ಮುಷ್ಕರದಿಂದಾದ ಲಾಭವೇನು?

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮಲ್ಲಿ ಪ್ರತಿಭಟನೆ, ಹೋರಾಟಕ್ಕೆ ಅವಕಾಶ ಇದ್ದೇಇದೆ. ಗಂಭೀರ ವಿಷಯ, ಬೇಡಿಕೆಗಳನ್ನು ಇರಿಸಿಕೊಂಡು ಮಾಡುವ ಹೋರಾಟಗಳಿಗೆ ಸ್ಪಂದನೆಯೂ ದೊರಕುತ್ತದೆ. ಮಹಾರಾಷ್ಟ್ರದಲ್ಲಿ ಸಾವಿರಾರು ರೈತರು ಶಾಂತಿಯುತವಾಗಿಯೇ ಪ್ರತಿಭಟಿಸಿ, ಬೇಡಿಕೆಗಳನ್ನು ತಿಳಿಸಿದಾಗ ಅಲ್ಲಿನ ಸರ್ಕಾರ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತು ಎಂಬುದು ಗೊತ್ತಿರುವಂಥದ್ದೇ. ಆದರೆ, ಹೊಸವರ್ಷದ ಆರಂಭದಲ್ಲೇ ಜನವರಿ 8 ಮತ್ತು 9ರಂದು ಹಲವು ಕಾರ್ವಿುಕ ಸಂಘಟನೆಗಳು ಸೇರಿ 02ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದು, ಅದರಿಂದಾದ ಪರಿಣಾಮವೇನೆಂಬುದರ ಅವಲೋಕನ ಸೂಕ್ತ.

ಯಾವ ಪ್ರಮುಖ ಬೇಡಿಕೆಗಳನ್ನು ಮುಂದೆ ಇರಿಸಬೇಕು, ಯಾವ ರೀತಿ ಸರ್ಕಾರದ ಗಮನ ಸೆಳೆಯಬೇಕು ಎಂಬ ಮುಖ್ಯ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಂಥ ಮುಷ್ಕರ ನಡೆಸಲಾಯಿತೆ ಎಂಬ ಅನುಮಾನ ಮೂಡಿರುವುದು ಸುಳ್ಳಲ್ಲ. ಒಂದು ಸಂಘಟನೆ ಕೆಲ ಬೇಡಿಕೆಗಳನ್ನು ಮುಂದಿಟ್ಟರೆ, ಮತ್ತೊಂದು ಸಂಘಟನೆ ಮಗದೊಂದು ಆಗ್ರಹ ಮಂಡಿಸಿತು. ಹೀಗಾಗಿ ಮುಷ್ಕರ ಚೆದುರಿದ ಚಿತ್ರದಂತಾಗಿ,ಕೇಂದ್ರಬಿಂದು ಸಿಗದಂತಾಯಿತು.

ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಎಷ್ಟೋ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿತ್ತು. ಪರೀಕ್ಷೆಗಳು ಸಮೀಪಿಸುತ್ತಿದ್ದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಜೆ ನೀಡುವ ಅನಿವಾರ್ಯತೆ ಸೃಷ್ಟಿಯಾಯಿತು. ಆದರೆ, ಇದರಿಂದ ಜನರಿಗೆ ಲಾಭವಾಗುವುದಂತೂ ದೂರದ ಮಾತು, ಶ್ರೀಸಾಮಾನ್ಯರು ಮತ್ತಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಪರಊರುಗಳಿಗೆ ತೆರಳಬೇಕಿದ್ದವರು, ಬೇರೆ ಕಡೆಗಳಿಂದ ಬಂದವರು ಪರದಾಡುವ ಸ್ಥಿತಿ ಉದ್ಭವಿಸಿತು. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಯಿತು. ರಾಷ್ಟ್ರವ್ಯಾಪಿ ಮುಷ್ಕರದ ಹೊತ್ತಲ್ಲಿ ಹೋರಾಟಗಾರರ ಏಕದನಿ ಕೇಳಲಿಲ್ಲ, ಪರಿಣಾಮ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದು ಗಮನಾರ್ಹ.

