More

  ಭಾರತಕ್ಕೆ ಬೆಂಬಲ: ಚೀನಾದ ಆಕ್ರಮಣಕಾರಿ ಧೋರಣೆಗೆ ಅಮೆರಿಕ ಟೀಕೆ

  ಅಮೆರಿಕ ಸಂಸತ್ 740 ಶತಕೋಟಿ ಡಾಲರ್ ಮೊತ್ತದ ರಕ್ಷಣಾ ನೀತಿ ಮಸೂದೆಗೆ ಅನುಮೋದನೆ ನೀಡಿದೆ. ಇದರಲ್ಲಿ ಅನೇಕ ಮಹತ್ವದ ಅಂಶಗಳು ಅಡಕವಾಗಿದ್ದು, ಮುಖ್ಯವಾಗಿ ಪೂರ್ವ ಲಡಾಖ್​ನಲ್ಲಿ ಭಾರತದ ವಿರುದ್ಧ ಚೀನಾದ ಆಕ್ರಮಕ ಧೋರಣೆಯನ್ನು ಟೀಕಿಸಲಾಗಿದೆ. ಅಮೆರಿಕ ಶಾಸನಸಭೆ ಈ ಮಹತ್ವದ ನಿಲುವು ತಳೆಯುವಲ್ಲಿ ಭಾರತೀಯ ಅಮೆರಿಕನ್ ಪ್ರತಿನಿಧಿ ರಾಜಾ ಕೃಷ್ಣಮೂರ್ತಿ ಅವರ ಪಾತ್ರ ಪ್ರಮುಖವಾದುದು ಎಂಬುದು ಗಮನಾರ್ಹ. ಲಡಾಖ್​ನಲ್ಲಿ ಚೀನಾ ಆಕ್ರಮಕ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸುವ ವಿಷಯವನ್ನು ಅವರು ನಿರ್ಣಯದಲ್ಲಿ ಸೇರಿಸಿದ್ದರು. ಪ್ರಭಾವಶಾಲಿಯಾದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್​ಡಿಎಎ)ಗೆ ಅಮೆರಿಕ ಕಾಂಗ್ರೆಸ್​ನ ಹೌಸ್ ಆಫ್ ರೆಪ್ರಸಂಟಿಟಿವ್ಸ್ ಮತ್ತು ಸೆನೆಟ್ ಒಪ್ಪಿಗೆ ನೀಡಿದ್ದು, ಅದರಲ್ಲಿ ಈ ಅಂಶ ಸೇರಿದೆ. ಇಂಡೊ-ಪೆಸಿಫಿಕ್ ವಲಯ ಮತ್ತು ಅದರಾಚೆಗೂ ತನ್ನ ಸಹಯೋಗಿ ದೇಶಗಳ ಬಗ್ಗೆ ಅಮೆರಿಕ ಹೊಂದಿರುವ ನಿಲುವನ್ನು ಇದು ಪ್ರತಿಫಲಿಸುತ್ತದೆ ಎಂದು ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞರು ವಿಶ್ಲೇಷಿಸಿದ್ದಾರೆ. ಇದರಿಂದಾಗಿ ಗಡಿ ವಿಷಯದಲ್ಲಿ ಚೀನಾ ಜತೆ ಭಾರತ ವ್ಯವಹರಿಸುತ್ತಿರುವ ರೀತಿಗೆ, ಅಮೆರಿಕದಲ್ಲಿ ಹೊಸ ಆಡಳಿತ ಅಧಿಕಾರ ವಗಿಸಿಕೊಳ್ಳುವ ಹೊತ್ತಿನಲ್ಲೇ ಮತ್ತೊಮ್ಮೆ ಪ್ರಬಲ ಬೆಂಬಲ ದೊರೆತಂತಾಗಿದೆ. ‘ಹಿಂಸಾತ್ಮಕ ಆಕ್ರಮಣವು ಯಾವುದಕ್ಕೂ ಉತ್ತರವಲ್ಲ. ವಿಶೇಷವಾಗಿ, ಭಾರತ ಮತ್ತು ಚೀನಾವನ್ನು ಪ್ರತ್ಯೇಕಿಸುವ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ)ಗೆ ಇದು ಅನ್ವಯಿಸುತ್ತದೆ’ ಎಂದು ರಾಜಾ ಕೃಷ್ಣಮೂರ್ತಿ ತಾವು ಮಂಡಿಸಿದ ತಿದ್ದುಪಡಿ ಅಂಶದಲ್ಲಿ ಉಲ್ಲೇಖಿಸಿದ್ದಾರೆ. ‘ಈ ನಿರ್ಣಯವು ಭಾರತದ ಗಡಿಯಲ್ಲಿ ಚೀನಾ ನಡೆಸಿರುವ ಆಕ್ರಮಕ ಧೋರಣೆ ಮತ್ತು ಅದರ ಪ್ರಾದೇಶಿಕ ಪ್ರತಿಪಾದನೆಗಳ ಬಗ್ಗೆ ಕಾಂಗ್ರೆಸ್​ನ ಭಾವನೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಎನ್​ಡಿಎಎ ಹೇಳಿದೆ. ಗಡಿಯಲ್ಲಿ ಸೇನಾ ವಾಪಸಾತಿ ಮತ್ತು ಶಾಂತಿ ಪುನರ್​ಸ್ಥಾಪನೆ ನಿಟ್ಟಿನಲ್ಲಿ ಚೀನಾವು ಭಾರತದ ಜತೆ ಮಾತುಕತೆ ನಡೆಸಬೇಕು ಎಂದೂ ಈ ನಿರ್ಣಯದಲ್ಲಿ ಹೇಳಲಾಗಿದೆ. ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ ಹಾಗೂ ಭೂತಾನ್ ಸೇರಿದಂತೆ ವಿವಿಧೆಡೆ ಚೀನಾ ಪ್ರತಿಪಾದಿಸುತ್ತಿರುವ ಆಧಾರರಹಿತ ಪ್ರಾದೇಶಿಕ ಒಡೆತನವು ಅಂತಾರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕೂಡ ಅಮೆರಿಕ ಕಾಂಗ್ರೆಸ್​ನ ನಿರ್ಣಯ ಕಟುಮಾತುಗಳಲ್ಲಿ ಹೇಳಿರುವುದು ಗಮನಾರ್ಹ.

