More

    ಜಾನುವಾರು ಸಾಕಣೆ ಸವಾಲು: ದನಕರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ

    ರಾಜ್ಯದಲ್ಲಿ ಜಾನುವಾರು ಸಾಕಣೆ ಸಂಕಷ್ಟಕರವಾಗಿ ಪರಿಣಮಿಸಿದೆ. ಮಾರಣಾಂತಿಕ ಹಾಗೂ ಸಾಂಕ್ರಾಮಿಕ ಚರ್ಮ ಗಂಟು ರೋಗವು ರಾಜ್ಯದಲ್ಲಿ ವ್ಯಾಪಿಸಿರುವುದರಿಂದ ದನ ಕರುಗಳು ಅಪಾಯಕ್ಕೆ ಸಿಲುಕಿವೆ. ಈ ಮಾರಕ ರೋಗದ ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯೂ ಇದೇ ವೇಳೆ ಕಾಣಿಸಿಕೊಂಡಿದೆ. ಹೀಗಾಗಿ, ರೈತರು, ಜಾನುವಾರು ಸಾಕಣೆದಾರರು ಹೈರಾಣಾಗುವಂತಾಗಿದೆ.

    ರಾಜ್ಯದಲ್ಲಿ 1.15 ಕೋಟಿ ಜಾನುವಾರುಗಳಿವೆ ಎಂದು ಅಂದಾಜಿಸಲಾಗಿದೆ. ಹಾಲು ಉತ್ಪಾದನೆ ಹಾಗೂ ಕೃಷಿ ಕಾರ್ಯಕ್ಕೆ ಸಾಮಾನ್ಯವಾಗಿ ಈ ಜಾನುವಾರುಗಳನ್ನು ಬಳಸಲಾಗುತ್ತದೆ. ಈ ಬಾರಿ ರಾಜ್ಯದಾದ್ಯಂತ ಅನಾವೃಷ್ಟಿ ಕಾಡುತ್ತಿದೆ. ಮುಂಗಾರು ಹಾಗೂ ಹಿಂಗಾರು ಬೆಳೆಗಳು ಕೈಕೊಟ್ಟಿರುವುದು ಕೃಷಿಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕಾರ್ಯಕ್ಕೆ ಬಳಸಲಾಗುವ ಎತ್ತುಗಳ ನಿರ್ವಹಣೆಯೇ ದುಸ್ತರವಾಗಿದೆ. ಇದರ ನಡುವೆಯೇ ಮೇವಿನ ಕೊರತೆ, ರೋಗ ಬಾಧೆ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೃಷಿಯ ಜತೆಗೆ ಉಪಕಸುಬಾಗಿ ಆಕಳು, ಎಮ್ಮೆಗಳನ್ನು ಸಾಕಿಕೊಂಡ ಕೃಷಿಕರು ಹಾಗೂ ಹೈನುಗಾರಿಕೆಯನ್ನೇ ಪ್ರಮುಖ ಕಸುಬಾಗಿ ಮಾಡಿಕೊಂಡವರು ಈ ಸಮಸ್ಯೆಗಳಿಂದ ಗೋಳಾಡುವಂತಾಗಿದೆ. ರೋಗಗ್ರಸ್ಥ ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆ ಕೂಡ ಕಡಿಮೆಯಾಗಿ ಆದಾಯಕ್ಕೆ ಹೊಡೆತ ಬೀಳುತ್ತಿದೆ.

