More

    ಎಚ್ಚರ ಅಗತ್ಯ; ಕಿಡ್ನಿ ಮಾರಾಟ ಹೆಸರಲ್ಲಿ ವಂಚನೆ ಜಾಲ

    ಜನರ ಅನಿವಾರ್ಯ ಅಗತ್ಯಗಳನ್ನು ಮತ್ತು ಮಾಹಿತಿ ಕೊರತೆಯನ್ನೇ ಬಂಡವಾಳ ಮಾಡಿಕೊಂಡು, ವಂಚನೆ ಎಸಗುವ ಹಲವು ಬಗೆಯ ಜಾಲಗಳು ಅಸ್ತಿತ್ವದಲ್ಲಿರುವುದು ಆಗೀಗ ಬಯಲಾಗುತ್ತಲೇ ಇರುತ್ತದೆ. ಜನರಿಗೆ ತಾವು ಮೋಸಹೋಗಿರುವುದು ಅರಿವಿಗೆ ಬರುವುದರೊಳಗೆ ವಂಚಕರು ಎಲ್ಲೋ ತಲೆಮರೆಸಿಕೊಂಡಿರುತ್ತಾರೆ ಅಥವಾ ಸಂಪರ್ಕಕ್ಕೇ ಸಿಗುವುದಿಲ್ಲ. ವೃಥಾ ಯಾಕೆ ಜಂಜಾಟ ಎಂದು ಬಹುತೇಕರು ಇಂಥ ಪ್ರಕರಣಗಳಲ್ಲಿ ಪೊಲೀಸ್ ದೂರು ನೀಡುವ ಗೋಜಿಗೇ ಹೋಗುವುದಿಲ್ಲ. ಹೀಗಾಗಿ ದಾಖಲಾಗುವ ಪ್ರಕರಣಗಳು ಬಹಳ ಕಡಿಮೆ. ಈಗಂತೂ ಯಾವುದೋ ದೂರದ ದೇಶದಲ್ಲಿ ಕುಳಿತುಕೊಂಡೇ ಆನ್​ಲೈನ್ ಮೂಲಕ ಅಕ್ರಮ ನಡೆಸಬಹುದಾದ್ದರಿಂದ, ಜನರ ತಲೆಬೇನೆ ಇನ್ನಷ್ಟು ಹೆಚ್ಚಿದೆ. ಕಿಡ್ನಿ ಖರೀದಿ ಮತ್ತು ಮಾರಾಟದ ಹೆಸರಿನಲ್ಲಿ ಲಕ್ಷಾಂತರ ರೂ ಪಡೆದು ವಂಚನೆ ಎಸಗಿದ ತಂಡವನ್ನು ಬೆಂಗಳೂರು ಪೊಲೀಸರು ಬಂಧಿಸಿರುವುದು ಈ ವಂಚನಾಸರಣಿಯ ಇನ್ನೊಂದು ಉದಾಹರಣೆಯಷ್ಟೆ.

