ಕಲಾ ವಿಭಾಗದ ದುರವಸ್ಥೆ

ಈಗಿನ ಸ್ಪರ್ಧಾತ್ಪಕ ಯುಗದಲ್ಲಿ ಬಹುತೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೃತ್ತಿ ಆಧಾರಿತ ಕೋರ್ಸ್​ಗಳ ಕಡೆ ವಾಲುತ್ತಿದ್ದಾರೆ. ವಿಜ್ಞಾನ, ವಾಣಿಜ್ಯ ವಿಭಾಗಗಳ ಕಡೆ ಒಲವು ಹೆಚ್ಚಿದ್ದು, ಪದವಿ ನಂತರ ಇರುವ ಉದ್ಯೋಗಾವಕಾಶಗಳೇ ಇದಕ್ಕೆ ಕಾರಣ. ಆದರೆ, ಈ ಎರಡು ವಿಭಾಗಗಳ ಭರಾಟೆಯಲ್ಲಿ ಕಲಾ ವಿಭಾಗ ಸೊರಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಸ್ಥಿತ್ಯಂತರ ಹಲವು ಬದಲಾವಣೆಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆಯನ್ನು ಸೂಚಿಸುತ್ತಿದೆ. ಶಿಕ್ಷಕರಿರಲಿ, ಪಾಲಕರಿರಲಿ ವಿದ್ಯಾರ್ಥಿಗಳಿಗೆ, ‘ಕಲಾ ವಿಭಾಗಕ್ಕೆ ಹೋಗಿ ಏನು ಮಾಡ್ತೀರಿ’ ಎಂದು ಪ್ರಶ್ನಿಸುತ್ತಾರೆ. ಎಲ್ಲೋ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗಲು ಬಯಸುವ ಕೆಲ ವಿದ್ಯಾರ್ಥಿಗಳು ಮಾತ್ರ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಇಷ್ಟಪಟ್ಟು ಈ ವಿಭಾಗವನ್ನು ಸೇರುವವರ ಸಂಖ್ಯೆ ವಿರಳವಾಗಿದೆ. ಇಲ್ಲಿ ವಿದ್ಯಾರ್ಥಿಗಳದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಕಲಾ ವಿಭಾಗದಲ್ಲಿ ಪದವಿ ಪಡೆದುಕೊಂಡ ಮೇಲೆ ಅವರ ಜೀವನಕ್ಕೆ ಏನು? ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಸಿಗುವ ಭದ್ರತೆ, ಬೆಲೆ ಏನು? ಈ ಎಲ್ಲ ಅಂಶಗಳ ಬಗ್ಗೆ ಆಲೋಚಿಸಿದಾಗ ನಿರಾಶಾದಾಯಕ ಉತ್ತರವೇ ದೊರೆಯುತ್ತದೆ.

ರಾಜ್ಯದ 412 ಪದವಿ ಕಾಲೇಜುಗಳ ಪೈಕಿ ಶೇಕಡ 10 ಕಾಲೇಜುಗಳಲ್ಲಿ 100ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ, ಸಾತನೂರು, ಜವನಗೊಂಡನಹಳ್ಳಿ, ಪಡುವಲಹಿಪ್ಪೆ, ಯಾದಗಿರಿ, ಯಲಬುರ್ಗ ಸೇರಿ 42ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಕಡಿಮೆಯಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲೂ ಕಲಾ ವಿಭಾಗಕ್ಕೆ 50-60 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನೂರಾರು ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿರುವುದು, ಎಚ್ಚರಿಕೆಯ ಗಂಟೆಯೇ ಸರಿ. ಅಲ್ಲದೆ, ನೂರಾರು ಪ್ರಾಧ್ಯಾಪಕರು ಕೆಲಸ ಇಲ್ಲದೆ ಸಂಬಳ ಪಡೆದುಕೊಳ್ಳುವಂಥ ಸ್ಥಿತಿ ಸೃಷ್ಟಿಯಾಗಿರುವುದು ವಿಷಾದನೀಯ.

ಇತರೆ ವಿಭಾಗಗಳ ಮತ್ತು ಇನ್ನಿತರ ಪ್ರಮುಖ ಕೋರ್ಸ್​ಗಳ ಪಠ್ಯವನ್ನು ಕಾಲಕಾಲಕ್ಕೆ ಬದಲಾಯಿಸಿ, ಈಗಿನ ಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಅದರಿಂದ, ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ವಿದ್ಯಾರ್ಥಿಗಳು ತಯಾರಾಗುತ್ತಾರೆ. ಆದರೆ, ಕಲಾ ವಿಭಾಗದಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಕಲಾ ವಿಷಯಗಳ ಪಠ್ಯ ಪರಿಷ್ಕರಣೆ ಆಗಬೇಕು. ಅದು ಕಾಲಕಾಲಕ್ಕೆ ನಡೆಯುತ್ತಿಲ್ಲ. ಕಾಪೋರೇಟ್ ವಲಯದಲ್ಲೂ ಉದ್ಯೋಗಾವಕಾಶ ಸಿಗುವಂತೆ ಪಠ್ಯ ಅಳವಡಿಸಬೇಕೆಂಬ ಸಲಹೆ ಶಿಕ್ಷಣ ತಜ್ಞರಿಂದ ಬಂದಿದ್ದು, ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಲವಾರು ಖಾಸಗಿ ಕಾಲೇಜುಗಳು ಪದವಿ ಹಂತದಲ್ಲಿ ಕಲಾ ವಿಭಾಗದಲ್ಲೂ ವೃತ್ತಿ ಆಧಾರಿತ ಪಠ್ಯ ಅಳವಡಿಸಿದ್ದು, ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಕಲಾ ವಿಭಾಗವೂ ಜ್ಞಾನದ ಪ್ರಮುಖ ಶಾಖೆಯೇ. ಅದು ಕೂಡ ಮುಂದೆ ಅನ್ನ ನೀಡಬಲ್ಲದು. ಆದರೆ, ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಆಗದಿದ್ದರೆ ಈ ವಿಭಾಗದ ವಿದ್ಯಾರ್ಥಿಗಳು ಹಿಂದುಳಿದು ಬಿಡುತ್ತಾರೆ. ಪರಿಣಾಮ, ಉದ್ಯೋಗ ರಂಗದಲ್ಲಿ ಸ್ಪರ್ಧೆ ಮಾಡಲಾಗದೆ ಅಥವಾ ಅವಕಾಶಗಳು ಸಿಗದೆ ನಿರಾಶೆ ಅನುಭವಿಸಬೇಕಾಗುತ್ತದೆ. ಅಂಥ ಸ್ಥಿತಿ ಸೃಷ್ಟಿಯಾಗುವ ಮುನ್ನ ಸರ್ಕಾರ, ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಕಲಾ ವಿಭಾಗದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಕಾಲೇಜುಗಳನ್ನು, ಕಲಿಕಾರ್ಥಿಗಳ ಭವಿಷ್ಯವನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ರ್ಪÅಸುವಂತಾಗಲಿ.

Leave a Reply

Your email address will not be published. Required fields are marked *