    2020ರಿಂದ ಈ ರೋಗಕ್ಕೆ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ದನಕರುಗಳಿಗೆ ಈ ರೋಗ ವ್ಯಾಪಿಸಿದ್ದು, ಚಿಕಿತ್ಸೆ ನೀಡುವಲ್ಲಿಯೂ ಸಾಕಷ್ಟು ತೊಂದರೆಗಳನ್ನು ಸಾಕಣೆದಾರರು ಎದುರಿಸುತ್ತಿದ್ದಾರೆ. ಜಾನುವಾರುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಕಷ್ಟಕರ ಆಗುವುದರಿಂದ ಅವುಗಳಿದ್ದಲ್ಲಿಯೇ ಹೋಗಿ ಪಶುವೈದ್ಯರು ಚಿಕಿತ್ಸೆ ನೀಡಬೇಕು ಹಾಗೂ ರೋಗ ನಿರೋಧಕ ಲಸಿಕೆ ನೀಡಬೇಕು ಎಂಬ ಆಗ್ರಹವು ಈ ಮೊದಲಿನಿಂದಲೇ ಕೇಳಿಬಂದಿದೆ. ಚರ್ಮ ಗಂಟು ರೋಗವು ಸಾಂಕ್ರಾಮಿಕ ರೋಗವಾಗಿರುವುದರಿಂದ ನಿಯಂತ್ರಣ ಕಷ್ಟಕರವಾಗಿ ಪರಿಣಮಿಸಿದೆ. ರೋಗಗ್ರಸ್ಥ ಜಾನುವಾರುಗಳಿಂದ ನೊಣ, ಸೊಳ್ಳೆ, ಉಣ್ಣಿಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಈ ರೋಗ ಹರಡುತ್ತಿದೆ. ರೋಗಗ್ರಸ್ಥ ದನ ಕರುಗಳಲ್ಲಿ ಜ್ವರ, ಶರೀರದಲ್ಲಿ ಸಿಡುಬಿನಂಥ ಗುಳ್ಳೆಗಳು, ಗಂತಿಗಳು ಕಾಣಿಸುತ್ತವೆ. ಚರ್ಮ ಗಂಟು ಸೋಂಕಿಗೆ ಲಸಿಕೆ ಕಂಡುಹಿಡಿಯಲಾಗಿಲ್ಲ. ಆಡು, ಕುರಿಗಳಿಗೆ ನೀಡುವ ಗೋಟ್ ಪಾಕ್ಸ್ ವಾಕ್ಸಿನ್ ಅನ್ನೇ ದನ ಕರುಗಳಿಗೆ ನೀಡಲಾಗುತ್ತದೆ. ಕೋವಿಡ್ ವೈರಸ್ ರೀತಿಯಲ್ಲಿಯೇ ಈ ರೋಗದ ವೈರಸ್ ಕೂಡ ರೂಪಾಂತರಗೊಳ್ಳುತ್ತಿದೆ ಎನ್ನಲಾಗಿದೆ. ರಾಜ್ಯ ಪಶು ಸಂಗೋಪನೆ ಇಲಾಖೆಯ ಮೂಲಕ ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ, ವ್ಯಾಕ್ಸಿನ್ ನೀಡಿದ ಬಳಿಕವೂ ಸೋಂಕು ಕಾಣಿಸುವ ಸಾಧ್ಯತೆ ಇದ್ದೇ ಇರುತ್ತದೆ. ಸಾಕಣೆದಾರರಲ್ಲಿ ಜಾಗೃತಿ ಮೂಡಿಸುವುದೇ ಈ ರೋಗ ನಿಯಂತ್ರಣಕ್ಕಿರುವ ಪ್ರಮುಖ ಕ್ರಮ ಎನ್ನಬಹುದಾಗಿದೆ. ರೋಗ ಲಕ್ಷಣ ಬಂದ ತಕ್ಷಣ ಪಶು ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಬೇಕು. ಸೊಳ್ಳೆಗಳ ನಿಯಂತ್ರಣ, ವ್ಯಾಕ್ಸಿನ್ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಬೇಕಿದೆ.

    ಕೇಂದ್ರ ಸರ್ಕಾರದಿಂದ ಹೊಸ ಪ್ರಶಸ್ತಿ ಘೋಷಣೆ; ರಾಷ್ಟ್ರೀಯ ಬಾಹ್ಯಾಕಾಶ ದಿನದಂದೇ ಪ್ರದಾನ: ಇಲ್ಲಿದೆ ವಿವರ..

    ಕಾವೇರಿ ಹೋರಾಟದಲ್ಲೂ ಮೈತ್ರಿ: ಮಂಡ್ಯ ಬಂದ್​ಗೆ ಜೆಡಿಎಸ್​-ಬಿಜೆಪಿ ನಾಯಕರ ಸಾಥ್!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts