More

    ಸಂಪಾದಕೀಯ: ಏರ್ ಇಂಡಿಯಾ ಬಿಕ್ಕಟ್ಟು 

    ಕಳೆದ ಹಲವು ವರ್ಷಗಳಿಂದ ಏರ್ ಇಂಡಿಯಾ ಸಂಸ್ಥೆ ನಷ್ಟದಲ್ಲೇ ನಡೆಯುತ್ತಿದೆ ಎಂಬುದು ಗೊತ್ತಿರುವಂಥದ್ದೇ. ಅಲ್ಲದೆ ಸಾಲದ ತೀವ್ರ ಹೊರೆ ಬೇರೆ. ಈ ಸಂಸ್ಥೆಯನ್ನು ನಷ್ಟದ ಕೂಪದಿಂದ ಆಚೆ ತರಲು ಪ್ರಯತ್ನಗಳು ನಡೆದೇ ಇಲ್ಲ ಎಂದೇನೂ ಇಲ್ಲ.

    ಈಗಿನ ಸರ್ಕಾರ ಮತ್ತು ಹಿಂದಿನ ಸರ್ಕಾರಗಳು ಕೂಡ ಕಾಲಕಾಲಕ್ಕೆ ಪುನಶ್ಚೇತನಾ ಪ್ಯಾಕೇಜ್​ಗಳನ್ನು ನೀಡುತ್ತ ಬಂದಿವೆ. ಆದರೂ, ಹೇಳಿಕೊಳ್ಳುವಂಥ ಸುಧಾರಣೆಯೇನೂ ಆಗಲಿಲ್ಲ. 20,956 ನೌಕರರನ್ನು ಹೊಂದಿರುವ ಏರ್ ಇಂಡಿಯಾ -ಠಿ; 58,262 ಕೋಟಿ ಸಾಲದ ಹೊರೆಯನ್ನು ಹೊಂದಿದೆ. ಹಲವು ದಶಕಗಳ ಕಾಲ ಲಾಭದಲ್ಲೇ ಇದ್ದು, ‘ಮಹಾರಾಜ’ನಾಗಿ ಮೆರೆದ ಏರ್ ಇಂಡಿಯಾ ಖಾಸಗಿಯವರ ತೀವ್ರ ಪೈಪೋಟಿಯಿಂದ ಸಾಲದ ಸುಳಿಗೆ ಸಿಲುಕಿತು. ಆ ಬಳಿಕ ಅದು ಚೇತರಿಕೆ ಕಾಣಲೇ ಇಲ್ಲ.

    ಹಿಂದೊಮ್ಮೆ ಏರ್ ಇಂಡಿಯಾ ಮಾರಾಟಕ್ಕೆ ನಡೆದ ಪ್ರಯತ್ನ ವಿಫಲವಾದ ಬಳಿಕ ಮತ್ತೊಮ್ಮೆ ಕೇಂದ್ರ ಸರ್ಕಾರ ಇಂಥ ಪ್ರಯತ್ನಕ್ಕೆ ಕೈಹಾಕಿರುವುದು ಕುತೂಹಲ ಮೂಡಿಸಿದೆ. ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗೀಕರಿಸುವ ನಿರ್ಧಾರಕ್ಕೆ ಬರಲಾಗಿದ್ದು, ಶೇಕಡ 100 ಪಾಲನ್ನು ಮಾರಾಟ ಮಾಡುವ ಯೋಜನೆಯನ್ನು ಸೋಮವಾರ ಪ್ರಕಟಿಸಿದೆ. ಖಾಸಗೀಕರಣಕ್ಕೆ ಮುಂದಾಗಿದ್ದರೂ, ಅದರ ಸಂಪೂರ್ಣ ನಿಯಂತ್ರಣ ಭಾರತೀಯರ ಕೈಯಲ್ಲೇ ಇರಬೇಕು ಎಂಬುದನ್ನು ಪ್ರಾಥಮಿಕ ಷರತ್ತುಗಳಲ್ಲಿ ಸ್ಪಷ್ಟಪಡಿಸಿದೆ.

