ಪಂಚ ಫಲಿತಾಂಶದ ಪಾಠ

ಮಂಗಳವಾರ (ಡಿ.11) ಪ್ರಕಟಗೊಂಡ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಮತ್ತು ಮಿಜೋರಾಂ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು, ಕಾಂಗ್ರೆಸ್ ಮತ್ತು ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶವನ್ನೇ ಕೊಟ್ಟಿವೆ ಎನ್ನಲಡ್ಡಿಯಿಲ್ಲ. ಮಿಜೋರಾಂನಂಥ ಸಣ್ಣರಾಜ್ಯದಲ್ಲಿ ಕಾಂಗ್ರೆಸ್, ಛತ್ತೀಸ್​ಗಢ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದು, ಹಸಿಮಣ್ಣಿನ ಮೇಲೆ ಗಾಜಿನ ಚೂರಿನಿಂದ ಬರೆದಷ್ಟೇ ನಿಚ್ಚಳವಾಗಿರುವ ಸಂದೇಶವಾಗಿವೆ. ಶ್ರೀಸಾಮಾನ್ಯರು ಸರ್ಕಾರದ ರೀತಿ-ನೀತಿಗಳನ್ನು, ಕಾರ್ಯಸಾಧನೆಗಳನ್ನು ಪರಾಮಶಿಸುತ್ತಾರೆ ಮತ್ತು ಅದರ ಆಧಾರದ ಮೇಲೆಯೇ ತಮ್ಮಾಯ್ಕೆಯ ಅಭ್ಯರ್ಥಿ/ಪಕ್ಷಕ್ಕೆ ಮತ ಹಾಕುತ್ತಾರೆ ಎಂಬುದು ಈ ಫಲಿತಾಂಶಗಳ ಮೂಲಕ ಮತ್ತೊಮ್ಮೆ ಸಾಬೀತಾದಂತಾಗಿದೆ. ಮಧ್ಯಪ್ರದೇಶದ ಫಲಿತಾಂಶ ಮಾತ್ರ ಸಂಜೆವರೆಗೂ ಕುತೂಹಲ ಮೂಡಿಸಿತ್ತು.

