ಆರ್ಥಿಕತೆಗೆ ಉತ್ತೇಜನ ಸಿಗಲಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ಒಂದು ಮಟ್ಟದ ಸಂಚಲನೆಯನ್ನೂ ಅಚ್ಚರಿಯನ್ನೂ ಹುಟ್ಟುಹಾಕಿದ್ದು ದಿಟ. ಆದರೆ ಈ ವಿದ್ಯಮಾನದಿಂದ ವಿಚಲಿತಗೊಳ್ಳದ ಕೇಂದ್ರ ಸರ್ಕಾರ ವಿಳಂಬ ಧೋರಣೆ ತಳೆಯದೆ, ಶಕ್ತಿಕಾಂತ್ ದಾಸ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದೆ. ಗವರ್ನರ್ ಹುದ್ದೆಯನ್ನು ಹೆಚ್ಚುದಿನಗಳ ಕಾಲ ಖಾಲಿ ಉಳಿಸದೆ ಹೀಗೆ ಕೂಡಲೆ ಭರ್ತಿಮಾಡಿರುವುದು ಸ್ವಾಗತಾರ್ಹ ಕ್ರಮವೇ ಸರಿ. ಏಕೆಂದರೆ, ಕೆಲವೇ ದಿನಗಳಲ್ಲಿ ಆರ್​ಬಿಐ ನಿರ್ದೇಶಕರ ಮಂಡಳಿ ಸಭೆ ನಡೆಯಲಿದ್ದು, ಆರ್ಥಿಕತೆ ಸುಧಾರಣೆ ಸೇರಿದಂತೆ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರಲಿಕ್ಕಿದೆ.

ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವೆ ಹಲವು ಪ್ರಮುಖ ವಿಷಯಗಳ ಕುರಿತಾಗಿ ಭಿನ್ನಾಭಿಪ್ರಾಯ ಭುಗಿಲೆದ್ದು ತಾರಕಕ್ಕೇರಿ, ಕೊನೆಗೆ ಆರ್​ಬಿಐ ಕಾಯ್ದೆಯ ಪರಿಚ್ಛೇದ 7ರ ಅನುಸಾರ ಸರ್ಕಾರ ಆರ್​ಬಿಐಗೆ ಒಂದಷ್ಟು ಸೂಚನೆಗಳನ್ನು ನೀಡಿದ್ದು, ಅದು ಈ ಎರಡೂ ಅಸ್ತಿತ್ವಗಳ ನಡುವಿನ ಕಂದಕ ಮತ್ತಷ್ಟು ಅಗಲವಾಗಲು ಕಾರಣವಾಗಿದ್ದು ಗೊತ್ತಿರುವಂಥದ್ದೇ. ಈಗಲೂ ಕದಡಿದ ನೀರಿನ್ನೂ ತಿಳಿಯಾಗಿಲ್ಲ; ಜಿಡಿಪಿ ಇಳಿಕೆಯಾಗಿರುವುದು, 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದು ಸೇರಿದಂತೆ ಹಲವು ಸವಾಲು-ಸಮಸ್ಯೆಗಳು ಎದುರಿವೆ. ರಾಜಸ್ಥಾನ, ಮಿಜೋರಾಂ, ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್​ಗಢ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ವ್ಯಕ್ತವಾಗಿರುವ ಫಲಿತಾಂಶ ಬಿಜೆಪಿ ಪಾಲಿಗೆ ವ್ಯತಿರಿಕ್ತವಾಗಿದ್ದು, ದಿನಗಳೆದಂತೆ ಸರ್ಕಾರದ ಸಮ್ಮುಖದಲ್ಲಿ ಹತ್ತು ಹಲವು ಒತ್ತಡಗಳನ್ನೂ ದುರ್ಭರ ಸಂದರ್ಭಗಳನ್ನೂ ಗುಡ್ಡೆಹಾಕುವ ಸಾಧ್ಯತೆಗಳಿವೆ. ಹೀಗಾಗಿ ಮುಂಬರುವ ದಿನಗಳ ಕುರಿತಾಗಿ ರಾಜಕೀಯ ವಿಶ್ಲೇಷಕರಲ್ಲಿ ಕುತೂಹಲ ಮಡುಗಟ್ಟಿರುವುದಂತೂ ದಿಟ.

ಇನ್ನು ಆರ್​ಬಿಐನ ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸರ್ಕಾರದಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಷ್ಟೇ ಅಲ್ಲದೆ, ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಆ ಪ್ರಯೋಗ ಯಶಸ್ವಿಯಾಗುವಂತಾಗುವುದಕ್ಕೆ ಸಾಕಷ್ಟು ಶ್ರಮವಹಿಸಿದವರೆಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಅವರಿಗೆ ಆಡಳಿತಾತ್ಮಕ ಸವಾಲುಗಳ ಮತ್ತು ಸರ್ಕಾರವೊಂದರಲ್ಲಿನ ಒಳಸುಳಿಗಳ ಪ್ರತ್ಯಕ್ಷ ಗ್ರಹಿಕೆಯಿದೆ. ಈ ಅನುಭವ ಮತ್ತು ಕಾರ್ಯದಕ್ಷತೆ ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಯ ಬಲವರ್ಧನೆಯ ನಿಟ್ಟಿನಲ್ಲಿ ಸಹಕಾರಿಯಾಗಲಿ ಎಂಬುದು ಪ್ರಜ್ಞಾವಂತರ ಆಶಯ ಮತ್ತು ನಿರೀಕ್ಷೆ. ಮುಖ್ಯವಾಗಿ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವೆ ಪ್ರಸ್ತುತ ಅಭಿಪ್ರಾಯಭೇದಗಳೇನೇ ಇರಲಿ, ಅವನ್ನು ಉಭಯ ಪಕ್ಷಸ್ಥರಿಗೂ ಸಮ್ಮತವಾಗುವ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕಿರುವುದು ಈ ಕ್ಷಣದ ಅನಿವಾರ್ಯತೆಯಾಗಿದೆ. ತಂತಮ್ಮ ಅಹಮಿಕೆಯ ನೆರವೇರಿಕೆಗಿಂತ, ಜನಸಾಮಾನ್ಯರ ಕಲ್ಯಾಣಕ್ಕೆ ಗಮನ ಕೊಡುವುದು ಮತ್ತು ದೇಶದ ಆರ್ಥಿಕತೆಯಲ್ಲಿ ಏರುಗತಿಯನ್ನು ಕಾಯ್ದುಕೊಳ್ಳುವುದು ಮುಖ್ಯ ಎಂಬ ವಾಸ್ತವವನ್ನು ಸರ್ಕಾರ ಮತ್ತು ಆರ್​ಬಿಐ ಮನಗಂಡು, ಹಿತಾಸಕ್ತಿಯ ಘರ್ಷಣೆಗೆ ಯಾವುದೇ ರೀತಿಯಲ್ಲಿ ಆಸ್ಪದ ಕೊಡದೆ ಹೊಂದಾಣಿಕೆಯ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕಿದೆ. ಇದರ ನೆರವೇರಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿ ಎಂಬುದೇ ಬಹುಜನರ ಹಾರೈಕೆ.

Leave a Reply

Your email address will not be published. Required fields are marked *