ಪದೇಪದೆ ಬಂದ್, ಹರತಾಳಗಳಿಗೆ ಕರೆ ನೀಡುವಂಥ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕೂಡ ಕಡಿವಾಣ ಹೇರಿದೆ. ಬಂದ್-ಮುಷ್ಕರಗಳಿಂದ ಆಗುವ ಸಾಮಾಜಿಕ ಅನನುಕೂಲಗಳನ್ನು ಅವಲೋಕಿಸಿಯೇ ನ್ಯಾಯಾಲಯ ಈ ಸೂಚನೆ ನೀಡಿತಲ್ಲದೆ, ಇಂಥ ಸಂಘಟನೆಗಳ ಕಿವಿಯನ್ನು ಹಿಂಡಿತು. ಹೋರಾಟದಲ್ಲಿ ಸ್ಪಷ್ಟತೆ, ಬೇಡಿಕೆಗಳಿಗೆ ಜನಸ್ಪಂದನ ಇಲ್ಲದೆಯೆ ಮುಷ್ಕರಕ್ಕೆ ಕರೆ ನೀಡಿದರೆ ಅದರಿಂದ ನಿರೀಕ್ಷಿತ ಪರಿಣಾಮ ಕಾಣಲು ಸಾಧ್ಯವಿಲ್ಲ ಎಂಬುದು ಈ ಎರಡು ದಿನಗಳ ಮುಷ್ಕರದಿಂದ ಸಾಬೀತಾಗಿದೆ. ಸರ್ಕಾರ ಈ ಹೋರಾಟಕ್ಕೆ ಸ್ಪಂದನೆ ನೀಡುವ ಗೋಜಿಗೂ ಹೋಗಿಲ್ಲ. ಅಂದ ಮೇಲೆ, ಮುಷ್ಕರದಿಂದ ಆದ ಲಾಭವಾದರೂ ಏನು ಎಂಬುದನ್ನು ಹೋರಾಟಗಾರರೇ ಅವಲೋಕಿಸಿಕೊಳ್ಳಲಿ.

ಜನಹಿತ ಹೊಂದಿರುವ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಲು ಅನೇಕ ಪರಿಣಾಮಕಾರಿ ಮಾರ್ಗಗಳೂ ಇವೆ. ಪ್ರತಿ ಬಾರಿಯೂ, ಪ್ರತಿ ಬೇಡಿಕೆಗೂ ಬಂದ್/ಮುಷ್ಕರದ ಮೊರೆ ಹೋಗುವ ಪ್ರವೃತ್ತಿ ಸೂಕ್ತವಾದದ್ದಲ್ಲ. ‘ಇಂಥದ್ದನ್ನು ಸಹಿಸಿಕೊಳ್ಳುವುದಿಲ್ಲ’ ಎಂಬ ಸಂದೇಶವನ್ನು ಈ ಬಾರಿ ಜನತೆಯೇ ನೀಡಿರುವುದು ಗಮನಾರ್ಹ. ಇದರರ್ಥ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ, ಪ್ರತಿಭಟನೆ ಮಾಡುವ ಹಕ್ಕನ್ನು ಸಂಘಟನೆಗಳು ಕೈಬಿಡಬೇಕು ಎಂದಲ್ಲ. ಆದರೆ ಹೋರಾಟಕ್ಕೆ ಜನಬೆಂಬಲವನ್ನು ದಕ್ಕಿಸಿಕೊಳ್ಳುವ ಮತ್ತು ಆ ಹೋರಾಟಕ್ಕೆ ಸರ್ಕಾರದಿಂದ ಪ್ರತಿಸ್ಪಂದನೆ ಸಿಗುವ ನಿಟ್ಟಿನಲ್ಲಿ ಏನಾಗಬೇಕು ಎಂಬುದರತ್ತ ನೌಕರರ ಸಂಘಟನೆಗಳು ಗಮನ ಹರಿಸಬೇಕು.