    ನೈಜೀರಿಯಾದ ಮೂವರು, 10ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್​ಸೈಟ್ ಸೃಷ್ಟಿಸಿ ಕಿಡ್ನಿ ದಾನ ಹಾಗೂ ಮಾರಾಟ ಮಾಡುವವರಿಗೆ 4 ಕೋಟಿ ರೂ. ನೀಡುವುದಾಗಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ‘ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲು ದಾನಿಗಳ ಅವಶ್ಯಕತೆಯಿದ್ದು, ಕಿಡ್ನಿದಾನ, ಮಾರಾಟ ಮಾಡುವವರಿಗೆ ಮುಂಗಡವಾಗಿ 2 ಕೋಟಿ ರೂ. ಹಾಗೂ ಕಿಡ್ನಿ ಕಸಿ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ 2 ಕೋಟಿ ರೂ. ನೀಡುತ್ತೇವೆ’ ಎಂದು ಇವರು ವೆಬ್​ಸೈಟ್​ನಲ್ಲಿ ಜಾಹೀರಾತು ಹಾಕುತ್ತಿದ್ದರು. ಈ ವೆಬ್​ಸೈಟ್​ಗಳು ನಕಲಿ ಎಂದು ಅರಿವಿಗೆ ಬಾರದೆ, ಹೆಸರಾಂತ ಆಸ್ಪತ್ರೆಗಳದ್ದಿರಬಹುದು ಎಂದು ನಂಬಿ ಹಲವರು ಸಂರ್ಪಸಿದ್ದರು. ಇವರಲ್ಲಿ ಅನೇಕರಿಂದ ಮುಂಗಡವಾಗಿ ನೋಂದಣಿ ಶುಲ್ಕ, ಮೆಡಿಕಲ್ ಶುಲ್ಕ, ವೈದ್ಯರ ಶುಲ್ಕ ಸೇರಿ ಸಾವಿರಾರು ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ನಂತರ ವಂಚಕರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇಂಥ ಜಾಹೀರಾತು ನೋಡಿದ ಒಬ್ಬರು ನೇರವಾಗಿ ಆಸ್ಪತ್ರೆಯನ್ನೇ ಸಂರ್ಪಸಿದ್ದರಿಂದ, ಈ ಜಾಲ ಬಯಲಿಗೆ ಬರುವುದಕ್ಕೆ ಕಾರಣವಾಯಿತು. ಹಾಗೆನೋಡಿದರೆ ನಮ್ಮಲ್ಲಿ ಅಂಗದಾನದ ವಿಷಯದಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವೆ ಭಾರಿ ಅಂತರವಿದೆ. ಇದಕ್ಕೆ ಕಾರಣಗಳು ಹಲವು. ಇದನ್ನೇ ಬಂಡವಾಳವಾಗಿಸಿಕೊಂಡು ವಂಚಕರು ಅಮಾಯಕರಿಗೆ ಬಲೆ ಬೀಸಿ ಹಣ ಎಗರಿಸುತ್ತಾರೆ.

    ಅಂಗಾಂಗ ದಾನಕ್ಕೆ ಸಂಬಂಧಿಸಿ ನಿರ್ದಿಷ್ಟ ನಿಯಮ ಹಾಗೂ ಕಾನೂನುಗಳಿವೆ. ಕಿಡ್ನಿ ವಿಷಯದಲ್ಲೂ ಇದು ಅನ್ವಯ. ಆದರೆ ಕಸಿ ಅಗತ್ಯವಿರುವವರಿಗೆ ಕಿಡ್ನಿ ಲಭ್ಯತೆ ಕಡಿಮೆಯಿರುವುದು ಹಾಗೂ ಬಳಸುದಾರಿ ಹಿಡಿದರೆ ಕಿಡ್ನಿಯನ್ನು ಪಡೆದುಕೊಳ್ಳಬಹುದು ಎಂಬ ಆಸೆಯಿಂದ ಕೆಲವರು ಇಂಥ ಮೋಸಗಾರರ ಬಲೆಗೆ ಬೀಳುತ್ತಾರೆ. ಯಾವುದೇ ಅಂಗದ ಅಗತ್ಯ ಇರುವವರು ಈ ವಿಷಯಕ್ಕೆ ಸಂಬಂಧಿಸಿದ ನಿಯಮ ಹಾಗೂ ಕಾನೂನನ್ನು ತಿಳಿದುಕೊಂಡು ಮುಂದಡಿ ಇಡುವುದು ಲೇಸು. ಇಲ್ಲವಾದಲ್ಲಿ ಮುಂದೆಂದಾದರೂ ಇದು ಪ್ರಕರಣವಾಗಿ ಮಾರ್ಪಟ್ಟಲ್ಲಿ ಆಗ ತೊಂದರೆ ಎದುರಾಗುವ ಸಂಭವ ಇರುತ್ತದೆ. ಯಾವುದೇ ಮಾಹಿತಿ ಅಧಿಕೃತವೋ ಅಲ್ಲವೋ ಎಂದು ತಿಳಿದುಕೊಳ್ಳಲು ಈಗ ಹಲವು ದಾರಿಗಳಂತೂ ಇರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts