ವಿಶ್ವಾಸಾರ್ಹತೆ ಉಳಿಯಲಿ

ದೇಶದ ಉನ್ನತ ತನಿಖಾ ಸಂಸ್ಥೆ ಎಂಬ ಹೆಗ್ಗಳಿಕೆಯ ಸಿಬಿಐನಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಗೊಂದಲಕಾರಿ ವಿದ್ಯಮಾನಗಳಿಗೆ ಕೊನೆಗೂ ಒಂದು ಮಟ್ಟಿನ ಅಂತ್ಯ ಸಿಕ್ಕಂತಾಗಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ವ ಅಧಿಕಾರಾವಧಿ ಜ.31ರವರೆಗೆ ಇತ್ತಾದರೂ, ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸುವ ನಿರ್ಣಯವನ್ನು ಪ್ರಧಾನಿ, ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕರನ್ನೊಳಗೊಂಡ ಆಯ್ಕೆ ಸಮಿತಿ ಗುರುವಾರ ಸಂಜೆ ಕೈಗೊಂಡಿದೆ. ನೂತನ ನಿರ್ದೇಶಕರು ಯಾರೆಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ನಡುವೆ, ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ಥಾನಾ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಕಟಿಸಲಿರುವ ತೀರ್ಪಿನ ಮೇಲೂ ಎಲ್ಲರ ಚಿತ್ತ ನೆಟ್ಟಿದೆ.

ಅಲೋಕ್ ವರ್ವ ಮತ್ತು ರಾಕೇಶ್ ಅಸ್ಥಾನಾ ನಡುವೆ ವಿವಾದದ ಕಿಡಿ ಹಬ್ಬಿದ್ದು, ಪರಸ್ಪರರ ವಿರುದ್ಧ ದೂರಿತ್ತಿದ್ದು, ನಂತರ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ಇಬ್ಬರನ್ನೂ ರಜೆ ಮೇಲೆ ಕಳುಹಿಸಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವರ್ವ ಪದಚ್ಯುತಿಯನ್ನು ಕೋರ್ಟ್ ರದ್ದುಪಡಿಸಿದ್ದು… ಇವೆಲ್ಲ ಈ ಪ್ರಸಂಗದ ಕೆಲ ಭಾಗಗಳು. ಪ್ರಮುಖ ಪ್ರಕರಣಗಳ ತನಿಖೆಯನ್ನು ರ್ತಾಕ ಅಂತ್ಯಕ್ಕೆ ತಂದು (ಇದರಲ್ಲಿ ರಾಜಕೀಯ ಮಹತ್ವದ ಪ್ರಕರಣಗಳೂ ಇರುತ್ತವೆ) ಸಂಬಂಧಪಟ್ಟವರಿಗೆ ನ್ಯಾಯ ಒದಗಿಸಬೇಕಾದ ಮಹತ್ತರ ಜವಾಬ್ದಾರಿ ಇರುವ ಸಿಬಿಐನಲ್ಲೇ ಆಂತರಿಕ ಜಗಳ ತಾರಕ್ಕಕೇರಿದ್ದು ಸರ್ಕಾರವನ್ನು ಮಾತ್ರವಲ್ಲ, ನ್ಯಾಯ-ಸಾಮಾಜಿಕ ಆರೋಗ್ಯದ ಬಗ್ಗೆ ಕಾಳಜಿ ಇರುವವರೆಲ್ಲರಿಗೂ ಆಘಾತ ತಂದಿತ್ತು ಮತ್ತು ಕಳವಳ ಉಂಟುಮಾಡಿತ್ತು. ಇದಲ್ಲದೆ, ಈ ಹಿಂದೆ ಸವೋಚ್ಚ ನ್ಯಾಯಾಲಯವೇ ಒಂದು ಸಂದರ್ಭದಲ್ಲಿ ಸಿಬಿಐಯನ್ನು ‘ಪಂಜರದ ಗಿಳಿ’ ಎಂಬುದಾಗಿ ಹೇಳಿತ್ತು. ಅದೂ ಅಲ್ಲದೆ, ಕೆಲ ಪ್ರಕರಣಗಳಲ್ಲಿ ತನಿಖೆಯನ್ನು ರ್ತಾಕ ಅಂತ್ಯಕ್ಕೆ ಒಯ್ಯಲು ಸಿಬಿಐಗೆ ಸಾಧ್ಯವಾಗಿರಲಿಲ್ಲ. ಇದರ ಜತೆಗೆ, ಭೂಗತ ಪಾತಕಿ ಸೊಹ್ರಾಬುದ್ದೀನ್ ಎನ್​ಕೌಂಟರ್ ಪ್ರಕರಣದ ತನಿಖೆಯಲ್ಲಿ ಸಿಬಿಐ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೂರ್ವಸಿದ್ಧಾಂತಕ್ಕೆ ಅನುಗುಣವಾಗಿ ವರ್ತಿಸಿದ ಬಗ್ಗೆ ಖುದ್ದು ವಿಚಾರಣಾ ನ್ಯಾಯಾಲಯವೇ ಉಲ್ಲೇಖಿಸಿತ್ತು.

ಈ ಎಲ್ಲದರಿಂದಾಗಿ ಸಿಬಿಐ ವಿಶ್ವಾಸಾರ್ಹತೆಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿದ್ದು ಸುಳ್ಳಲ್ಲ. ಹಾಗಂತ ಸಿಬಿಐ ಅಧಿಕಾರಿಗಳ ವೃತ್ತಿಪರತೆಯ ಬಗ್ಗೆಯೇ ಸಂಶಯಿಸಬೇಕಾದ ಅಗತ್ಯವಿಲ್ಲ. ಆದರೆ ರಾಜಕೀಯ ಒತ್ತಡ ಮುಂತಾದ ಕಾರಣಗಳಿಂದಾಗಿ ಕೆಲವೊಮ್ಮೆ ಅಪಸವ್ಯಗಳು ಉಂಟಾಗುತ್ತವೆ. ಸಿಬಿಐನಲ್ಲಿ ಈಚೆಗೆ ಉಂಟಾದ ಬೆಳವಣಿಗೆಗಳನ್ನು ಒಂದು ಪಾಠವಾಗಿ ಪರಿಗಣಿಸಿ ಮುಂದೆ ಇಂಥ ಸನ್ನಿವೇಶ ಮರುಕಳಿಸದಂತೆ ಸರ್ಕಾರಗಳು ಮುನ್ನೆಚ್ಚರಿಕೆ ವಹಿಸಲಿ; ಸಿಬಿಐ ಕಾಯಕಲ್ಪಕ್ಕೆ ಇದನ್ನೊಂದು ಸಂದರ್ಭವನ್ನಾಗಿ ಬಳಸಿಕೊಳ್ಳಲಿ ಎಂಬುದು ಜನರ ಆಶಯ. ಏಕೆಂದರೆ, ತನಿಖಾ ಸಂಸ್ಥೆಗಳ ಮೇಲೇ ಸಂಶಯ ಉಂಟಾಗುವುದು ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಬೆಳವಣಿಗೆ ಅಲ್ಲ. ಸಿಬಿಐ ಅಧಿಕಾರಿಗಳು ಕೂಡ ಸಂಸ್ಥೆಯ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Leave a Reply

Your email address will not be published. Required fields are marked *