ಜನರಿಗೆ ಅನುಕೂಲ ಲಭಿಸಲಿ

ನಸಾಮಾನ್ಯರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ, ಎಂಬುದೇನೋ ನಿಜ. ಆದರೆ, ಹಲವು ಗೊಂದಲಗಳು, ದೀರ್ಘ ಪ್ರಕ್ರಿಯೆ, ಅಲೆದಾಟ ಹೀಗೆ ಹತ್ತುಹಲವು ಅಪಸವ್ಯಗಳ ಪರಿಣಾಮ ಇಂಥ ಯೋಜನೆಗಳು ಮುಗ್ಗರಿಸುವುದಲ್ಲದೆ, ಫಲಾನುಭವಿಗಳು ಕಡುಕಷ್ಟ ಪಡುವಂತಾಗುತ್ತದೆ. ಅಲ್ಲದೆ, ಇದರಿಂದ ಯೋಜನೆಯ ಮೂಲೋದ್ದೇಶವೂ ಮೂಲೆ ಸೇರುತ್ತದೆ ಎಂಬುದು ಕಠೋರಸತ್ಯ. ರಾಜ್ಯದಲ್ಲಿ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಈ ಎರಡೂ ಯೋಜನೆಗಳನ್ನು ವಿಲೀನಗೊಳಿಸಿ, ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತಾದರೂ ಹಲವು ಅಡೆತಡೆಗಳು ಎದುರಾದವು. ಇಡೀ ಯೋಜನೆಗೆ ಸಮಗ್ರ ಕಾಯಕಲ್ಪ ನೀಡಿ, ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂಬ ಆಗ್ರಹ ಬಲುಜೋರಾಗಿಯೇ ಕೇಳಿಬರುತ್ತಿತ್ತು. ಕಡೆಗೂ, ಈ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಹಲವು ಸುಧಾರಣಾಕ್ರಮಗಳಿಗೆ ಮುಂದಾಗಿರುವುದು ಸಕಾಲಿಕ ಮತ್ತು ಸೂಕ್ತನಡೆಯಾಗಿದೆ.

ರಾಜ್ಯದ 1.32 ಕೋಟಿ ಕುಟುಂಬಗಳ 4.50 ಕೋಟಿ ಜನರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು ಪಡೆಯುವುದು ಕಡ್ಡಾಯವಾಗಿತ್ತು, ಇದಕ್ಕಾಗಿ ಯೋಜನೆಯ ಫಲಾನುಭವಿಗಳು ಹಲವು ಬಾರಿ ಆಸ್ಪತ್ರೆಗೆ ಎಡತಾಕಬೇಕಾಗುತ್ತಿತ್ತು. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ಇನ್ಮುಂದೆ ಆನ್​ಲೈನ್​ನಲ್ಲೇ ನೀಡಲು ನಿರ್ಧರಿಸಲಾಗಿದೆ. ಇದರಿಂದ ಶ್ರಮ, ಸಮಯ ಎರಡರ ಉಳಿತಾಯವೂ ಆಗಲಿದೆ. ಮುಖ್ಯವಾಗಿ, ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್​ಗಳೇ ಸಿಗುತ್ತಿಲ್ಲ ಎಂಬ ಬಡವರ ಅಳಲಿಗೆ ಸ್ಪಂದಿಸಿರುವ ಸರ್ಕಾರ ಆಸ್ಪತ್ರೆಗಳ ಜತೆಗೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್​ಗಳಲ್ಲೂ ಕಾರ್ಡ್ ವಿತರಿಸಲು ಮುಂದಾಗಿದೆ, ಈ ನಿಟ್ಟಿನಲ್ಲಿ ಕೌಂಟರ್​ಗಳ ಸಂಖ್ಯೆಯನ್ನೂ ಹೆಚ್ಚಿಸಲಿದೆ.

ಯೋಜನೆಯಡಿ ಬಿಪಿಎಲ್ ಕಾರ್ಡದಾರರು 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡದಾರರು 1.50 ಲಕ್ಷ ರೂ.ವರೆಗೆ ನಗದುರಹಿತ ಉಚಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಆರೋಗ್ಯ ಕರ್ನಾಟಕದಡಿ 1,528 ಚಿಕಿತ್ಸೆಗಳನ್ನು ಗುರುತಿಸಲಾಗಿತ್ತು. ಆಯುಷ್ಮಾನ್ ಭಾರತ ಯೋಜನೆ ವಿಲೀನದ ನಂತರ 96 ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದ್ದು, ಒಟ್ಟು 1,614 ಚಿಕಿತ್ಸೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬುದು ಗಮನಾರ್ಹ.

ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ದಿನನಿತ್ಯದ ಖರ್ಚುವೆಚ್ಚಗಳನ್ನು ದೂಗಿಸಿ ಜೀವನ ಸಾಗಿಸುವುದೇ ದುಸ್ತರವಾಗಿದೆ. ಇಂಥದ್ದರಲ್ಲಿ ವೈದ್ಯಕೀಯ ಖರ್ಚುಗಳು ಎರಗಿಬಿಟ್ಟರೆ ಅಂಥ ಕುಟುಂಬಗಳ ಸ್ಥಿತಿ ಶೋಚನೀಯವಾಗಿ ಬಿಡುತ್ತದೆ. ಆರೋಗ್ಯ ಯೋಜನೆಗಳು ಆಗ ವರದಾನವಾಗಿ ಪರಿಣಮಿಸಬಹುದಾದರೂ, ಅಂಥ ಯೋಜನೆಗಳು ಗೊಂದಲ, ದೋಷಗಳಿಂದ ಹೊರತಾಗಿರಬೇಕು. ಸೂಕ್ತ ಸ್ಪಂದನೆ, ಶೀಘ್ರ ಚಿಕಿತ್ಸೆ ಪ್ರಮುಖ ಮಾನದಂಡವಾಗಬೇಕು. ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಆಶಯ ಉತ್ತಮವಾಗಿದ್ದು, ಅದರ ಅನುಷ್ಠಾನ ಸೂಕ್ತವಾಗಿ ಆಗಬೇಕು. ಕಾಲಕಾಲಕ್ಕೆ ಕಂಡುಬರುವ ದೋಷಗಳನ್ನು ಕೂಡಲೇ ನಿವಾರಿಸಿಕೊಂಡರೆ, ಚಿಕಿತ್ಸೆ ಸುಲಭದಲ್ಲಿ ಸಿಗಲು ನೆರವಾಗುತ್ತದೆ. ಈಗ ಅಂಥ ಹೆಜ್ಜೆ ಇರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಜನಸಾಮಾನ್ಯರ ಹಿತ ಕಾಪಾಡಲಿ ಎಂಬುದೇ ಆಶಯ.

Leave a Reply

Your email address will not be published. Required fields are marked *