    ಇದು ಏರ್ ಇಂಡಿಯಾದ ಕಥೆ ಮಾತ್ರವಲ್ಲ. ಸರ್ಕಾರಿಸ್ವಾಮ್ಯದ ಹಲವು ಸಂಸ್ಥೆಗಳು ಭಾರಿ ನಷ್ಟದಲ್ಲಿವೆ. ಎಷ್ಟು ಸಮಯ ಅಂತ ಖಜಾನೆಯಿಂದ ದುಡ್ಡು ತೆಗೆದು, ಈ ಕಂಪನಿಗಳಿಗೆ ಸುರಿಯಲು ಸಾಧ್ಯ? ಹಾಗಾಗಿಯೇ, ಸರ್ಕಾರ ಹಲವು ಕಂಪನಿಗಳಿಂದ ಬಂಡವಾಳ ವಾಪಸಾತಿಗೆ ನಿರ್ಧಾರ ಕೈಗೊಂಡಿರುವುದು ಸೂಕ್ತವಾಗಿಯೇ ಇದೆ.

    ಏರ್ ಇಂಡಿಯಾಕ್ಕೆ ಖರೀದಿದಾರರೇ ಬರುತ್ತಿಲ್ಲ. ಸಾಲದ ಮೇಲಿನ ಬಡ್ಡಿ ಹೊರೆಯೂ ಹೆಚ್ಚುತ್ತಿದೆ. ಅಲ್ಲದೆ, ಜಾಗತಿಕವಾಗಿಯೂ ವಿಮಾನಯಾನ ರಂಗ ನಷ್ಟದಲ್ಲೇ ನಡೆಯುತ್ತಿದೆ. ಖಾಸಗಿ ಕಂಪನಿಗಳು ಕೂಡ ಭಾರಿ ಹೊಡೆತ ಅನುಭವಿಸಿವೆ. ಕಿಂಗ್ ಫಿಷರ್ ಸಂಸ್ಥೆಯಂತೂ ಬಾಗಿಲು ಹಾಕಿದೆ. ಇನ್ನು ಅನೇಕ ಕಂಪನಿಗಳು ವಿಮಾನ ಹಾರಾಟಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ ಎಂಬುದು ಗಮನಾರ್ಹ.

    ವಾಸ್ತವ ಹೀಗಿರುವಾಗ ಅಂತಿಮ ನಿರ್ಧಾರಕ್ಕೆ ಬರುವುದು ಸರ್ಕಾರದ ಪಾಲಿಗೆ ಅನಿವಾರ್ಯ ಕ್ರಮವಾಗಿತ್ತು. ಕೆಲವರು ಪ್ರಾಯೋಗಿಕ ಅನಿವಾರ್ಯತೆ ಮತ್ತು ಆರ್ಥಿಕ ಸ್ಥಿತಿಯನ್ನು ಗಮನಿಸದೆ ಖಾಸಗೀಕರಣವನ್ನು ವಿರೋಧಿಸುತ್ತಿದ್ದಾರೆ. ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಹೇಳಿದ್ದಾರೆ. ಏರ್ ಇಂಡಿಯಾ ಖರೀದಿಸಲು ಬಿಡ್ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದೆ.

    ಈ ಬಾರಿ ಸಂಪೂರ್ಣ ಖಾಸಗೀಕರಣಕ್ಕೆ ಮುಂದಾಗಿರುವುದರಿಂದ ಖರೀದಿದಾರರು ಮುಂದೆ ಬರುವ ಸಾಧ್ಯತೆಯೂ ಇದೆ. 121 ವಿಮಾನಗಳನ್ನು ಏರ್ ಇಂಡಿಯಾ ಹೊಂದಿದ್ದು, ಈ ಪೈಕಿ 65 ವಿಮಾನ ಮಾತ್ರ ಸ್ವಂತದ್ದು. ಬಿಡ್​ನ ಪ್ರಕ್ರಿಯೆಗಳು ಈಗಷ್ಟೇ ಆರಂಭಗೊಂಡಿವೆ. ಭವ್ಯ ಇತಿಹಾಸ ಹೊಂದಿ ಪ್ರಸಕ್ತ ನಷ್ಟಕ್ಕೆ ಸಿಲುಕಿರುವ ಏರ್ ಇಂಡಿಯಾದ ಮುಂದಿನ ದಿನಗಳು ಹೇಗಿರಲಿವೆ ಎಂಬುದಂತೂ ಕುತೂಹಲಕರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts