ತಪ್ಪೊಪ್ಪಿಗೆಯಷ್ಟೆ ಸಾಲದು

ಪಾಕಿಸ್ತಾನಕ್ಕೆ ಕೊನೆಗೂ ಜ್ಞಾನೋದಯವಾದಂತಿದೆ. 26/11ರ ಮುಂಬೈ ದಾಳಿ ಪ್ರಕರಣದ ಸಂಚುಹೂಡಿದ್ದು ‘ಲಷ್ಕರ್-ಎ-ತೊಯ್ಬಾ’ ಉಗ್ರ ಸಂಘಟನೆ ಎಂಬ ಕಹಿಸತ್ಯವನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ತಡವಾಗಿದ್ದರೂ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಲಡ್ಡಿಯಿಲ್ಲ.

ಮುಂಬೈ ದಾಳಿಯ ಹಿಂದೆ ಪಾಕ್ ಪ್ರಚೋದಿತ ಉಗ್ರರ ಕೈವಾಡವಿರುವುದನ್ನು ಭಾರತ ಬಹಳಷ್ಟು ಹಿಂದೆಯೇ ಕಂಠೋಕ್ತವಾಗಿ ಹೇಳಿದ್ದರೂ ಒಪ್ಪಲು ಬಿಗುಮಾನ ತೋರಿದ್ದ ಪಾಕ್, ಈ ಸಂಬಂಧದ ಸಾಕ್ಷಿ-ಪುರಾವೆಗಳನ್ನು ಒದಗಿಸುವಂತೆ ಕೇಳಿತ್ತು. ಅಂತೆಯೇ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಭಾರತ ಒದಗಿಸಿದಾಗ ವಸ್ತುನಿಷ್ಠ ತನಿಖೆ ಕೈಗೊಳ್ಳಲು ಪಾಕಿಸ್ತಾನ ಮೀನ-ಮೇಷ ಎಣಿಸುತ್ತಿದ್ದುದು, ಇಲ್ಲವೇ ಯಾವುದಾದರೊಂದು ನೆಪವೊಡ್ಡಿ ಅದನ್ನು ನಿರಾಕರಿಸುತ್ತಿದ್ದುದು, ಹೊಸಸಾಕ್ಷ್ಯ ಒದಗಿಸುವಂತೆ ಬೇಡಿಕೆ ಇಡುತ್ತಿದ್ದುದು ಮಾತ್ರವಲ್ಲದೆ, ದಾಳಿಯ ಸಂಚುಕೋರರು ತನ್ನ ನೆಲದಲ್ಲಿ ಬಿಡುಬೀಸಾಗಿ ಓಡಾಡಿಕೊಂಡಿರಲು ಅನುವುಮಾಡಿಕೊಟ್ಟಿತ್ತು ಎಂಬುದೀಗ ಬಹಿರಂಗ ಗುಟ್ಟು. ಆದರೆ ಈ ವಿಷಯದಲ್ಲಿ ಭಾರತದ ಪಟ್ಟು ಮತ್ತಷ್ಟು ಬಿಗಿಯಾಗುತ್ತ ಹೋದಂತೆ ಹಾಗೂ ಅಮೆರಿಕದಂಥ ಪ್ರಭಾವಿ ರಾಷ್ಟ್ರದಿಂದ ಒದಗುತ್ತಿದ್ದ ವಿವಿಧ ನೆಲೆಗಟ್ಟಿನ ಬೆಂಬಲಗಳಿಗೂ ಹಿನ್ನಡೆಯಾಗುತ್ತ ಹೋದಂತೆ, ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗಿ ಉಳಿಯುವಂತಾದ ಪಾಕ್, ಗತ್ಯಂತರವಿಲ್ಲದೆ ಈಗ ತಪು್ಪ ಒಪ್ಪಿಕೊಳ್ಳಬೇಕಾಗಿ ಬಂದಿದೆ. ಆದರೆ ಇಷ್ಟು ಮಾತ್ರಕ್ಕೆ ಎಲ್ಲವೂ ಇತ್ಯರ್ಥವಾಗುವುದಿಲ್ಲ. ಸಂಚುಕೋರರಲ್ಲಿ ಒಬ್ಬನೆನಿಸಿದ, ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಮುಖ ಉಗ್ರ ಝಾಕಿ-ಉರ್-ರೆಹಮಾನ್ ನಖ್ವಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಆದ್ದರಿಂದ, ಪಾಕ್ ತನ್ನ ‘ಮಾರ್ಜಾಲ ಸಂನ್ಯಾಸಿ’ ವರ್ತನೆಗೆ ತಿಲಾಂಜಲಿಯಿತ್ತು, ಮುಂಬೈ ದಾಳಿ ಸಂಚುಕೋರರಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಿದರೆ ಮಾತ್ರವೇ ಅದಕ್ಕೆ ಸ್ವೀಕಾರಾರ್ಹತೆ ದಕ್ಕುತ್ತದೆ.