  ಭಾರತಕ್ಕೆ ಬೆಂಬಲ: ಚೀನಾದ ಆಕ್ರಮಣಕಾರಿ ಧೋರಣೆಗೆ ಅಮೆರಿಕ ಟೀಕೆ

  ಕರೊನಾ ವಿಷಯದಲ್ಲಿ ಜಾಗತಿಕ ದೇಶಗಳ ಅಸಮಾಧಾನ ಮತ್ತು ಕೋಪವನ್ನು ಎದುರಿಸುತ್ತಿರುವ ಚೀನಾಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲಿಂದ ಮೇಲೆ ಇಂಥ ರಾಜತಾಂತ್ರಿಕ ಹಿನ್ನಡೆಗಳು ಆಗುತ್ತಿವೆ. ಭಾರತ, ಭೂತಾನ್​ನಂಥ ದೇಶಗಳ ಜತೆ ಗಡಿ ವಿಷಯದಲ್ಲಿ ಮಾತ್ರವಲ್ಲ, ಆ ದೇಶದ ವಿಸ್ತರಣಾವಾದದ ಬಗ್ಗೆಯೂ ಅಮೆರಿಕ ಸಹಿತ ಅನೇಕ ದೇಶಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಚೀನಾದ ಇಂಥ ಧೋರಣೆಯಿಂದ ಜಾಗತಿಕ ಶಾಂತಿಗೆ ಭಂಗ ಬರುತ್ತಿದೆ ಎಂಬುದನ್ನೂ ಆ ದೇಶಗಳು ಸರಿಯಾಗಿಯೇ ಗುರುತಿಸಿವೆ. ಅದರಲ್ಲೂ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಚೀನಾ ಮೇಲೆ ಅಕ್ಷರಶಃ ಮುಗಿಬಿದ್ದಿದ್ದಾರೆ. ಹೀಗಾಗಿ ಚೀನಾವು ತಾನು ಸೂಪರ್ ಪವರ್ ಆಗಬೇಕೆಂಬ ಉದ್ದೇಶದಿಂದ ಅನೈತಿಕ ಕಾರ್ಯತಂತ್ರಗಳನ್ನು ಅನುಸರಿಸುವುದು ಮತ್ತು ತರ್ಕರಹಿತ ವಿಸ್ತರಣಾವಾದವನ್ನು ಕೈಬಿಡದಿದ್ದಲ್ಲಿ ಅದು ಭವಿಷ್ಯದಲ್ಲಿ ಮತ್ತಷ್ಟು ವಿರೋಧ ಎದುರಿಸಬೇಕಾಗಿ ಬರುವುದರಲ್ಲಿ ಸಂದೇಹವಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts