ಮೆ ಈ ‘ಮಹಾಮೈತ್ರಿಕೂಟ’ ಗಟ್ಟಿಹೆಜ್ಜೆಗಳನ್ನು ಇರಿಸಿದ್ದೇ ಆದಲ್ಲಿ, ಎನ್​ಡಿಎ ಒಕ್ಕೂಟದ ತಳಹದಿ ಕೊಂಚ ಸಡಿಲಗೊಂಡರೂ ಅಚ್ಚರಿಯಿಲ್ಲ. ಕಾರಣ, ಉತ್ತರಪ್ರದೇಶದ ‘ಅತಿರಥ-ಮಹಾರಥ’ ಹೆಗ್ಗಳಿಕೆಯ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ನಡುವೆಯೇ ಏರ್ಪಟ್ಟ ಪೈಪೋಟಿ ಹಿಂದೆ ಬಿಜೆಪಿಗೆ ವರದಾನವಾಗಿ ಪರಿಣಮಿಸಿದ್ದು ಗೊತ್ತಿರುವಂಥದ್ದೇ. ಆದರೆ ಮೋದಿಯವರನ್ನು/ಎನ್​ಡಿಎ ಒಕ್ಕೂಟವನ್ನು ಹಣಿಯುವುದೇ ಏಕಮಾತ್ರ ಕಾರ್ಯಸೂಚಿಯಾಗಿದ್ದಲ್ಲಿ ಎಸ್​ಪಿ ಮತ್ತು ಬಿಎಸ್​ಪಿಗಳು ಪರಸ್ಪರ ಹಸ್ತಲಾಘವಕ್ಕೂ ಹಿಂಜರಿಯುವುದಿಲ್ಲ. ಹೀಗಾದಲ್ಲಿ ಉತ್ತರಪ್ರದೇಶದಿಂದ ಬಿಜೆಪಿಗೆ ದಕ್ಕುವ ಸಂಸದ ಸ್ಥಾನಗಳ ಸಿಂಹಪಾಲಿಗೆ ಸಂಚಕಾರ ಒದಗುವುದು ನಿಕ್ಕಿ. ಹೀಗೆ, ಕರ್ನಾಟಕದಲ್ಲಿ ಕುಮಾರಸ್ವಾಮಿಯವರಿಗೆ ಹಾಗೂ ರಾಷ್ಟ್ರಮಟ್ಟದಲ್ಲಿ ಮೋದಿಯವರಿಗೆ ಒಂದಷ್ಟು ವಿಶಿಷ್ಟ ಸವಾಲುಗಳು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿವೆ. ಇವನ್ನು ನಿವಾರಿಸಿಕೊಳ್ಳುವುದರ ಜತೆಗೆ, ಜನಕಲ್ಯಾಣದ ಕಾರ್ಯಕ್ರಮಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಅವರ ಹೆಗಲೇರಿದೆ ಎನ್ನಬೇಕು. ಆದರೆ, ಈ ವಿಷಯದಲ್ಲಿ ರಾಜಕೀಯ ತಂತ್ರ-ಪ್ರತಿತಂತ್ರಗಳೇನೇ ಹೊಮ್ಮಿದರೂ ಪ್ರಜಾತಂತ್ರದ ಸ್ವಾಸ್ಥ್ಯಕ್ಕೆ ಧಕ್ಕೆಯಾಗದಿರಲಿ ಎಂಬುದು ಪ್ರಜ್ಞಾವಂತರ ಆಶಯ ಮತ್ತು ನಿರೀಕ್ಷೆ.

Leave a Reply

Your email address will not be published. Required fields are marked *