ಪಾಕಿಸ್ತಾನದಿಂದ ಹೊಮ್ಮಿರುವ ಈ ‘ತಪ್ಪೊಪ್ಪಿಗೆ’ ಮುಂಬೈ ದಾಳಿಗಷ್ಟೇ ಸೀಮಿತವಾಗಬಾರದು; ಉಗ್ರವಾದದ ರಫ್ತಿನಲ್ಲಿ, ಉಗ್ರಗಾಮಿಗಳ ಪೋಷಣೆಯಲ್ಲಿ ಪಾಕ್ ಮುಂಚೂಣಿಯಲ್ಲಿದೆ ಎಂಬುದನ್ನು ಪುಷ್ಟೀಕರಿಸಲು ಹೇರಳ ನಿದರ್ಶನಗಳಿವೆ. ಇಂಥ ಕುತ್ಸಿತ ಚಿಂತನೆ ಮತ್ತು ಚಟುವಟಿಕೆಗಳಿಂದ ಹೆಚ್ಚು ತೊಂದರೆಯಾಗಿರುವುದು ಭಾರತಕ್ಕೇ ಎಂಬುದು ನಿರ್ವಿವಾದದ ಸಂಗತಿ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ಅರಾಜಕತೆ ಹುಟ್ಟುಹಾಕುವಲ್ಲಿ ಮತ್ತು ಉಗ್ರ ಸಂಘಟನೆಗಳಿಗೆ ಈ ನಿಟ್ಟಿನಲ್ಲಿ ಕುಮ್ಮಕ್ಕು ನೀಡುವಲ್ಲಿ ಪಾಕಿಸ್ತಾನದ ಕೊಡುಗೆ ಅಗಾಧವಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಇಷ್ಟೆಲ್ಲ ಹೀನ ಇತಿಹಾಸ ಹೊಂದಿರುವ ಪಾಕಿಸ್ತಾನಕ್ಕೆ ಉಗ್ರನಿಗ್ರಹದ ಆಶಯ ನಿಜಕ್ಕೂ ಇರುವುದೇ ಆದಲ್ಲಿ, ಭಾರತದ ಗಡಿಗಂಟಿಕೊಂಡಂತೆ ತನ್ನ ನೆಲದಲ್ಲಿ ಠಿಕಾಣಿ ಹೂಡಿರುವ ಭಯೋತ್ಪಾದಕರ ಶಿಬಿರಗಳನ್ನು ಮೊದಲು ತೆರವುಗೊಳಿಸಲಿ ಹಾಗೂ ಉಗ್ರರಿಗೆ ಶಿಕ್ಷೆ ವಿಧಿಸಲಿ. ಕಳೆದೊಂದು ವರ್ಷದಲ್ಲಿ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ 230 ಉಗ್ರರನ್ನು ಬೇಟೆಯಾಡಿದ್ದರೂ, ಬಹುತೇಕ ಅಷ್ಟೇ ಸಂಖ್ಯೆಯ ಉಗ್ರರು ಇನ್ನೂ ಕಾರ್ಯನಿರತರಾಗಿದ್ದಾರೆ ಎನ್ನಲಾಗಿದೆ. ಶತ್ರುರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲೆಂದು, ಪ್ರತ್ಯೇಕತಾವಾದದ ವಿಷಬೀಜ ಬಿತ್ತಲೆಂದು ತಾನು ನೀಡುತ್ತಿರುವ ಹಣ, ಆಶ್ರಯ ಸೇರಿದಂತೆ ಎಲ್ಲ ತೆರನಾದ ಬೆಂಬಲಗಳನ್ನೂ ಪಾಕ್ ನಿಲ್ಲಿಸಲಿ. ಇಂಥ ಉಪಕ್ರಮಗಳಿಗೆ ಮುಂದಾಗಿರುವುದರ ಕುರಿತು ಸ್ಪಷ್ಟ ಪುರಾವೆಗಳು ದಕ್ಕಿದಾಗ ಮಾತ್ರವೇ ಪಾಕಿಸ್ತಾನದ ತಪ್ಪೊಪ್ಪಿಗೆಗೂ ಒಂದು ಅರ್ಥ ಬರುತ್ತದೆ ಹಾಗೂ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಅದನ್ನು ನಂಬುವಂಥ ಭೂಮಿಕೆ ನಿರ್ವಣವಾಗುತ್ತದೆ.

Leave a Reply

Your email address will not be published. Required fields are marked *