ಸದರಿ ಚುನಾವಣೆಗಳು ನಡೆದಿರುವ ಕಾಲಘಟ್ಟದಿಂದಾಗಿಯೇ ಅವಕ್ಕೆ ಇನ್ನಿಲ್ಲದ ಮಹತ್ವ ಬಂದಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ, ಈ ಪಂಚರಾಜ್ಯ ಚುನಾವಣೆಗಳು ‘ಉಪಾಂತ್ಯ ಪಂದ್ಯ’ಗಳಾಗಿ ರಾಜಕೀಯ ಪಡಸಾಲೆಗಳಲ್ಲಿ ಪರಿಗಣಿತವಾಗಿದ್ದುದು ದಿಟ. ಪ್ರಸ್ತುತ ಹೊಮ್ಮಿರುವ ಫಲಿತಾಂಶಗಳು ಕೇಂದ್ರ ಸರ್ಕಾರದ ಮೇಲೆ ಯಾವ ಮಟ್ಟಿಗಿನ ಪರಿಣಾಮ ಬೀರಬಹುದು ಹಾಗೂ ಯಾವೆಲ್ಲ ಹೊಸ ಸಮರತಂತ್ರಗಳಿಗೆ ಮುನ್ನುಡಿ ಬರೆಯಬಹುದು ಎಂಬುದು ಕಾದುನೋಡಬೇಕಾದ ಸಂಗತಿ. ಆದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಭಿನ್ನ ಕನ್ನಡಕಗಳ ಮೂಲಕ ನೋಡುವಂಥ ಚಿತ್ತಸ್ಥಿತಿ ದೇಶದ ಮತದಾರರಲ್ಲಿ ಬೇರೂರಿದೆ ಎಂಬುದೂ ತಳ್ಳಿಹಾಕಲಾಗದ ಅಂಶವೇ. ಕಾರಣ, ಒಂದೇ ಕಾಲಘಟ್ಟದಲ್ಲಿ ಲೋಕಸಭೆಗೆ ಮತ್ತು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಂಥ ಸಂದರ್ಭಗಳಲ್ಲಿ, ರಾಜ್ಯದಲ್ಲಿ ಒಂದು ಪಕ್ಷಕ್ಕೆ ಮಣೆಹಾಕಿದ ಮತದಾರರೇ, ಕೇಂದ್ರ ಗದ್ದುಗೆಯ ವಿಷಯ ಬಂದಾಗ ಮತ್ತೊಂದು ಪಕ್ಷ/ಒಕ್ಕೂಟಕ್ಕೆ ‘ಉಘೇ’ ಎಂದಿರುವ ನಿದರ್ಶನಗಳಿವೆ. ಹೀಗಾಗಿ, ಪಂಚರಾಜ್ಯ ಫಲಿತಾಂಶವನ್ನು ಒಂದು ‘ಟ್ರೆಂಡ್’ ಎಂದಿಟ್ಟುಕೊಳ್ಳಬಹುದೇ ವಿನಾ, ‘ನಿರ್ಣಾಯಕ’ ಎನ್ನಲಾಗದು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಮತ್ತೊಮ್ಮೆ ಟಿಆರ್​ಎಸ್ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಗದ್ದುಗೆಯೇರಿದ್ದು, ಅಲ್ಲಿ ಆಡಳಿತವಿರೋಧಿ ಅಲೆ ಕಂಡುಬಂದಿಲ್ಲ ಎನ್ನಬಹುದು. ಮಿಕ್ಕ ರಾಜ್ಯಗಳ ಫಲಿತಾಂಶಗಳನ್ನು ಅವಲೋಕಿಸಿದರೆ, ಅಭಿವೃದ್ಧಿ ಮತ್ತು ಜನಕಲ್ಯಾಣದ ವಿಷಯದಲ್ಲಿ ಜನರ ಕೈಗೆಟುಕಬೇಕಿರುವ ತಥಾಕಥಿತ ಜನನಾಯಕರು ‘ವ್ಯಾಪ್ತಿ ಪ್ರದೇಶದಾಚೆ’ ಉಳಿದುಬಿಟ್ಟರೆ ಒದಗುವ ಪರಿಣಾಮ ಏನಾಗುತ್ತದೆ ಎಂಬುದನ್ನು ಕೂಡ ಈ ಫಲಿತಾಂಶಗಳು ದರ್ಶಿಸಿವೆ. ಒಗರನ್ನೂ, ಸಿಹಿಯನ್ನೂ ಅವು ಹಂಚಿರುವ ಕಾರಣದಿಂದಾಗಿ ಯಾವ ರಾಜಕೀಯ ಪಕ್ಷವೂ ಅತಿರೇಕವಾಗಿ ಹಿಗ್ಗುವ ಅಥವಾ ಕುಗ್ಗುವ ಸಂದರ್ಭ ಇದಲ್ಲ; ಬದಲಿಗೆ ಇದೊಂದು ಮಹತ್ತರ ಪಾಠ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರಬಿಂದುವಾಗಿರುವ ಮತದಾರರನ್ನು ಹಾಗೂ ಅವರ ಆಶೋತ್ತರಗಳನ್ನು ನಿರ್ಲಕ್ಷಿಸಿ ಸ್ವಹಿತಾಸಕ್ತಿಯ ನೆರವೇರಿಕೆಯಲ್ಲೇ ಸಮಯ ಹಾಳುಮಾಡುವುದು ಯಾವ ರಾಜಕೀಯ ಪಕ್ಷದ, ಅದರ ಪ್ರತಿನಿಧಿಗಳ ಕಾರ್ಯಸೂಚಿ ಆಗಬಾರದು; ಹಾಗಾದಲ್ಲಿ ವ್ಯತಿರಿಕ್ತ ಫಲಿತಾಂಶ ಕಟ್ಟಿಟ್ಟಬುತ್ತಿ. ಆದ್ದರಿಂದ ತಾವು ಎಡವಿರುವುದೆಲ್ಲಿ ಎಂಬ ವಿಷಯದ ಕುರಿತಾಗಿ ಎಲ್ಲ ರಾಜಕೀಯ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಂಡು ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಈ ಸಂದರ್ಭ ಒಂದು ದಿಕ್ಸೂಚಿಯಾಗಲಿ.

Leave a Reply

Your email address will not be published. Required fields are marked *